ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಗುರುವಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕವನ್ನು ಮಂಡಿಸಿದ್ದು, ಅಸಾದುದ್ದೀನ್ ಓವೈಸಿ, ಕಾಂಗ್ರೆಸ್, ಟಿಎಂಸಿ, ಆರ್ ಜೆಡಿ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.
ತ್ರಿವಳಿ ತಲಾಕ್ ಮಸೂದೆ ಎಂದು ತಿಳಿಯಲ್ಪಟ್ಟಿರುವ ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಅಂತರ ಸಚಿವಾಲಯ ಸಮೂಹವು ಸಿದ್ಧಪಡಿಸಿತ್ತು. ಈ ಮಸೂದೆಯು ಯಾವುದೇ ರೂಪದಲ್ಲಿ ನೀಡಲ್ಪಡುವ ತ್ರಿವಳಿ ತಲಾಕ್ ಅಥವಾ ತಲಾಕ್ ಎ ಬಿದ್ದತ್ ಅನ್ನು ಕಾನೂನು ಬಾಹಿರ ಮತ್ತು ಅಸಿಂಧುವೆಂದು ಪರಿಗಣಿಸುತ್ತದೆ ಮತ್ತು ತ್ರಿವಳಿ ತಲಾಕ್ ನೀಡುವ ಮುಸ್ಲಿಂ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನನ್ನೂ ವಿಧಿಸುತ್ತದೆ.
ಪ್ರಕೃತ ಭಾರತದಲ್ಲಿ ಉಚ್ಚಾರಣೆ, ಬರಹ, ಇ ಮೇಲ್, ಎಸ್‌ಎಂಎಸ್, ವಾಟ್ಸಾಪ್ ಮೂಲಕ ತ್ರಿವಳಿ ತಲಾಕ್ ನೀಡುವ ಕ್ರಮ ಮುಸ್ಲಿಮ್ ಪುರುಷರಲ್ಲಿ ಜಾರಿಯಲ್ಲಿದೆ.
ಓವೈಸಿ ಭಾರೀ ವಿರೋಧ:
ತ್ರಿವಳಿ ತಲಾಖ್ ವಿಧೇಯಕವನ್ನು ಎಲ್ಲರೂ ಒಮ್ಮತದಿಂದ ಅಂಗೀಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದರು. ಆದರೆ ಲೋಕಸಭೆಯಲ್ಲಿ ಎಐಎಂಐಎಂ ವರಿಷ್ಠ, ಸಂಸದ ಅಸಾದುದ್ದೀನ್ ಒವೈಸಿ ತ್ರಿವಳಿ ತಲಾಖ್ ಗೆ ವಿರೋಧ ವ್ಯಕ್ತಪಡಿಸಿದರು. ಈ ವಿಧೇಯಕ ಮುಸಲ್ಮಾನ ಮಹಿಳೆಯರ ಅಧಿಕಾರಕ್ಕೆ ಧಕ್ಕೆ ಬಂದಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.