ಬೆಂಗಳೂರು: ಅಮಾನ್ಯಗೊಂಡ ನೋಟುಗಳ ಬದಲಾವಣೆ ಪ್ರಕರಣದಲ್ಲಿ ಆರೋಪಿಗಳಿಂದ 35 ಲಕ್ಷ ರೂ. ಕಳವು ಮಾಡಿದ ಆರೋಪದ ಅಮಾನತುಗೊಂಡಿದ್ದ ಕಲಾಸಿಪಾಳ್ಯ ಠಾಣೆಯ ನಾಲ್ವರು ಸಿಬ್ಬಂದಿಯನ್ನು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸರ್ಕಾರ ಆದೇಶಿಸಿದೆ.
ಕಲಾಸಿಪಾಳ್ಯ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್, ಪೇದೆಗಳಾದ ಅನಂತರಾಜು, ಚಂದ್ರಶೇಖರ್ ಮತ್ತು ಗಿರೀಶ್ ಅವರುಗಳನ್ನು ಕರ್ತವ್ಯಲೋಪದ ಆರೋಪದ ಮೇಲೆ 2016ರ ಡಿ.14 ರಂದು ನಗರ ಪೊಲೀಸ್ ಕಮಿಷನರ್ ಅಮಾನತ್ತುಗೊಸಿದ್ದರು.
ಆರೋಪಿತ ಸಿಬ್ಬಂದಿ ಅಮಾನತುಗೊಳಿಸುವ ವೇಳೆಯಲ್ಲಾಗಲಿ, ನಂತರವಾಗಲಿ ನಿಯಮ ಪ್ರಕಾರ ಇಲಾಖೆ ವಿಚಾರಣೆ ನಡೆಸಿಲ್ಲ. ಆರೋಪಿತರ ಹೇಳಿಕೆಯನ್ನು ಪಡೆಯದೇ ಅಮಾನತುಗೊಳಿಸಿರುವುದು ಸಹಜ ನ್ಯಾಯಕ್ಕೆ ಧಕ್ಕೆ ತಂದಿದೆ. ಹೀಗಾಗಿ ಇವರನ್ನು ಮತ್ತೆ ಕರ್ತವ್ಯಕ್ಕೆ ನೇಮಕ ಮಾಡಿಕೊಂಡು ಸ್ವಾಭಾವಿಕ ನ್ಯಾಯದ ಅನ್ವಯ ಇಲಾಖೆ ವಿಚಾರಣೆಯನ್ನು ನಡೆಸುವಂತೆ ಸರ್ಕಾರ ಸೂಚಿಸಿದೆ.
ತಮ್ಮ ಅಮಾನತು ಆದೇಶವನ್ನು ಪ್ರಶ್ನಿಸಿ ಆರೋಪಿತರು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೊರೆ ಹೋಗಿದ್ದರು. ಅರ್ಜಿ ತಿರಸ್ಕರಿಸಿದ್ದ ಮಂಡಳಿ ಮೇಲ್ಮನವಿ ಪ್ರಾಧಿಕಾರದ ಮುಂದೆಯೇ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಮೇಲ್ಮನವಿ ಪ್ರಾಧಿಕಾರ ಕೂಡ ವಿಚಾರಣೆ ನಡೆಸದೆ ಅಮಾನತು ಆದೇಶ ಸರಿಯಾಗಿದೆ ಎಂದು ಸೂಚಿಸಿತ್ತು.
ಇದರ ವಿರುದ್ಧ ಆರೋಪಿಗಳು ಸರ್ಕಾರದ ಪರಿಷ್ಕರಣಾ ವಿಭಾಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪರಿಷ್ಕರಣಾ ಮನವಿಯನ್ನು ಸ್ವೀಕರಿಸಿದ ಒಳಾಡಳಿತ ಇಲಾಖೆ ಅಮಾನತು ಪ್ರಕ್ರಿಯೆಯಲ್ಲಿ ಆಗಿರುವ ನಿಯಮ ಉಲ್ಲಂಘನೆ ಆಧಾರದಲ್ಲಿ ಆರೋಪಿಗಳ ಅಮಾನತು ರದ್ದುಗೊಳಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.
ಏನಿದು ಪ್ರಕರಣ?: ಒಂದು ಸಾವಿರ ಮತ್ತು ಐದು ನೂರು ಮುಖ ಬೆಲೆಯ ನೋಟುಗಳ ನಿಷೇಧದ ಬಳಿಕ, ನೋಟುಗಳ ಬದಲಾವಣೆ ದಂಧೆ ಹೆಚ್ಚಾಗಿತ್ತು. ಈ ವೇಳೆ ಪೀಣ್ಯದ ನೆಲಗದರನಹಳ್ಳಿ ಬಳಿ ರುಕ್ಮಿಣಿನಗರದ ಕಣ್ವ ಮಾರ್ಟ್ ಹಿಂಭಾಗ ಸಿ.ಬಿ.ಕುಮಾರ ಎಂಬುವರ ಮನೆಯಲ್ಲಿ ನೋಟು ಬದಲಾವಣೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಆರೋಪಿತ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ 43 ಲಕ್ಷ ರೂ. ಸ್ಥಳದಲ್ಲಿ ಸಿಕ್ಕಿತ್ತು.
ಈ ಪೈಕಿ 8 ಲಕ್ಷ ರೂ. ಕುಮಾರ್‌ಗೆ ಹಿಂದಿರುಗಿಸಿ ಇನ್ನುಳಿದ 35 ಲಕ್ಷ ರೂ. ಸಮೇತ ನಾಲ್ವರು ಸಿಬ್ಬಂದಿ ಪರಾರಿಯಾಗಿದ್ದರು. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿತಸ್ಥರ ವಿರುದ್ಧ ಕಾನುನು ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಇದರ ಬೆನ್ನಲ್ಲೇ ನಾಲ್ವರನ್ನೂ ಅಮಾನತ್ತುಗೊಳಿಸಲಾಗಿತ್ತು.