ಬಾಗಲಕೋಟೆ: ರಾಜ್ಯದ ದಲಿತ ಮಹಿಳೆಯರೂ ಸೇರಿದಂತೆ ಎಸ್ಸಿ, ಎಸ್ಟಿ ಸಮಾಜದ ಜನರು ಒತ್ತು ಗಾಡಿ ಖರೀದಿಗೆ 50 ಸಾವಿರ ಹಾಗೂ ಅಂಗಡಿ ಇಟ್ಟುಕೊಂಡು ತರಕಾರಿ ಮಾರಾಟ ಮಳಿಗೆ ಆರಂಭಿಸಲು 1 ಲಕ್ಷ ರೂ. ಸಹಾಯಧನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಎಸ್ಸಿ, ಎಸ್ಟಿ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಈ ವರ್ಷದಿಂದ ಆರಂಭ: ಲಾಕ್ಡೌನ್ದಿಂದ ತರಕಾರಿ ಮಾರಾಟ ಮಾಡುವವರು, ರೈತರು ಸಂಕಷ್ಟ ಅನುಭವಿಸಿದ್ದಾರೆ. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಯಾರು ಒತ್ತು ಗಾಡಿ ಮೂಲಕ ತರಕಾರಿ ವ್ಯಾಪಾರ ಮಾಡಲು ಬಯಸುತ್ತಾರೋ ಅವರಿಗೆ 50 ಸಾವಿರ ಹಾಗೂ ಹಾಪ್ಕಾಮ್ಸ್ ಮಾದರಿಯಲ್ಲಿ ತರಕಾರಿ ಅಂಗಡಿ ಇಟ್ಟುಕೊಳ್ಳುವವರಿಗೆ 1 ಲಕ್ಷ ರೂ. ನೆರವು ನೀಡಲಾಗುವುದು. ಈ ಯೋಜನೆ ಇದೇ ವರ್ಷದಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಹಾಸ್ಟೆಲ್ ಗೆ ತರಕಾರಿ ಕೊಡಿ: ಕೋವಿಡ್ 19 ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಣೆಮಾಡಿದ ಹಿನ್ನೆಲೆಯಲ್ಲಿ ರಾಜ್ಯದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಡಿ ಇರುವ ಸುಮಾರು 8 ಸಾವಿರಕ್ಕೂ ಹೆಚ್ಚು ವಸತಿ ನಿಲಯಗಳಿಗೆ ರೈತರು ನೇರವಾಗಿ ತರಕಾರಿ ತಂದು ಕೊಡಬಹುದು. ಹಾಪ್ಕಾಮ್ಸ್ ನಿಗದಿಪಡಿಸಿದ ದರದಂತೆ ಖರೀದಿ ಮಾಡಲಾಗುವುದು ಎಂದರು. ವಸತಿ ನಿಲಯಗಳಿಗೆ ಯಾವ ತರಕಾರಿ ಅಗತ್ಯವಿದೆಯೋ ಅದನ್ನು ರೈತರು ಪೂರೈಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ 29 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಅದರಲ್ಲಿ ಓರ್ವ ಮೃತಪಟ್ಟಿದ್ದಾರೆ. ಆರು ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೂ ಆರು ಜನರ 14 ದಿನಗಳ ಚಿಕಿತ್ಸಾ ಅವ ಧಿ ಪೂರ್ಣಗೊಂಡಿದ್ದು, ಅವರಿಗೆ 2ನೇ ಬಾರಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಅದೂ ನೆಗೆಟಿವ್ ಬಂದಲ್ಲಿ, ಅವರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು.
–ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ