Advertisement

ಸರ್ಕಾರಿ ಸಿಬ್ಬಂದಿ ಸಕಾಲಕ್ಕೆ ಸಂಚಕಾರ

06:00 AM Aug 06, 2018 | |

ಬೆಂಗಳೂರು: ಸಕಾಲ ಯೋಜನೆಯಿಂದ ವೇತನ ವಿತರಣೆ ಸೇರಿದಂತೆ ಸರ್ಕಾರಿ ನೌಕರರಿಗೆ ಸೌಲಭ್ಯ ಕಲ್ಪಿಸುವ ಹದಿನೆಂಟು ಸೇವೆಗಳ ಕತ್ತರಿ ಪ್ರಯೋಗಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. 

Advertisement

ಇದರಿಂದ ಆರೂವರೆ ಲಕ್ಷ ಸರ್ಕಾರಿ ನೌಕರ ಸಿಬ್ಬಂದಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ.ಈ ಸೇವೆಗಳು ನಿಯಮಾನುಸಾರ ದೊರೆಯದಿದ್ದರೆ ನೌಕರರು”ಸಕಾಲ’ದಡಿ ಅರ್ಜಿ ಸಲ್ಲಿಸಿ ತಕ್ಷಣವೇ ಸೇವೆ ಪಡೆಯಬಹುದಾಗಿದೆ. ಜತೆಗೆ ಅನಗತ್ಯವಾಗಿ ಸೇವೆ ತಡೆ ಹಿಡಿದ, ವಿಳಂಬ ತೋರಿದ ಅಧಿಕಾರಿಗಳಿಗೆ ದಂಡ ವಿಧಿಸಲು ಅವಕಾಶವಿದೆ. ನೌಕರ, ಸಿಬ್ಬಂದಿಗೆ ವರದಾನದಂತಿರುವ ಈ ಸೇವೆಯನ್ನು “ಸಕಾಲ’ದಿಂದ ಹೊರಗಿಡುವ ಯತ್ನಕ್ಕೆ ಅಪಸ್ವರ ಕೇಳಿಬಂದಿದೆ.

ಜನವರಿಯಲ್ಲಿ ಅಂದಿನ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರ, ಸಿಬ್ಬಂದಿಗೆ ಸಂಬಂಧಪಟ್ಟಂತೆ ಸಕಾಲದ ಅಡಿಯ ಸೇವೆಗಳ ವಿವರ ದಾಖಲಿಸದಿರುವ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳಿಂದ ಈ ಬಗ್ಗೆ ಸ್ಪಷ್ಟನೆ ಕೇಳುವ ಬದಲಿಗೆ ಆಯ್ದ ಸೇವೆಗಳನ್ನೇ ಕೈಬಿಡುವ ವಿಚಾರ ಪ್ರಸ್ತಾಪವಾಯಿತು.

ಜೂನ್‌ನಲ್ಲಿ ನಡೆದ ಸಭೆಯಲ್ಲಿ ಇದೇ ವಿಚಾರ ಪ್ರಸ್ತಾಪವಾದಾಗ ಏಕಾಏಕಿ ಆಯ್ದ 18 ಸೇವೆಗಳನ್ನು ಕೈಬಿಡುವ ಬದಲಿಗೆ ಎಲ್ಲ ಜಿಲ್ಲಾಧಿಕಾರಿಗಳು, ಸರ್ಕಾರಿ ನೌಕರರ ಸಂಘಗಳ ಅಭಿಪ್ರಾಯ ಪಡೆದು ಮುಂದುವರಿಯುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದನ್ನು ಸಭೆಯಲ್ಲಿದ್ದ ಹಿರಿಯ ಅಧಿಕಾರಿಗಳು ಒಪ್ಪಿದರು ಎಂದು ಮೂಲಗಳು ತಿಳಿಸಿವೆ. ಆದರೆ ನಂತರ ಚಿತ್ರಣ ಬದಲಾಯಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಿಶೇಷ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜು. 13ರಂದು ಮತ್ತೂಂದು ಸಭೆ ನಡೆಯಿತು. ಈ ಸಭೆಯಲ್ಲಿದ್ದ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಅವರು 18 ಸೇವೆಗಳನ್ನು ಸಕಾಲದಿಂದ ಹೊರಗಿಡಲು ಒಪ್ಪಿಗೆ ಸೂಚಿಸಿರುವ ಕುರಿತ ಸಭೆಯ ನಡಾವಳಿ ಪ್ರತಿ “ಉದಯವಾಣಿ”ಗೆ ಲಭ್ಯವಾಗಿದೆ.

Advertisement

ಸೇವೆ ಕೈಬಿಡಲು ಆದೇಶ
ಈ ನಡಾವಳಿ ಆಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜಕೀಯ) ಅಧೀನ ಕಾರ್ಯದರ್ಶಿಯವರು ಸರ್ಕಾರಿ ನೌಕರರು, ಸಿಬ್ಬಂದಿಗೆ ಸಂಬಂಧಪಟ್ಟ 18 ಸೇವೆಗಳನ್ನು ಸಕಾಲದಿಂದ ಕೈಬಿಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ. ಜಿಲ್ಲಾಧಿಕಾರಿಗಳು, ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಂಘಗಳ ಅಭಿಪ್ರಾಯ ಪಡೆಯದೇ ಸಕಾಲದಿಂದ ಹೊರಗಿಡಲು ನಿರ್ಧರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಅನನುಕೂಲಗಳೇನು?
ವೇತನ ವಿತರಣೆ ಸೇರಿದಂತೆ ಇತರೆ 18 ಸೇವೆಗೆ ಸಂಬಂಧಪಟ್ಟಂತೆ ಯಾವುದೇ ಅಧಿಕಾರಿ, ನೌಕರರು ಉದ್ದೇಶಪೂರ್ವಕವಾಗಿ ನಿರ್ದಿಷ್ಟ ನೌಕರರಿಗೆ ಸೇವೆ ನಿರಾಕರಿಸಿ ಕಿರುಕುಳ ನೀಡಲು ಯತ್ನಿಸಿದಾಗ ಸಕಾಲದಲ್ಲಿ ಅರ್ಜಿ ಸಲ್ಲಿಸಿದರೆ ಕಡಿವಾಣ ಬೀಳಲಿದೆ. ಅಗತ್ಯ ಸೇವೆ ಪಡೆಯಲು ಹಣಕ್ಕೆ ಬೇಡಿಕೆ ಇಡುವುದು ಸೇರಿದಂತೆ ಇತರೆ ನಿರೀಕ್ಷೆಗಳಿಗೆ ಅವಕಾಶವಿಲ್ಲದಂತಿದೆ. ಒಂದೊಮ್ಮೆ ಈ ಸೇವೆಗಳನ್ನು ಸಕಾಲದಿಂದ ಹೊರಗಿಟ್ಟರೆ ನೌಕರರು ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ. ಅದರಲ್ಲೂ ನಿಯಮಾನುಸಾರ ಕಾರ್ಯ ನಿರ್ವಹಿಸುವ, ಅಕ್ರಮಗಳಿಗೆ ಸಹಕರಿಸದ ಅಧಿಕಾರಿ, ನೌಕರರನ್ನು ಗುರಿಯಾಗಿಸಿ ಕಿರುಕುಳ ನೀಡುವ ಆತಂಕವೂ ವ್ಯಕ್ತವಾಗಿದೆ.

ಸಕಾಲದಲ್ಲೇ ಉಳಿಸಿಕೊಳ್ಳಲಿರುವ ಸೇವೆ: ಪಿಂಚಣಿ ಮತ್ತು ಉಪದಾನಗಳ ಇತ್ಯರ್ಥದ ಪ್ರಸ್ತಾವನೆಯನ್ನು ಮಹಾಲೇಖಪಾಲರಿಗೆ ಕಳುಹಿಸುವುದು. ಪರೀಕ್ಷಾರ್ಥ ಸೇವಾವಧಿ ಘೋಷಣೆ. ಅನುಕಂಪದ ಮೇಲೆ ನೇಮಕಾತಿ.
ಸಕಾಲದಿಂದ ಹೊರಗಿಡಲು ಚಿಂತಿಸಿರುವ ಸೇವೆ: ವೇತನ ವಿತರಣೆ. ಕಾಲಮಿತಿ ವೇತನ ಬಡ್ತಿ ಮಂಜೂರಾತಿ. ಹಿರಿಯ ವೇತನ ಶ್ರೇಣಿ ಮಂಜೂರಾತಿ. ವಾರ್ಷಿಕ ಬಡ್ಡಿ ಮಂಜೂರಾತಿ. ಆರು ತಿಂಗಳ ಗಳಿಕೆ ರಜೆ/ ಪರಿವರ್ತಿತ ರಜೆ ಮಂಜೂರಾತಿ. ವೈದ್ಯಕೀಯ ವೆಚ್ಚ ಮರುಪಾವತಿ ಮಂಜೂರಾತಿ. ಪ್ರವಾಸ ಭತ್ಯೆ ಕೋರಿಕೆ. ಸಾಮಾನ್ಯ ಭವಿಷ್ಯ ನಿಧಿ ಮುಂಗಡ, ಭಾಗಶಃ ಮತ್ತು ಅಂತಿಮ ಹಿಂತೆಗೆಯುವಿಕೆ ಮಂಜೂರಾತಿ. ಹಬ್ಬದ ಮುಂಗಡ ಮಂಜೂರಾತಿ. ವರ್ಗಾವಣೆ/ ನಿಯೋಜನೆ ಮೇರೆಗೆ ಅಂತಿಮ ವೇತನ ಪ್ರಮಾಣ ಪತ್ರ ನೀಡಿಕೆ. ಸೇವಾ ಪುಸ್ತಕ ಕಳುಹಿಸುವುದು. ಸ್ಥಾನಪನ್ನಾವಧಿ ಘೋಷಣೆ. ವೇತನ ಪ್ರಮಾಣ ಪತ್ರ ನೀಡಿಕೆ. ಅಧ್ಯರ್ಪಿತ ರಜೆಯ ವೇತನ ಮಂಜೂರಾತಿ. ಅರ್ಜಿಯನ್ನು ಸಮುಚಿತ ಮಾರ್ಗದಲ್ಲಿ ರವಾನಿಸುವುದು. ಸ್ವಗ್ರಾಮ ಪ್ರಯಾಣ ರಿಯಾಯಿತಿ/  ರಜಾ ದಿನ ಪ್ರಯಾಣ ರಿಯಾಯ್ತಿ ಮಂಜೂರಾತಿ. ಪ್ರಭಾರ ಭತ್ಯೆ ಮಂಜೂರಾತಿ, ಖಾಕಿ ವೇತನ ಮಂಜೂರಾತಿ.

ಸಕಾಲದಲ್ಲಿರುವ ಸೇವೆ ಕಡಿತ ಮಾಡುವುದರಿಂದ ಸರ್ಕಾರಿ ನೌಕರರಿಗೆ ಸಾಕಷ್ಟು ಅನನುಕೂಲ ಆಗಲಿದೆ. ಇದರಿಂದ ನೌಕರರು ಸೌಲಭ್ಯದಿಂದ ವಂಚಿತರಾಗಿ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರದ ಈ ಪ್ರಯತ್ನ ಬಹುಪಾಲು ಸಂಘಟನೆಗಳು ಖಂಡಿಸಿವೆ. ರಾಜ್ಯ ಸಚಿವಾಲಯ ನೌಕರರ ಸಂಘ ಮಾತ್ರ ಬೆಂಬಲಿಸಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶೀಘ್ರ ಮನವಿ ಸಲ್ಲಿಸಲಿದ್ದೇವೆ.
– ರಮೇಶ್‌ ಸಂಗ, ಅಧ್ಯಕ್ಷ, ರಾಜ್ಯ ಸರ್ಕಾರಿ ನೂತನ ಪಿಂಚಣಿ ಯೋಜನೆಗೆ ಒಳಪಟ್ಟ ನೌಕರರ ಸಂಘ

ಸಕಾಲದ ಆಯ್ದ ಸೇವೆಗೆ ಸಂಬಂಧಿಸಿದಂತೆ ಎರಡು ವರ್ಷದಿಂದ ಒಂದು ಅರ್ಜಿ ಬಾಕಿ ಇಲ್ಲ. ಆಯ್ದ 18 ಸೇವೆ ಕೈಬಿಡಲು ಒಪ್ಪಿಗೆ ನೀಡಿದ್ದೇವೆ. ಸಚಿವಾಲಯದ 3 ಸಾವಿರ ನೌಕರರ ಪರವಾಗಿ ಈ ಮನವಿ ಸರ್ಕಾರಕ್ಕೆ ಸಲ್ಲಿಸಿದ್ದೇವು.
– ಪಿ.ಗುರುಸ್ವಾಮಿ, ಅಧ್ಯಕ್ಷ, ಸರ್ಕಾರಿ ಸಚಿವಾಲಯ ನೌಕರರ ಸಂಘ

ಈ ಹಿಂದೆಯೇ ಸರ್ಕಾರಿ ನೌಕರರ ಸಂಬಂಧ ಹಲವು ಸೇವೆಯನ್ನು ಸಕಾಲ ವ್ಯಾಪ್ತಿಗೆ ತರಲಾಗಿದೆ. ನೌಕರರ ಸಿಬ್ಬಂದಿಗೆ ಅನುಕೂಲವಾಗುವುದಾದರೆ, ಈ ಎಲ್ಲ ಸೇವೆಗಳು ಮುಂದುವರಿಸುವುದು ಸೂಕ್ತ.
– ಕೆ.ಮಥಾಯಿ, ಕಾರ್ಯಕಾರಿ ಸಮಿತಿ ಸದಸ್ಯ, ಕೆಎಎಸ್‌ ಅಧಿಕಾರಿಗಳ ಸಂಘ

– ಎಂ.ಕೀರ್ತಿಪ್ರಸಾದ್‌
 

Advertisement

Udayavani is now on Telegram. Click here to join our channel and stay updated with the latest news.

Next