Advertisement

ಸೋಮೇಶ್ವರ ಕಡಲ ಕಿನಾರೆಯಲ್ಲಿ  ಸರಕಾರಿ ಜಾಗ ಅತಿಕ್ರಮಣ!

01:00 AM Feb 11, 2019 | Team Udayavani |

ಬೈಂದೂರು: ಬೈಂದೂರು ತಾಲೂಕಿನ ಪ್ರಸಿದ್ದ ಪ್ರವಾಸಿ ಸ್ಥಳವಾದ ಸೋಮೇಶ್ವರ ಬೀಚ್‌ನಲ್ಲಿ ಪಡುವರಿ ಗ್ರಾಮದ  ಸರ್ವೆ ನಂಬ್ರ 280 ಸರಕಾರಿ ಜಾಗ ಒತ್ತುವರಿಯಾಗಿದೆ. ಬೀಚ್‌ ಅಭಿವೃದ್ಧಿಗೆ ಪಣತೊಟ್ಟ ಪ್ರವಾಸೋದ್ಯಮ ಇಲಾಖೆಗೆ  ಸ್ಥಳೀಯರಿಂದ ಜಾಗ ಬಿಡಿಸಿಕೊಳ್ಳುವುದೇ ಹರಸಾಹಸವಾಗಿದೆ. 

Advertisement

ಏನಿದು ಜಾಗ ಅತಿಕ್ರಮಣ ಸಮಸ್ಯೆ
ಒಂದು ಊರಿನ ಅಭಿವೃದ್ದಿಯಾಗಬೇಕಾದರೆ ಅಲ್ಲಿನ ಪ್ರವಾಸೋದ್ಯಮ ಸ್ಥಳಗಳ ಪ್ರಗತಿ ಯಾಗಬೇಕು. ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಸೋಮೇಶ್ವರ ಕಡಲತೀರ ತನ್ನ ವಿಶಿಷ್ಟ ಸೌಂದರ್ಯ ಹಾಗೂ ಭೌಗೋಳಿಕ ವಿನ್ಯಾಸದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ನದಿ -ಸಾಗರ ಸಂಗಮ ಪ್ರದೇಶ ಪ್ರವಾಸಿಗರ ಕಣ್ಮನ ಸೂರೆಗೊಂಡಿದೆ. ಹೀಗಾಗಿ ಇಲ್ಲಿನ ಕಡಲತೀರ ಅತ್ಯಂತ ಪ್ರಸಿದ್ಧಿ ಪಡೆದಿದೆ.

ಮರವಂತೆ ಹೊರತುಪಡಿಸಿದರೆ ಅತಿ ಹೆಚ್ಚು ವ್ಯಾಪ್ತಿಯಿರುವ ಸೋಮೇಶ್ವರ ಕಡಲಕಿನಾರೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ಥಳೀಯ ಗ್ರಾ.ಪಂ ಮುಂದಾಳತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಸಹಕಾರದಲ್ಲಿ ಬೆಸುಗೆ ಫೌಂಡೇಶನ್‌ ಸಹಭಾಗಿತ್ವದಲ್ಲಿ ಎರಡು ವರ್ಷಗಳಿಂದ ಬೀಚ್‌ ಉತ್ಸವ ಕಾರ್ಯಕ್ರಮ ಆಯೋಜಿಸಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಸೋಮೇಶ್ವರ ದೇವಸ್ಥಾನ ಮುಂಭಾಗ ಕೆರೆ ಇರುವ ಸ್ಥಳ ಹೊರತುಪಡಿಸಿ ಕಡಲ್ಕೊರೆತ ತಡೆಗಟ್ಟಲು ನಿರ್ಮಿಸಿದ ಕಲ್ಲುಗಳ ಸಾಲಿನಲ್ಲಿ  ಒಂದು ಎಕ್ರೆಗೂ ಅಧಿಕ ಸರಕಾರದ ಸ್ಥಳವಿದೆ.ಸೋಮೇಶ್ವರ ಬೀಚ್‌ ಅಭಿವೃದ್ದಿ ಹೊಂದುತ್ತಿರುವಂತೆ ಈ ಸರಕಾರಿ ಸ್ಥಳಗಳಲ್ಲಿ ಖಾಸಗಿ ವ್ಯಕ್ತಿಗಳು ಬೇಲಿ ಹಾಕಿದ್ದು  ಯಾತ್ರಿಕರು ಪಾರ್ಕಿಂಗ್‌ಗಾಗಿ ಪರದಾಡುವಂತಾಗಿದೆ.

5 ಕೋಟಿ ಅನುದಾನ ಪ್ರಸ್ತಾವನೆ
ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಇಂಟರ್‌ ಲಾಕ್‌, ಆಸನ ವ್ಯವಸ್ಥೆ, ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್‌, ರೆಸ್ಟೋರೆಂಟ್‌, ಜಲಕ್ರೀಡೆ, ದೋಣಿ ವಿಹಾರಕ್ಕಾಗಿ ಈಗಾಗಲೇ ಇಲಾಖೆ ಟೆಂಡರ್‌ ಕರೆದಿದೆ. ಆದರೆ ಇಲ್ಲಿರುವ ಸರಕಾರಿ ಜಾಗ ಮಾತ್ರ ಖಾಸಗಿಯವರ ಪಾಲಾಗಿದೆ.ಹೀಗಾಗಿ ಟೆಂಡರ್‌ ಪಡೆದವರಿಗೆ ಪಾರ್ಕಿಂಗ್‌ ಸ್ಥಳವನ್ನು ಕಲ್ಪಿಸಿಕೊಡುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

Advertisement

ಇದರ ಜತೆಗೆ ವಾಕಿಂಗ್‌ ಪಾಥ್‌, ತಾರಾಪತಿ- ಸೋಮೇಶ್ವರ ಸಂಪರ್ಕ ಸೇತುವೆ ಸೇರಿಂದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಂದಾಗಿ ಜಿಲ್ಲಾಡಳಿತದ ವತಿಯಿಂದ ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಗೆ ಐದು ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆ ಕಳುಹಿಸಲಾಗಿದೆ. ಸೋಮೇಶ್ವರ ಕಡಲ ಕಿನಾರೆಯಲ್ಲಿ  ಪ್ರವಾಸಿಗರಿಗೆ ಶೌಚಾಲಯ ಸ್ನಾನ ಗೃಹ ನಿರ್ಮಾಣ ಮಾಡಿದರು ಸಹ ಇದರ ಸುತ್ತ¤ಮುತ್ತಲಿನ ಜಾಗಗಳು ಅತಿಕ್ರಮಣವಾಗಿದೆ. ಹೀಗಾಗಿ ವಾಹನಗಳನ್ನು ನದಿ ಸಮೀಪ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.

ಅದೇನಿದ್ದರೂ ಸಹ ಊರಿನ ಅಭಿವೃದ್ದಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ. ಈಗಾಗಲೇ ರಾಷ್ಟ್ರಮಟ್ಟದ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ದಿಗಾಗಿ ಸರಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿರುವ ಬೆನ್ನಲ್ಲೆ  ಈ ರೀತಿ ಸರಕಾರಿ ಜಾಗ ಅತಿಕ್ರಮಣ ಆಗಿರೋದು ಅಭಿವೃದ್ದಿಗೆ ಹಿನ್ನಡೆಯಾಗಲಿದೆ. 
ಹೀಗಾಗಿ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆಯ ವ್ಯಾಪ್ತಿಯ ಜಾಗಗಳನ್ನು ಸುಪರ್ದಿಗೆ ತೆಗೆದುಕೊಳ್ಳಬೇಕಾದ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.

ಜಾಗ ತೆರವುಗೊಳಿಸಿ
ಸೋಮೇಶ್ವರ ಕಡಲ ಕಿನಾರೆ ಪ್ರವಾಸಿಗರಿಗೆ ಉತ್ತಮ ಕಡಲ ಕಿನಾರೆಯಾಗಿದೆ.ಇಲಾಖೆ ಇನ್ನಷ್ಟು ಪೂರಕ ಯೋಜನೆಗಳನ್ನು ಕಲ್ಪಿಸಬೇಕಿದೆ. ದೊಂಬೆ ಕಡೆಯಿಂದ ಬರುವ ವಾಹನಗಳನ್ನು ಸೋಮೇಶ್ವರ ಕಡೆ ತಿರುಗಿಸಲು ಅಪಾಯಕಾರಿ ಇಳಿಜಾರು ರಸ್ತೆ ಇದೆ. ಜಿಲ್ಲಾಡಳಿತ ಇವುಗಳನ್ನು ಶೀಘ್ರ ಸರಿಪಡಿಸಬೇಕು.

–  ಸುದರ್ಶನ್‌ ಶೆಟ್ಟಿ , ಪ್ರವಾಸಿಗ

– ಅರುಣ ಕುಮಾರ್‌, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next