Advertisement

ಕುಂಬಾರರ ಕಸುಬು ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿ: ಚೌಡಶೆಟ್ಟಿ

02:36 PM Jul 18, 2017 | |

ವಿಜಯಪುರ: ಪರಂಪರಾಗತ ಹಾಗೂ ರೈತರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ದೈನಂದಿನ ಬದುಕಿಗೆ ಕುಂಬಾರರು
ಹತ್ತಿರವಾಗಿದ್ದರು. ಅಳಿವಿನ ಅಂಚಿಗೆ ಸಾಗಿದ್ದು, ಸರ್ಕಾರ ಕುಂಬಾರರ ಕುಲಕಸುಬು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕುಂಬಾರರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕರ್ನಾಟಕ ಕುಂಬ ಕಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಿವಕುಮಾರ ಚೌಡಶೆಟ್ಟಿ ಹೇಳಿದರು.

Advertisement

ನಗರದ ರುಡ್‌ಸೆಟ್‌ ಸಂಸ್ಥೆಯಲ್ಲಿ ಕುಂಬಾರ ಸರ್ಕಾರಿ-ಅರೆ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ
ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರದ ನಂತರವೂ ಕುಂಬಾರ ಸಮಾಜ ಅಜ್ಞಾತವಾಸದಲ್ಲಿದೆ. ಯಾವ ಸರ್ಕಾರವು ಕುಬಾರ ಸಮುದಾಯವನ್ನು ಮೇಲೆತ್ತಲು ಇಚ್ಛಾಶಕ್ತಿ ತೋರುತ್ತಿಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕಿದೆ ಎಂದರು. ರಾಜ್ಯದಲ್ಲಿರುವ ಕುಂಬಾರರ ಒಳಪಂಗಡಗಳಾದ ಮುಲ್ಯ, ಶೆಟ್ಟಿ, ಪ್ರಜಾಪತಿ, ಕುಲಾಲ ಮತ್ತು ಕುಂಬಾರರು ಎಲ್ಲ ಒಂದೇ ಕುಲಕಸಬು ಮಾಡುತ್ತಿದ್ದು, ನಮ್ಮ ನಮ್ಮ ಒಳ ಭಿನ್ನಾಭಿಪ್ರಾಯಗಳೇ ಸರ್ಕಾರದ 
ನಿರ್ಲಕ್ಷಕ್ಕೆ ಮೂಲ ಕಾರಣವಾಗಿದೆ. ಆದ್ದರಿಂದ ಕುಂಬಾರರ ಉಪ ಪಂಗಡ ಮರೆತು ಒಗ್ಗಟ್ಟಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ
ಮಾಡಬೇಕಾದ ಅನಿವಾರ್ಯ ಈಗ ಎದುರಾಗಿದೆ. ಸಂಘಟಿತ ಹೋರಾಟ ಸರ್ಕಾರದ ಸೌಲಭ್ಯ ಪಡೆಯಲು ಸಹಕಾರಿ ಆಗಲಿದೆ
ಎಂದರು. 

ದೇವರಾಜ ಅರಸು ನಿಗಮ ವ್ಯವಸ್ಥಾಪಕ ಬಿ.ಜಿ. ಇಂಡಿ ಮಾತನಾಡಿ, ಸರ್ಕಾರವು ಎಲ್ಲ ಸಣ್ಣ ಸಮುದಾಯಗಳಿಗೆ ಆರ್ಥಿಕ ನೆರವು ನೀಡಲು ನಿಗಮ ಸ್ಥಾಪಿಸಿದೆ. ಕುಂಬಾರ ಸಮುದಾಯದ ಜನರು ಸಹ ಈ ಯೋಜನೆಗಳಲ್ಲಿ ಭಾಗವಹಿಸಿ ವ್ಯವಸಾಯ, ಶಿಕ್ಷಣ ಮತ್ತು ವ್ಯಾಪಾರ ವಹಿವಾಟಿಗೆ ಆರ್ಥಿಕ ನೆರವು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಅಯುಕ್ತೆ ವಿ.ಆರ್‌. ಮಂಜುಳಾ ಮಾತನಾಡಿ, ಇಂದಿನ ಆಧುನಿಕತೆಯಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗಿ ಜನರಲ್ಲಿ ಅನಾರೋಗ್ಯ ಕಾಡುತ್ತಿದೆ. ಆದರೆ ಆರೋಗ್ಯಕ್ಕೆ ಹತ್ತಿರವಾದ ಮಣ್ಣಿನ ಮಡಿಕೆ ವಸ್ತುಗಳ ಬಳಕೆ ಇಲ್ಲದ ಕಾರಣ ಕುಂಬಾರರ ಉತ್ಪನ್ನಗಳಿಗೆ ಬೇಡಿಕೆ ಇಲ್ಲದೇ ಪಾರಂಪರಿಕ ಕಸಬು ಅನಾಥ ಪ್ರಜ್ಞೆಯಿಂದ ಬಳಲುತ್ತಿದೆ ಎಂದರು.

ಕುಂಬಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಬನೋಶಿ ಮಾತನಾಡಿ, ಆಯಗಾರರು ಮತ್ತು ಸಮಾಜದ
ಕುಶಲಕರ್ಮಿಗಳಾದ ಅನೇಕ ಹಿಂದುಳಿದ ಸಮುದಾಯಗಳಿಗೆ ಸರ್ಕಾರ ಜನಸಂಖ್ಯೆಗೆ ಗಾತ್ರಗನುಗುಣವಾಗಿ ಅವರಿಗೆ ಮಣೆ
ಹಾಕುತ್ತಿದ್ದು ನಮ್ಮ ಸಮುದಾಯ ರಾಜ್ಯದಲ್ಲಿ ತೀರ ಹಿಂದುಳಿದ ಮತ್ತು ಸಣ್ಣ ಗಾತ್ರದಲ್ಲಿರುವುದರಿಂದ ನಮ್ಮನ್ನು ಕಣ್ಣೆತ್ತಿ ನೋಡುತ್ತಿಲ್ಲ.
ಈ ಮಲತಾಯಿ ಧೋರಣೆಯನ್ನು ಬಿಟ್ಟು ನಮ್ಮನ್ನು ಸಮಾಜದಲ್ಲಿ ನಾವು ಒಬ್ಬರು ಎಂದು ಕಾರಣಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂಬಾರರ ನೌಕರರ ಸಹಕಾರ ಸಂಘದ ಅಧ್ಯಕ್ಷ ಎಸ್‌.ಜಿ. ಕುಂಬಾರ ಮಾತನಾಡಿ, ನಾವು ಸಮುದಾಯದ ನೌಕರರ ಕುಟುಂಬದ ಭವಿಷ್ಯ ಮುಂದಿಟ್ಟುಕೊಂಡು ಸಹಕಾರಿ ಸಂಘವನ್ನು ರಚಿಸಿದ್ದು ಇದರಲ್ಲಿ ಸಾಲ ಪಡೆದುಕೊಂಡು ಅಭಿವೃದ್ಧಿಗೊಳ್ಳಬೇಕು. ಅಲ್ಲದೆ ತಮ್ಮ ವ್ಯವಹಾರವನ್ನು ಸಹಕಾರಿ ಸಂಘದಲ್ಲಿ ನಿಯಮಿತವಾಗಿ ನಡೆಸಿಕೊಂಡು ಹೋಗುವುದರಿಂದ ಸದರಿ ಸಂಘದಲ್ಲಿ ಉತ್ತಮ ಬಾಂಧವ್ಯ ಹೊಂದುವಿರಿ. ಅಲ್ಲದೆ ಸಮಾಜದ ಕಷ್ಟ ನಷ್ಟಗಳಿಗೆ ಸಂಘ ಸಹಕಾರಿಯಾಗಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಎಎಸ್‌ ತೇರ್ಗಡೆ ಹೊಂದಿ ಡಿವೈಎಸ್ಪಿ ಹುದ್ದೆಗೇರಿದ ಹೋರ್ತಿಯ ಸೋಮಲಿಂಗ ಕುಂಬಾರ ಅವರನ್ನು
ಸನ್ಮಾನಿಸಲಾಯಿತು. ನಿವೃತ್ತ ಪ್ರಾಚಾರ್ಯ ಬಿ.ಆರ್‌. ಕುಂಬಾರ, ಕಲ್ಲಪ್ಪ ಕುಂಬಾರ, ಕುಂಭಕಲಾ ಮಂಡಳಿ ನಿರ್ದೇಶಕ ಬಿ.ಎನ್‌.
ಕುಂಬಾರ ಮಾತನಾಡಿದರು. ಸುರೇಶ ಕುಂಬಾರ, ಮಲ್ಲುಕುಂಬಾರ, ಚಂದ್ರಶೇಖರ ಕುಂಬಾರ, ವಿವೇಕ್‌ ಕುಂಬಾರ ವೇದಿಕೆಯಲ್ಲಿದ್ದರು. ಶಶಿಕಲಾ ಕುಂಬಾರ ಪ್ರಾರ್ಥಿಸಿದರು. ಪ್ರಾಧ್ಯಾಪಕ ಎಸ್‌. ಆರ್‌. ಕುಂ ಬಾರ ಸ್ವಾಗತಿಸಿದರು. ಶಿಕ್ಷಕರಾದ ಶ್ರೀಕಾಂತ ಕುಂಬಾರ, ಪರಶುರಾಮ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಸಿ.ಬಿ. ಕುಂಬಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next