Advertisement

ಕೋವಿಡ್, ಪ್ರವಾಹ, ಆರ್ಥಿಕ ಸಂಕಷ್ಟದ ನಡುವೆ “ಅಧಿವೇಶನ”ದ ಅಗ್ನಿಪರೀಕ್ಷೆ

12:34 AM Sep 20, 2020 | mahesh |

ಬೆಂಗಳೂರು: ಕೋವಿಡ್ , ಪ್ರವಾಹ ಮತ್ತು ಆರ್ಥಿಕ ಸಂಕಷ್ಟದ ನಡುವೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರಕಾರವು ವಿಧಾನಮಂಡಲ ಅಧಿವೇಶನದ ಸವಾಲು ಎದುರಿಸಬೇಕಿದೆ.

Advertisement

ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ಸೇರಿ 19 ಅಧ್ಯಾದೇಶ ಒಳಗೊಂಡಂತೆ 31 ವಿಧೇಯಕಗಳಿಗೆ ಅಧಿವೇಶನದಲ್ಲಿ ಒಪ್ಪಿಗೆ ಪಡೆಯುವ ಅನಿವಾರ್ಯತೆ ಸರಕಾರದ್ದು. ಯಡಿಯೂರಪ್ಪ ಅವರ ದಿಲ್ಲಿ ಯಾತ್ರೆಯ ಬಗೆಗಿನ ಗುಸುಗುಸು, ಸಂಪುಟ ವಿಸ್ತರಣೆ-ಪುನಾರಚನೆ ಗೊಂದಲ, ಆಕಾಂಕ್ಷಿಗಳ ಅಸಮಾಧಾನವು ಅಧಿವೇಶನದ ಮೇಲೆ ಯಾವ ರೀತಿಯ ಪರಿಣಾಮ ಬೀರ ಬಹುದು ಎಂಬುದು ಸದ್ಯದ ಕುತೂಹಲ.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ತಲುಪ ದಿರುವುದು, ಕೇಂದ್ರ ಸರಕಾರದ ನೆರವು ನಿರೀಕ್ಷಿತ ಪ್ರಮಾಣದಲ್ಲಿ ಸಿಗದಿರುವುದು, ಜಿಎಸ್‌ಟಿ ಪರಿಹಾರ ಬಾರದ ಕಾರಣ ರಾಜ್ಯ ಸರಕಾರವು ಸಾಲದ ಮೊರೆ ಹೊಕ್ಕಿರುವುದು, ಡ್ರಗ್ಸ್‌ ಮಾಫಿಯಾ, ಕೆ.ಜಿ. ಹಳ್ಳಿ-ಡಿ.ಜೆ. ಹಳ್ಳಿ ಪ್ರಕರಣಗಳು ಆಡಳಿತ ಮತ್ತು ವಿಪಕ್ಷಗಳ ಜಂಗೀಕುಸ್ತಿಗೆ ಸದನ ವೇದಿಕೆಯಾಗಬಹುದು.

1,200 ಪ್ರಶ್ನೆ ಗಳ ಬ್ಯಾಂಕ್‌!
ವಿಪಕ್ಷ ಕಾಂಗ್ರೆಸ್‌ 1,200 ಪ್ರಶ್ನೆಗಳ “ಅಸ್ತ್ರ’ದೊಂದಿಗೆ ಸರಕಾರದ ಮೇಲೆ ಮುಗಿ ಬೀಳಲು ಸಜ್ಜಾಗಿದೆ. ಬಿಜೆಪಿಯೂ ತಿರುಗೇಟು ನೀಡಿ ಡ್ರಗ್ಸ್‌ ದಂಧೆ ಮತ್ತು ಕೆ.ಜೆ. ಹಳ್ಳಿ-ಡಿ.ಜೆ. ಹಳ್ಳಿ ಪ್ರಕರಣಗಳಲ್ಲಿ ವಿಪಕ್ಷವನ್ನು ಕಟ್ಟಿಹಾಕಲು ಕಾರ್ಯತಂತ್ರ ರೂಪಿಸಿದೆ. ಇತ್ತೀಚಿಗೆ ಯಡಿಯೂರಪ್ಪ -ಎಚ್‌.ಡಿ. ಕುಮಾರಸ್ವಾಮಿ ಭೇಟಿಯ ಅನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷವು ವಿಷಯಾಧಾರಿತವಾಗಿ ಮತ್ತು ಸಂದರ್ಭಕ್ಕೆ ತಕ್ಕಂತೆ “ಜಾಣ್ಮೆ’ಯ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಕೆಲವು ಶಾಸಕರಿಗೆ ಕೋವಿಡ್
221 ಶಾಸಕರ ಪೈಕಿ ಡಿಸಿಎಂ ಡಾ| ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಗೋಪಾಲಯ್ಯ. ಬೈರತಿ ಬಸವರಾಜ್‌ ಸಹಿತ ಐವತ್ತಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ಸೋಂಕು ದೃಢಪಟ್ಟು ಹಲವರು ಕ್ವಾರಂಟೈನ್‌ನಲ್ಲಿದ್ದಾರೆ. ಕೊರೊನಾ ಸೋಂಕುಪೀಡಿತರಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರೂ ಇದ್ದಾರೆ. ಕೊರೊನಾ ಆತಂಕ ಮತ್ತು ಶಾಸಕರ ಗೈರು ಹಾಜರಿಯಲ್ಲಿ ನಡೆಯುವ ಅಧಿವೇಶನ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜನರ ಸಮಸ್ಯೆಗಳ ಚರ್ಚೆಗೆ ಸಾಕ್ಷಿಯಾಗಲಿದೆ, ಅಧ್ಯಾದೇಶ ಮತ್ತು ವಿಧೇಯಕಗಳಿಗೆ ಒಪ್ಪಿಗೆ ಪಡೆಯುವ ಸರಕಾರದ ಕಸರತ್ತು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಾಗಿದೆ.

Advertisement

ಎಂಟು ದಿನ ಕಲಾಪ
ಸೆ. 21ರಿಂದ 30ರ ವರೆಗೆ ಅಧಿವೇಶನ ನಡೆಯಲಿದೆ. ಸೋಮವಾರ ಕಲಾಪ ಸಲಹಾ ಸಮಿತಿ ಸಭೆ ನಡೆಯಲಿದ್ದು, ಪ್ರಶ್ನೋತ್ತರ ಅವಧಿ ಬೇಕೇ ಬೇಡವೇ ಎಂದು ನಿರ್ಧರಿಸಲಿದೆ. ವಿಧಾನಸಭೆ ಮತ್ತು ವಿಧಾನಪರಿಷತ್‌ ಸಭಾಂಗಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎರಡು ಆಸನಗಳ ಮಧ್ಯೆ ಗಾಜಿನ ತಡೆ ವ್ಯವಸ್ಥೆ ಮಾಡಲಾಗಿದೆ. ಫೇಸ್‌ ಶೀಲ್ಡ್‌ ಮತ್ತು ಮಾಸ್ಕ್, ಸ್ಯಾನಿಟೈಸರ್‌ ಒದಗಿಸಲಾಗುತ್ತಿದೆ. ಸದನಕ್ಕೆ ಬರುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯ ವಾಗಿದ್ದು, 72 ತಾಸು ಮುಂಚಿತವಾಗಿ ಪರೀಕ್ಷೆ ಮಾಡಿಸಿ ವರದಿಯೊಂದಿಗೆ‌ ಪ್ರವೇಶಿಸಬೇಕಿದೆ.

 ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next