Advertisement

ಹುಲ್ಲಿನ ಛಾವಣಿಯಲ್ಲಿ ಆರಂಭವಾದ ಶಾಲೆಗೀಗ 107ರ ಸಂಭ್ರಮ

12:10 AM Nov 11, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಬಜಪೆ: 1880ರಲ್ಲಿ ಬ್ರಿಟಿಷರು ದೇಶವನ್ನು ಆಳ್ವಿಕೆ ನಡೆಸುತ್ತಿದ್ದ ಕಾಲವದು. ಈ ಸಮಯದಲ್ಲಿ ಜಮೀನಾªರರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಎಕ್ಕಾರಿನ ನಳಿನಿ ನದಿ ದಂಡೆಯ ಬಡಗು ಎಕ್ಕಾರಿನಲ್ಲಿ ಕಾಳಮ್ಮ ಹೆಗ್ಗಡ್ತಿಯವರು ಮಣ್ಣಿನ ಗೋಡೆಯ ಮುಳಿಹುಲ್ಲಿನ ಛಾವಣಿಯಲ್ಲಿ ಪಾಠಶಾಲೆಯನ್ನು ಆರಂಭಿಸಿದರು. ಮುಂದೆ ಈ ಶಾಲೆಯು ಕಾಳಮ್ಮ ಶಾಲೆ ಎಂದೇ ಪ್ರಸಿದ್ಧಿ ಪಡೆಯಿತು.

1912ರಲ್ಲಿ ತಾಲೂಕು ಬೋರ್ಡ್‌ಗೆ ಸೇರ್ಪಡೆ
ಕಾವರಮನೆ ಅಣ್ಣಪ್ಪ ಹೆಗ್ಗಡೆಯವರು 1910ರಲ್ಲಿ ಈ ಶಾಲೆಯನ್ನು ಸ್ವಂತ ಕಟ್ಟಡದಲ್ಲಿ ನಿರ್ಮಿಸಿದರು. 1912ರಲ್ಲಿ ಶಾಲೆಯನ್ನು ತಾಲೂಕು ಬೋರ್ಡ್‌ಗೆ ಸೇರ್ಪಡೆಗೊಳಿಸಲಾಯಿತು. ಇಲ್ಲಿಂದ ಸಾಕ್ಷರತಾ ಕ್ರಾಂತಿ ಶಕೆ ಆರಂಭವಾಯಿತು. ಆ ವರ್ಷದಿಂದಲೇ ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ಪ್ರಾರಂಭವಾಯಿತು. ಏಕೋಪಾಧ್ಯಾಯ ಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿ ರಾಮಯ್ಯ ಮೇಸ್ಟ್ರೆ ಸೇವೆ ಸಲ್ಲಿಸಿದ್ದರು. 1947ರ ಅನಂತರ ಈ ಶಾಲೆಗೆ ಬಡಗ ಎಕ್ಕಾರು ಕಿರಿಯ ಪ್ರಾಥಮಿಕ ಸರಕಾರಿ ಶಾಲೆಯೆಂದು ಕರೆಯಲಾಯಿತು. ಇಲ್ಲಿ 1ರಿಂದ 5ನೇ ತರಗತಿಯ ತನಕ ಶಿಕ್ಷಣ ನೀಡಲಾಗುತ್ತಿತ್ತು. 1998ರಲ್ಲಿ 7ನೇ ತರಗತಿಯವರೆಗೆ ವಿಸ್ತರಣೆಗೊಂಡಿತು.

ಬಡಗ ಎಕ್ಕಾರಿನ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು 2012-13ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಅಗರಗುತ್ತು ದಿ| ಪದ್ಮಾವತಿ ಎಲ್‌. ರೈ ಅವರು 0.77 ಎಕ್ರೆ ಸ್ಥಳವನ್ನು ಶಾಲೆಗೆ ದಾನಪತ್ರದ ಮೂಲಕ ನೀಡಿದ್ದಾರೆ. ಮುಖ್ಯ ಶಿಕ್ಷಕರಾಗಿದ್ದ ಡಿ.ಎನ್‌. ರಾಘವ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿವೆ. ಶಾಲೆಗೆ ಹೋಬಳಿ ಮಟ್ಟದ ಅತ್ಯುತ್ತಮ ಶಾಲಾಭಿವೃದ್ಧಿ ಸಮಿತಿ ಪ್ರಶಸ್ತಿಯು ಕೂಡ ಲಭಿಸಿದೆ.ಪ್ರಸ್ತುತ 5 ಶಿಕ್ಷಕರಿದ್ದು 92 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಕಟೀಲು ದಿ| ಗೋಪಾಲಕೃಷ್ಣ ಆಸ್ರಣ್ಣ, ದಿ| ಜಿ.ಸಿ. ಕುಕ್ಯಾನ್‌, ವೈ. ರಮಾನಂದ ರಾವ್‌, ಮೋನಪ್ಪ ಶೆಟ್ಟಿ ಎಕ್ಕಾರು, ಡಾ| ರಾಮದಾಸ್‌ನಾಯಕ್‌, ನ್ಯಾಯಾಧೀಶ ಶ್ರೀನಿವಾಸ್‌, ಡಾ| ಗಣನಾಥ ಎಕ್ಕಾರು, ಡಾ| ಪದ್ಮನಾಭ ಭಟ್‌, ಮುಂಬಯಿ ಉದ್ಯಮಿ ಆನಂದ ಶೆಟ್ಟಿ, ಡಾ| ಪ್ರಭಾಕರ ನಾಯಕ್‌ ಮೊದಲಾದವರು ಈ ಶಾಲೆಯ ಹಳೆ ವಿದ್ಯಾರ್ಥಿಗಳು.

Advertisement

ಶಾಲೆಯ ಶತಮಾನೋತ್ಸವದ ನೆನಪಿಗಾಗಿ ಶತಮಾನೋತ್ಸವ ಸಮಿತಿಯನ್ನು ರಚಿಸಿ, ಅದರ ಅಧ್ಯಕ್ಷ ರತ್ನಾಕರ ಶೆಟ್ಟಿ ಅವರ ನೇತೃತ್ವದಲ್ಲಿ ಹಳೆವಿದ್ಯಾರ್ಥಿ ಹಾಗೂ ಎಲ್ಲರ ಸಹಕಾರದೊಂದಿಗೆ ಶತಮಾನೋತ್ಸವ ಕಟ್ಟಡವನ್ನು ನಿರ್ಮಿಸಲಾಯಿತು. ಕೆಳಅಂತಸ್ತಿನಲ್ಲಿ ತರಗತಿಯ ಕೋಣೆಗಳು ಹಾಗೂ ಒಂದನೇ ಮಹಡಿಯಲ್ಲಿ ಶಾಲಾ ಸಭಾಭವನವನ್ನು ನಿರ್ಮಿಸಲಾಯಿತು. ಹೊಸತಾದ ಬಯಲು ರಂಗಮಂಟಪ ಈ ಸಂದರ್ಭ ನಿರ್ಮಿಸಲಾಯಿತು. ಪ್ರಸ್ತುತ ಶಾಲೆಯಲ್ಲಿ ಕೃಷಿ ತೋಟ ಇದ್ದು ಇದರಲ್ಲಿ ಬಾಳೆ, ಪಪ್ಪಾಯ, ಬಸಳೆ, ಅಲಸಂಡೆ ಬೆಳೆಸಲಾಗುತ್ತದೆ.

ಮರಳಿನ ಮೇಲೆ ಅಕ್ಷರಾಭ್ಯಾಸ
ಮೊದಲಿಗೆ ನೆಲದ ಮೇಲೆ ತೆಳು ಮರಳನ್ನು ಹರಡಿ ಅದರ ಮೇಲೆ ಬೆರಳುಗಳಿಂದ ಅಕ್ಷರ ಅಭ್ಯಾಸ ಮಾಡಿಸಲಾಗುತ್ತಿತ್ತು ಮತ್ತು ಹಂಗರಕ ಗಿಡದ ಕೆಂಪು ಕಾಯಿಗಳನ್ನು ಪೋಣಿಸಿ ಅಕ್ಷರಗಳನ್ನು ಬರೆಸಲಾಗುತ್ತಿತ್ತು. ಮಕ್ಕಳಿಗೆ ಕಂಠಪಾಠ ಬಂದ ಮೇಲೆಯೇ ಅಕ್ಷರಗಳನ್ನು ಬರೆಸುತ್ತಿದ್ದರು. ಅಂದು ಕಟೀಲು, ಮಚ್ಚಾರು, ಮುಚ್ಚಾರು, ಶಿಬರೂರು, ಕುತ್ತೆತ್ತೂರು, ಪೆರ್ಮುದೆ, ಕತ್ತಲ್‌ಸಾರ್‌ನಿಂದ ವಿದ್ಯಾರ್ಥಿಗಳು ಈ ಶಾಲೆಗೆ ಶಿಕ್ಷಣಕ್ಕಾಗಿ ಬರುತ್ತಿದ್ದರು.

ಶತಮಾನ ಪೂರೈಸಿದ ಶಾಲೆಯು ಊರಿನ ಹೆಮ್ಮೆಯ ವಿದ್ಯಾ ದೇಗುಲವಾಗಿದೆ. ಹಳೆವಿದ್ಯಾರ್ಥಿ ಸಂಘ, ಹಾಗೂ ಶಾಲಾಭಿವೃದ್ಧಿ ಸಮಿತಿ ಶಾಲಾ ಪ್ರಗತಿಗೆ ಬೆನ್ನೆಲುಬಾಗಿ ನಿಂತಿರುವುದು ಸಂತಸದ ವಿಚಾರವಾಗಿದೆ.
-ಶಶಿಪ್ರಭಾ ಬಾೖ ಕೆ.,
ಪ್ರಭಾರ ಶಾಲಾ ಮುಖ್ಯೋಪಾಧ್ಯಾಯಿನಿ

ಈ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸಕ್ಕೆ ಒಳ್ಳೆಯ ಆರಂಭ ಸಿಕ್ಕಿತು. ಗ್ರಾಮೀಣ ಪ್ರದೇಶದಲ್ಲಿ ವೈದ್ಯರೇ ಇಲ್ಲದ ಕಾಲದಲ್ಲಿ ನಾನು ವೈದ್ಯನಾಗಿ ಪಾಸಾಗಿ ಬಂದಿದ್ದೆ. ನನ್ನ ಮೊದಲ ವೃತ್ತಿ ಜೀವನ ಊರಿನಲ್ಲಿ ಸೇವೆ ನೀಡುವ ಮೂಲಕ ಆರಂಭಿಸಿದ್ದೆ. ಇದು ನನ್ನ ಈ ಶಾಲಾ ಶಿಕ್ಷಣದಿಂದ ಸಾಧ್ಯವಾಗಿದೆ.
ಡಾ| ರಾಮದಾಸ್‌ ನಾಯಕ್‌, ಮುಖ್ಯಸ್ಥರು. ಪೆಥಾಲಜಿ ವಿಭಾಗ , ಯೇನಪೊಯ ಮೆಡಿಕಲ್‌ ಕಾಲೇಜು,

ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next