ಬೆಂಗಳೂರು: “ಸರ್ಕಾರ ಸುಭದ್ರವಾಗಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ. ಪ್ರಸ್ತುತ ನಡೆಯುತ್ತಿರುವ ವಿವಿಧ ಪ್ರಕಾರದ “ರಾಜಕೀಯ ನಾಟಕ’ಗಳು ಯಶಸ್ವಿ ಆಗುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
ಪುನರುಚ್ಚರಿಸಿದರು.
ಇಲ್ಲಿನ ಗೋವಿಂದರಾಜನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯದಲ್ಲಿ ಆಗಾಗ್ಗೆ ಪೌರಾಣಿಕ, ಸಾಮಾಜಿಕ ನಾಟಕ ಪ್ರಹಸನಗಳು ನಡೆಯುತ್ತಿರುತ್ತವೆ. ಆದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆಗಬೇಕಾದ ಕೆಲಸಗಳ ಕಡೆ ಗಮನಹರಿಸೋಣ ಎಂದು ಹೇಳಿದರು.
ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರ ಉರುಳಿಸಿ, ತಾವು ಸರ್ಕಾರ ರಚಿಸಬೇಕೆಂದು ಬಿಜೆಪಿ ದೊಡ್ಡ ನಾಟಕ ಆಡುತ್ತಿದೆ. ಆದರೆ, ಈ ನಾಟಕ ಯಶಸ್ವಿ ಆಗುವುದಿಲ್ಲ. ಸರ್ಕಾರ ಭದ್ರವಾಗಿದೆ ಎಂದರು.
ಕೆಲವರು “ನಾಟ್ ರೀಚಬಲ್’ ಆಗಿದ್ದಾರಲ್ಲಾ ಎಂದಾಗ, “ಹಾಗೇನಿಲ್ಲ, ಎಲ್ಲರೂ ದೂರವಾಣಿಯಲ್ಲಿ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಈ ಪೈಕಿ ಮೂವರು ಶಾಸಕರು ಚೆನ್ನೈಗೆ ದೇವರ ದರ್ಶನಕ್ಕೆ ಹೋಗಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ನಾನು ಕೂಡ ದೇವರ ದರ್ಶನಕ್ಕೆ ಹೋಗಿದ್ದೆ’ ಎಂದು ಸಮಜಾಯಿಷಿ ನೀಡಿದರು.