Advertisement

ಸರ್ಕಾರಿ ಶಾಲೆಗಳಿಗೆ ಬೇಕಿದೆ ಕಾಯಕಲ್ಪ; ಜಿಲ್ಲೆಯಲ್ಲಿ 1497 ಕೊಠಡಿ ಶಿಥಿಲಾವಸ್ಥೆ

06:25 PM Jun 20, 2022 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ ಶಾಲೆಗಳು ದುರಸ್ತಿಯಲ್ಲಿವೆ. ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಹುದ್ದೆ ಸೇರಿದಂತೆ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಡ ಮಕ್ಕಳ ಭವಿಷ್ಯ ರೂಪಿಸುವ ಇಂಥ ಸರ್ಕಾರಿ ಶಾಲೆಗಳು ಶಿಥಿಲಗೊಂಡು ದುರಸ್ತಿಗಾಗಿ ಕಾಯುತ್ತಿವೆ.

Advertisement

ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಸರ್ಕಾರ ಕಣ್ಣು ತೆರೆದು ಅಗತ್ಯದಷ್ಟು ಅನುದಾನ ಬಿಡುಗಡೆ ಮಾಡಬೇಕಿದೆ.

ದುರಸ್ತಿಗೆ ಕಾಯುತ್ತಿರುವ 1107ಸರ್ಕಾರಿ ಶಾಲೆ: ಜಿಲ್ಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪೌಢಶಾಲೆ ಸೇರಿದಂತೆ ಒಟ್ಟು 1107 ಸರ್ಕಾರಿ ಶಾಲೆಗಳ ಕೊಠಡಿ ದುರಸ್ತಿಗಾಗಿ ಕಾಯುತ್ತಿವೆ. ಕೆ.ಆರ್‌ .ಪೇಟೆ 243, ಮದ್ದೂರು 139, ಮಳವಳ್ಳಿ 188, ಮಂಡ್ಯ ಉತ್ತರ 105, ಮಂಡ್ಯ ದಕ್ಷಿಣ 60, ನಾಗಮಂಗಲ 195, ಪಾಂಡವಪುರ 100 ಹಾಗೂ ಶ್ರೀರಂಗಪಟ್ಟಣದಲ್ಲಿ 77 ಶಾಲೆಗಳಿವೆ.

1494 ಸಣ್ಣ ಪ್ರಮಾಣದ ಶಿಥಿಲಗೊಂಡ ಕೊಠಡಿ: ಸಣ್ಣ ಪ್ರಮಾಣದಲ್ಲಿ ಶಿಥಿಲಗೊಂಡಿರುವ 1494 ಶಾಲಾ ಕೊಠಡಿಗಳಿವೆ. ಕೆ.ಆರ್‌.ಪೇಟೆ 243 ಕೊಠಡಿ, ಮದ್ದೂರು 236, ಮಳವಳ್ಳಿ 256, ಮಂಡ್ಯ ಉತ್ತರ 124, ಮಂಡ್ಯ ದಕ್ಷಿಣ 157, ನಾಗಮಂಗಲ 203, ಪಾಂಡವಪುರ 151 ಹಾಗೂ ಶ್ರೀರಂಗಪಟ್ಟಣದ 124 ಕೊಠಡಿ ದುರಸ್ತಿಯಲ್ಲಿವೆ.

1497 ಸಂಪೂರ್ಣ ಶಿಥಿಲಗೊಂಡ ಕೊಠಡಿ: ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ 1497 ಕೊಠಡಿ ಶಿಥಿಲಾವಸ್ಥೆಯಲ್ಲಿವೆ. ಕೆ.ಆರ್‌.ಪೇಟೆ 258 ಕೊಠಡಿ, ಮದ್ದೂರು 221, ಮಳವಳ್ಳಿ 255, ಮಂಡ್ಯ ಉತ್ತರ 132, ಮಂಡ್ಯ ದಕ್ಷಿಣ 123, ನಾಗಮಂಗಲ 250, ಪಾಂಡವಪುರ 119 ಹಾಗೂ ಶ್ರೀರಂಗಪಟ್ಟಣದ 139 ಕೊಠಡಿ ದುರಸ್ತಿಯಾಗಬೇಕಿದೆ.

Advertisement

ಸರ್ಕಾರಕ್ಕೆ 30.07 ಕೋಟಿ ರೂ.ಗೆ ಪ್ರಸ್ತಾವನೆ: ಶಾಲೆ ಹಾಗೂ ಕೊಠಡಿಗಳ ದುರಸ್ತಿಗೆ ಸರ್ಕಾರಕ್ಕೆ ರಾಜ್ಯವಲಯ, ಜಿಪಂ ಅನುದಾನ ಸೇರಿ ಒಟ್ಟು 30.07 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ರಾಜ್ಯವಲಯಕ್ಕೆ 24.58 ಕೋಟಿ ರೂ. ಹಾಗೂ ಜಿಪಂಗೆ 5.49 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಂದಾಜು ಪಟ್ಟಿ ಸಲ್ಲಿಸಿದೆ.

ಕ್ರಿಯಾ ಯೋಜನೆ ವಿವರ: ಶಾಲಾ ಕೊಠಡಿಗಳ ದುರಸ್ತಿಗೆ ಬೇಕಾಗಿರುವ ಅಗತ್ಯ ಅನುದಾನದ ಹಿನ್ನೆಲೆ 2022-23ನೇ ಸಾಲಿನ ರಾಜ್ಯ ವಲಯಕ್ಕೆ ವಿವಿಧ ಯೋಜನೆಯಡಿ ಹಣ ಬಿಡುಗಡೆಗೆ 522 ಶಾಲೆಗಳ 391 ಕೊಠಡಿಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ರಾಜ್ಯ ವಲಯ ಯೋಜನೆಯಡಿ ಸಾಮಾನ್ಯ ವಲಯದಿಂದ 3 ಶಾಲೆಗಳ 3 ಕೊಠಡಿ ನಿರ್ಮಾಣಕ್ಕೆ 43.80 ಲಕ್ಷ ರೂ., ಎಸ್‌ಡಿಪಿ ಯೋಜನೆಯಡಿ 58 ಪ್ರಾಥಮಿಕ ಶಾಲೆಗಳ 78 ಕೊಠಡಿ ನಿರ್ಮಾಣಕ್ಕೆ 11.38 ಕೋಟಿ ರೂ., ಎಸ್‌ಡಿಪಿ ಯೋಜನೆಯಡಿ 23 ಪ್ರಾಥಮಿಕ ಶಾಲೆಗಳ 27 ಕೊಠಡಿಗಳ ದುರಸ್ತಿಗೆ 13.50 ಲಕ್ಷ ರೂ., ಸಾಮಾನ್ಯ ವಲಯದ 30 ಪ್ರಾಥಮಿಕ ಶಾಲೆಗಳ 66 ಕೊಠಡಿಗಳ ದುರಸ್ತಿಗೆ 33 ಲಕ್ಷ ರೂ., ಸಾಮಾನ್ಯ ವಲಯ 25 ಪ್ರೌಢಶಾಲೆಗಳ 44 ಕೊಠಡಿ ನಿರ್ಮಾಣಕ್ಕೆ 7.48 ಕೋಟಿ ರೂ., ಸಾಮಾನ್ಯ ವಲಯ 32 ಪ್ರೌಢಶಾಲೆಗಳ 106 ಕೊಠಡಿ ದುರಸ್ತಿಗೆ 79.50 ಲಕ್ಷ ರೂ.ಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.

ಶೌಚಾಲಯ, ಪೀಠೊಪಕರಣಕ್ಕೂ ಪ್ರಸ್ತಾವನೆ: ರಾಜ್ಯ ವಲಯದ ಕ್ರಿಯಾ ಯೋಜನೆಯಲ್ಲೂ ಶೌಚಾಲಯ, ಪೀಠೊಪಕರಣಗಳಿಗೂ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿಕ್ಷಣ ಇಲಾಖೆ ಅನುದಾನವನ್ನು ನರೇಗಾ ಯೋಜನೆಯಡಿ ಒಗ್ಗೂಡಿಸುವಿಕೆಯೊಂದಿಗೆ 67 ಶಾಲೆಗೆ 67 ಶೌಚಾಲಯ ನಿರ್ಮಾಣಕ್ಕೆ 1.34 ಕೋಟಿ ರೂ. ಹಾಗೂ ರಾಜ್ಯ ವಲಯ ಯೋಜನೆಯಡಿ ಸರ್ಕಾರಿ ಶಾಲೆಗೆ ಅಗತ್ಯವಿರುವ ಸುಮಾರು 284 ಶಾಲೆಗೆ 5029 ಪೀಠೊಪಕರಣ ಒದಗಿಸುವಂತೆ 2.67 ಕೋಟಿ ರೂ. ಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.

ಸರ್ಕಾರದಿಂದ ಬಿಡುಗಡೆಯಾಗದ ಅನುದಾನ: ಶಾಲಾ ಕೊಠಡಿ, ಕಟ್ಟಡಗಳ ದುರಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಹಲವು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೂ, ಇದುವರೆಗೂ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಜಿಪಂ ಹಾಗೂ ರಾಜ್ಯವಲಯ ಸೇರಿ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆ ಅಂದಾಜು ಪಟ್ಟಿ ಸಲ್ಲಿಸಿದ್ದರೂ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದೆ.

ಮಳೆಗಾಲದಲ್ಲೇ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ
ಪ್ರಸ್ತುತ ಮಳೆಗಾಲ ಆರಂಭಗೊಂಡಿದೆ. ಜಿಲ್ಲಾದ್ಯಂತ ಈಗಾಗಲೇ ಪೂರ್ವ ಮುಂಗಾರಿನಲ್ಲಿ ಹಲವು ಶಾಲೆಗಳು ಸೋರುತ್ತಿದ್ದವು. ಅಲ್ಲಲ್ಲಿ ಶಾಲೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿತ್ತು. ಈಗ ಮುಂಗಾರು ಮಳೆ ಅಬ್ಬರಿಸುತ್ತಿದೆ. ಇದರಿಂದ ಮತ್ತೆ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳು
ಮಳೆ ನೀರಿನಿಂದ ಸೋರುವ ಸ್ಥಿತಿ ಎದುರಾಗಿದೆ. ಕೋವಿಡ್‌ ನಿಂದ 2 ವರ್ಷಗಳ ನಂತರ ಸರ್ಕಾರಿ ಶಾಲೆಗಳು ಆರಂಭಗೊಂಡಿವೆ. ಕೂಡಲೇ ಸರ್ಕಾರ ಇತ್ತ ಗಮನಹರಿಸಬೇಕಿದೆ.

ದಾನಿಗಳ ನೆರವು ಅಗತ್ಯ
ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ದಾನಿಗಳು, ಸಂಘ-ಸಂಸ್ಥೆಗಳು ಕೈಜೋಡಿಸಬೇಕಾಗಿದೆ. ಸರ್ಕಾರಿ ಶಾಲೆಗಳ ಉಳಿವಿನಿಂದ ಬಡ ವಿದ್ಯಾರ್ಥಿಗಳ ಶಿಕ್ಷಣ ಸುಧಾರಿಸಲಿದೆ. ಈಗಾಗಲೇ ಜಿಲ್ಲೆಯಲ್ಲಿ ಹಲವು ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳು, ದಾನಿಗಳು, ಸಂಘ-ಸಂಸ್ಥೆಗಳು ಕೈಜೋಡಿಸುವ ಮೂಲಕ ಕಾಯಕಲ್ಪಕ್ಕೆ ಮುಂದಾಗಿವೆ. ಈ ನೆರವು ಇನ್ನೂ ಹೆಚ್ಚಾಗಬೇಕಿದೆ.

ಶಾಲೆ ಕೊಠಡಿಗಳ ನಿರ್ಮಾಣ, ಶಿಥಿಲಗೊಂಡಿರುವ ಶಾಲಾ ಕೊಠಡಿ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಪಂ ಹಾಗೂ ರಾಜ್ಯವಲಯದ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಲಾಗಿದೆ.
ಡಾ.ಜವರೇಗೌಡ,
ಉಪನಿರ್ದೇಶಕ, ಸಾರ್ವಜನಿಕ
ಶಿಕ್ಷಣ ಇಲಾಖೆ, ಮಂಡ್ಯ

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next