Advertisement

ಇದು ಬರೀ ಸ್ಕೂಲಲ್ಲ, ಸೂಜಿಗಲ್ಲು!

06:00 AM Jul 24, 2018 | |

ಸರ್ಕಾರಿ ಶಾಲೆಗೆ ಸೇರಿಸಲು ಪಾಲಕರು ಹಿಂದೆಮುಂದೆ ನೋಡುತ್ತಾರೆ. ಆದರೆ, ಶಿವಮೊಗ್ಗದ ದುರ್ಗಿಗುಡಿ ಸರ್ಕಾರಿ ಶಾಲೆಯ ಪರಿಸ್ಥಿತಿ ಪೂರ್ತಿ ಉಲ್ಟಾ. ಈ ವರ್ಷ ಸುಮಾರು 150 ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಈ ಶಾಲೆಗೆ ಸೇರಿದ್ದಾರೆ. ಯಾಕೆ ಗೊತ್ತಾ? ಅದೇ ಶಾಲೆಯ ವಿದ್ಯಾರ್ಥಿನಿ ನಂದಿತಾ ಹೇಳುತ್ತಾಳೆ ಕೇಳಿ… ಇದು “ನನ್ನ ಶಾಲೆ ನನ್ನ ಹೆಮ್ಮೆ’ ಸರಣಿಯ ಮೂರನೇ ಚಿತ್ರಣ…

Advertisement

ಒಂದೂರಲ್ಲಿ ಒಬ್ಬ ಹುಡುಗ ಇದ್ದ. ಮನೆಯಲ್ಲಿ ಅಕ್ಕ, ಅಮ್ಮ ಇಬ್ಬರೇ. ಚಿಕ್ಕಂದಿನಲ್ಲೇ ಅವನ ತಂದೆ ತೀರಿಕೊಂಡಿದ್ದರು. ಅವನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ದೊಡ್ಡವನಾದ ಮೇಲೆ ಮೇಷ್ಟ್ರಾಗಬೇಕೆಂದು ತುಂಬಾ ಕನಸುಗಳನ್ನು ಕಂಡಿದ್ದ. ಖಾಸಗಿ ಶಾಲೆಯಲ್ಲಿ ಓದಬೇಕೆಂಬ ಇಚ್ಛೆಯೇನೋ ಇತ್ತು. ಆದರೆ, ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇರುವಾಗ ಹೆಚ್ಚಿನ ಫೀಸು ಕೊಟ್ಟು ಓದುವುದಾದರೂ ಹೇಗೆ? ಅದೇ ಸಮಯದಲ್ಲಿ ಅಕ್ಕನ ಮದುವೆ ನಡೀತು. ಮದುವೆ ಸಾಲ ಬಹಳವಿತ್ತು. ಬೇರೆ ದಾರಿಯಿಲ್ಲದೆ ಹುಡುಗ ಓದು ಬಿಟ್ಟು ಕೆಲಸ ಹಿಡಿಯಬೇಕಾಯಿತು. 

  ಮದುವೆ ಸಾಲ ತೀರಿತು. ಅಷ್ಟರಲ್ಲಾಗಲೇ ಹುಡುಗ ಬೆಳೆದು ದೊಡ್ಡವನಾಗಿದ್ದ. ಓದುವ ಆಸೆ ನುಚ್ಚುನೂರಾಗಿತ್ತು. ಮನೆಯನ್ನು ಸಂಭಾಳಿಸುವುದರಲ್ಲೇ ಆತನ ವಯಸ್ಸು, ದುಡಿಮೆ ಖರ್ಚಾಗಿಬಿಟ್ಟಿತ್ತು. ಜೀವನದ ತೇರನ್ನು ಏಗುತ್ತಲೇ ಎಳೆದ ಹುಡುಗ ಬ್ಯಾಂಕ್‌ ಲೋನ್‌ ಪಡೆದು ಆಟೋ ಖರೀದಿಸಿದ. ಆ ಆಟೋವನ್ನು ಸ್ವಂತದ್ದಾಗಿಸಿಕೊಳ್ಳಲು ಮತ್ತೆ ವರ್ಷಗಳನ್ನು ಸವೆಸಿದ. ಈ ನಡುವೆ ಮದುವೆಯಾಯಿತು. ಎರಡು ಮಕ್ಕಳಾದವು. ಅದರಲ್ಲೊಬ್ಬಳು ನಾನು, ನಂದಿತಾ ಬಸವರಾಜು.

  ಅಮ್ಮ ಅಂಗನವಾಡಿಯಲ್ಲಿ ಹೆಲ್ಪರ್‌, ಅಪ್ಪ ಆಟೋ ಓಡಿಸ್ತಾರೆ. ನಮ್ಮಪ್ಪನಿಗೆ ಈಗ ಒಂದೇ ಆಸೆ, ತಾನು ಮೇಷ್ಟ್ರಾಗದಿದ್ರೂ ಮಕ್ಕಳು ಆಗಲಿ ಅಂತ. ನಮಗೆ ಆಸ್ತಿ ಗೀಸ್ತಿ ಏನೂ ಇಲ್ಲ. ಅಪ್ಪನ ದಿನದ ಸಂಪಾದನೆ 200ರಿಂದ 300 ರೂಪಾಯಿ. ಹಾಗಿದ್ದೂ ನಮ್ಮನ್ನು ಖಾಸಗಿ ಶಾಲೆಗೆ ಸೇರಿಸಿದ್ದು ಅವರ ದೊಡ್ಡತನ. ತಮಗೆ ಉತ್ತಮ ಶಿಕ್ಷಣ ಸಿಗದಿದ್ದರೂ, ಮಕ್ಕಳಿಗೆ ಸಿಗಲಿ ಎಂದು ಎಲ್ಲಾ ತಂದೆ ತಾಯಿಯರು ಬಯಸುತ್ತಾರೆ. ಹಾಗಾಗಿಯೇ ಹೊಟ್ಟೆ ಬಟ್ಟೆ ಕಟ್ಟಿಯಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ದಿನಕ್ಕೆ ಇನ್ನೂರು ಮುನ್ನೂರು ರೂ. ದುಡಿಯುವ ಅಪ್ಪನಂಥವರು ವರ್ಷಕ್ಕೆ 20,000- 30,000 ರೂ. ಹೊಂದಿಸುವುದು ಎಷ್ಟು ಕಷ್ಟ ಗೊತ್ತಾ? ಅಪ್ಪ- ಅಮ್ಮ ನಮಗಾಗಿ ಕಷ್ಟ ಪಡೋದನ್ನು ನೋಡಿದಾಗ ತುಂಬಾ ಬೇಜಾರಾಗುತ್ತಿತ್ತು.

  ಈ ಸಂದರ್ಭದಲ್ಲೇ ಸರ್ಕಾರಿ ಶಾಲೆಯ ಕುರಿತ ಸುದ್ದಿಯೊಂದು ಅಮ್ಮನ ಕಿವಿಗೆ ಬಿದ್ದಿತ್ತು. ನಗರದ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲವೆನ್ನುವ ಹೆಸರನ್ನು ಹೊಂದಿದ್ದ ಆ ಸರ್ಕಾರಿ ಶಾಲೆ ದುರ್ಗಿಗುಡಿ ಶಾಲೆ. ಮೊದಮೊದಲು ಅಮ್ಮನಿಗೂ ನಂಬಿಕೆ ಇರಲಿಲ್ಲ. ಆದರೆ, ಅಲ್ಲಿ ಸ್ವತಃ ಹೋಗಿ ನೋಡಿದಾಗ ಅಮ್ಮ ಅಚ್ಚರಿಯಾಗಿದ್ದರು. ನಾನು ಓದುತ್ತಿದ್ದ ಖಾಸಗಿ ಶಾಲೆಯಲ್ಲೂ ಆ ಮಟ್ಟಿಗಿನ ವ್ಯವಸ್ಥೆ ಇರಲಿಲ್ಲ. ಈಗ ನಾನು, ತಂಗಿ ಇಬ್ಬರೂ ಶಿವಮೊಗ್ಗದ ದುರ್ಗಿಗುಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ತುಂಬಾ ಖುಷಿಯಾಗುತ್ತೆ ನಾನು ಈ ಶಾಲೆಯ ವಿದ್ಯಾರ್ಥಿ ಅಂತ ಹೇಳಿಕೊಳ್ಳೋಕೆ. ಅಲ್ಲದೆ, ಅಪ್ಪ ಅಮ್ಮನಿಗೆ ನಮ್ಮ ವಿದ್ಯಾಭ್ಯಾಸಕ್ಕೆ ಕಂತೆ ಕಂತೆ ದುಡ್ಡು ಹೊಂದಿಸುವ ಚಿಂತೆ ಇಲ್ಲ ಎನ್ನುವುದು ನನಗೆ ನಿರಾತಂಕದ ಸಂಗತಿ.

Advertisement

  ಹೆಚ್ಚಿನ ಬೆಲೆಯುಳ್ಳ ವಸ್ತು ಯಾವತ್ತೂ ಶ್ರೇಷ್ಠ ಅಂತ ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ಅದು ಎಲ್ಲಾ ವಿಚಾರದಲ್ಲೂ ನಿಜ ಅಲ್ಲ ಅಂತ ತಿಳಿಯೋಕೆ ನಮ್ಮ ಶಾಲೆಯನ್ನು ನೋಡಬೇಕು. ನಾವು 925 ಮಕ್ಕಳು ಕಲಿಯುತ್ತಿದ್ದೇವೆ. ಕೆಲ ತರಗತಿಗಳಲ್ಲಿ 3ರಿಂದ 4 ಸೆಕ್ಷನ್‌ಗಳಿವೆ. ನಂಬೋದಿಕ್ಕೇ ಕಷ್ಟ ಅಲ್ವಾ? ಬರೀ ಖಾಸಗಿ ಶಾಲೆಗಳಲ್ಲಿ ಮಾತ್ರ ಈ ರೀತಿಯ ದೃಶ್ಯಗಳು ನೋಡಲು ಸಿಗುತ್ತವೆ. ಆಗಲೇ ಹೇಳಿದಂತೆ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲ ನಮ್ಮ ದುರ್ಗಿಗುಡಿ ಶಾಲೆ. ಕೆಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳೇ ಇಲ್ಲದೆ ಬಾಗಿಲು ಮುಚ್ಚುವ ಸನ್ನಿವೇಶ ಎದುರಾಗಿರುವ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಮಾತ್ರ ಮಕ್ಕಳು ತುಂಬಿರುವುದಕ್ಕೆ ಕಾರಣ ಇಲ್ಲದಿಲ್ಲ. 

   ಅಂದಹಾಗೆ ಹೇಳ್ಳೋದನ್ನೇ ಮರೆತಿದ್ದೆ: ನಮ್ಮ ದುರ್ಗಿಗುಡಿ ಶಾಲೆ ಇಂಗ್ಲಿಷ್‌ ಮೀಡಿಯಂ! 1922ರಲ್ಲಿ ಶುರುವಾಗಿದ್ದ ನಮ್ಮ ಶಾಲೆಯಲ್ಲಿ ಎಪ್ಪತ್ತರ ದಶಕದವರೆಗೂ ಕನ್ನಡ ಮಾಧ್ಯಮ ಮಾತ್ರವೇ ಇತ್ತು. 1979ರಲ್ಲಿ ಇಂಗ್ಲಿಷ್‌ ಮೀಡಿಯಂ ಸೇರ್ಪಡೆಗೊಂಡಿತು. ಶಾಲೆಯಲ್ಲಿ ಒಂದರಿಂದ ಏಳರವರೆಗೆ ತರಗತಿಗಳಿವೆ. ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯವಿದೆ. ಟೀಚರ್‌ಗಳು, ನಮಗೆ ವಿಷಯಗಳ ಬಗೆಗೆ ಆಸಕ್ತಿ ಬರೋ ರೀತಿ ಪಾಠ ಮಾಡ್ತಾರೆ. ವಿದ್ಯಾರ್ಥಿಗಳೂ ಅಷ್ಟೇ ಶಿಸ್ತಿನಿಂದ ಕಲಿಯುವುದರ ಜೊತೆಗೆ ಮನೆಯಲ್ಲೂ ಶ್ರದ್ಧೆಯಿಂದ ಓದುತ್ತಾರೆ. ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಿರುವ ಅಪ್ಪ-ಅಮ್ಮಂದಿರು ಮಕ್ಕಳ ಓದಿನ ಬಗ್ಗೆ ಗಮನ ಹರಿಸುತ್ತಾರೆ. ಪಾಲಕರಲ್ಲಿ ಅನೇಕರು ಕಡುಬಡವರಾಗಿದ್ದರೂ, ಅನಕ್ಷರಸ್ಥರಾಗಿದ್ದರೂ ನಮ್ಮ ಶಾಲೆಯ ವಾತಾವರಣ ಅವರಲ್ಲಿಯೂ ಜಾಗೃತಿ ಮೂಡಿಸಿದೆ. ನಿಜವಾದ ಸಾಕ್ಷರತೆ ಅಂದರೆ ಇದೇ ಅಲ್ಲವೇ? ಅಂಥ ವಾತಾವರಣ ನಮ್ಮ ಶಾಲೆಯದು.

ನಮ್ಮ ಆಟದ ಮೈದಾನ ತುಂಬಾ ದೊಡ್ಡಕ್ಕಿದೆ. ಕಬಡ್ಡಿ, ಕೋಕೋ, ಫ‌ುಟ್‌ಬಾಲ್‌ ಮುಂತಾದ ಆಟಗಳನ್ನು ಆಡಿಸುತ್ತಾರೆ. ಯೋಗಾಭ್ಯಾಸವನ್ನೂ ಕಲಿಸುತ್ತಾರೆ. ವಾರ್ಷಿಕೋತ್ಸವ, ಕ್ರೀಡಾಕೂಟ ಪಂದ್ಯಾವಳಿಗಳಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ. ಗ್ರಂಥಾಲಯದಿಂದ ಪ್ರತಿ ವಿದ್ಯಾರ್ಥಿಗಳಿಗೆ ಓದಲು ಪುಸ್ತಕ ಕೊಡುತ್ತಾರೆ. ನಾನು “ಮಕ್ಕಳಿಗಾಗಿ ಮಹಾಭಾರತ’ ಪುಸ್ತಕವನ್ನು ತುಂಬಾ ಇಷ್ಟಪಟ್ಟೆ. ಶಾಲೆಯಿಂದ ಕೊಡುವ ಪುಸ್ತಕಗಳಲ್ಲದೆ, ಮನೆಯಲ್ಲಿ ಅಪ್ಪನೂ ಪುಸ್ತಕಗಳನ್ನು ಕೊಂಡು ತರುತ್ತಾರೆ. ಅಪ್ಪಂಗೆ ಇಂಗ್ಲಿಷ್‌ ಬರದಿರುವುದರಿಂದ ಕನ್ನಡ ಪುಸ್ತಕಗಳನ್ನು ಮಾತ್ರ ತಪ್ಪದೇ ಓದಿ ಮುಗಿಸುತ್ತಾರೆ. ಇಂಗ್ಲಿಷ್‌ ಪುಸ್ತಕಗಳಲ್ಲಿ ಏನು ಬರೆದಿದೆ ಎಂದು ನನ್ನನ್ನು ಇಲ್ಲಾ ತಂಗಿಯನ್ನು ಕೇಳಿ ತಿಳಿದುಕೊಳ್ಳುತ್ತಾರೆ.

   ಮುಂದಿನ ವರ್ಷ ದುರ್ಗಿಗುಡಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ದಾಟೋದನ್ನೇ ಎದುರು ನೋಡುತ್ತಿದ್ದೇವೆ ನಾವೆಲ್ಲರೂ. ಇನ್ನೊಂದು ವಿಷಯ ಗೊತ್ತಾ? ಈ ವರ್ಷ ಶಾಲೆ ಸೇರಿದ 220 ವಿದ್ಯಾರ್ಥಿಗಳಲ್ಲಿ ಸುಮಾರು 150 ವಿದ್ಯಾರ್ಥಿಗಳು ನನ್ನ ಹಾಗೆಯೇ, ಖಾಸಗಿ ಶಾಲೆಯಿಂದ ಬಂದವರು. ಎಲ್ಲಾ ಕಡೆ ಸರ್ಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಮಕ್ಕಳು ಹೋದರೆ, ನಮ್ಮಲ್ಲಿ ಉಲ್ಟಾ. ಇದು ಅಚ್ಚರಿಯ ಬೆಳವಣಿಗೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿದರೆ ಪೋಷಕರು ತಾವಾಗಿಯೇ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸ್ತಾರೆ ಅನ್ನೋದು ನನ್ನ ಅಭಿಪ್ರಾಯ. 

  ಎಷ್ಟೋ ಖಾಸಗಿ ಶಾಲೆಗಳು ತಮ್ಮಲ್ಲಿ ಓದಿ ಹೆಸರು ಮಾಡಿದ ಸೆಲೆಬ್ರಿಟಿ ವ್ಯಕ್ತಿಗಳ ಭಾವಚಿತ್ರಗಳನ್ನು ಆವರಣದಲ್ಲಿ ತಗುಲಿ ಹಾಕಿ ಹೆಮ್ಮೆ ವ್ಯಕ್ತಪಡಿಸುತ್ತವೆ. ಆ ವ್ಯಕ್ತಿಗಳೂ ಅಷ್ಟೆ, ತಾವು ಈ ಶಾಲೆಯ ವಿದ್ಯಾರ್ಥಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದಕ್ಕೆ ಪುಟಗಟ್ಟಲೆ ಪ್ರಚಾರವೂ ಸಿಗುತ್ತೆ. ಇದರಿಂದ ಆ ವಿದ್ಯಾಸಂಸ್ಥೆಯ ಬೆಲೆ ಹೆಚ್ಚುತ್ತದೆ. ಆದರೆ, ನಾನು ಇಂಥಾ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಂದು ಒಬ್ಬರಾದರೂ ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ಇಲ್ಲಿಯವರೆಗೆ ನಾನು ನೋಡಿಲ್ಲ. ಆದರೆ, ದೇಶ- ವಿದೇಶಗಳಲ್ಲಿ ನೆಲೆಸಿರುವ ದುರ್ಗಿಗುಡಿ ಶಾಲೆಯ ಹಳೇ ವಿದ್ಯಾರ್ಥಿಗಳು ಹೇಳಿಕೊಳ್ಳುತ್ತಾರೆ. ಅವರಲ್ಲಿ ಸೆಲೆಬ್ರಿಟಿಗಳು ಇಲ್ಲದೇ ಇರಬಹುದು, ಆದರೆ, ನಮ್ಮ ಸರ್ಕಾರಿ ಶಾಲೆಯಲ್ಲಿ ಕಲಿತು ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೇರಿರುವ ಪ್ರತಿಯೊಬ್ಬರೂ ನನ್ನ ಪ್ರಕಾರ ಸೆಲೆಬ್ರಿಟಿಗಳೇ.

ನಿರೂಪಣೆ: ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next