ಬೇಲೂರು: ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಶಿಕ್ಷಕರ ಸಹಕಾರದಿಂದ ಶಾಲಾ ಕೈತೋಟದಲ್ಲಿ ಸಾಂಬಾರ್ ಸೊಪ್ಪು ಬೆಳೆದು ಮಾರಾಟ ಮಾಡಿ ಅದರಲ್ಲಿ ಬಂದ ಹಣದಿಂದ ಶೂ ಸಾಕ್ಸ್ ಹಾಗೂ ನೋಟ್ ಪುಸ್ತಕಗಳನ್ನು ಖರೀದಿಸಿ ಇತರೆ ಶಾಲೆಗಳಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಮುಳುಗಡೆ ಗ್ರಾಮವಾಗಿ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿರುವ ಶೆಟ್ಟಿಗೆರೆ ಮೂಲ ಸೌಕರ್ಯಗಳಿಂದ ಕೊರಗುತ್ತಿರುವ ಗ್ರಾಮವಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಕುಂದು ಕೊರತೆಗಳ ನಡುವೆಯೂ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಓದಿನಲ್ಲಿ ಮುಂದೆ ಇರುವುದರ ಜತೆಗೆ ಶಾಲಾ ಕೈ ತೋಟದ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಂ ಬಾರ್ ಸೊಪ್ಪು ಸೇರಿದಂತೆ ಹಲವಾರು ಬಗೆಯ ಸೊಪ್ಪು ಗಳನ್ನು ಬೆಳೆದು ಮಾರಾಟ ಮಾಡಿ ಅಚ್ಚರಿ ಮೂಡಿಸಿದ್ದಾರೆ.
10 ಗುಂಟೆ ಶಾಲಾ ಕೈತೋಟದಲ್ಲಿ ಶಾಲಾ ಶಿಕ್ಷಕ ಎಂ ಎನ್ ಮಂಜೇಗೌಡ ಸಹಶಿಕ್ಷಕ ತಾತೇಗೌಡ ಮಾರ್ಗದರ್ಶನದಲ್ಲಿ ಈ ಶಾಲೆಯ ಚಿಣ್ಣರು ಕೊತ್ತಂಬರಿ ಬೀಜ ನೆಟ್ಟು ನೀರೆರೆದು ಪೋಷಿಸಿ ಗಿಡವಾಗಿ ಬೆಳೆಸಿ ಮಾರುಕಟ್ಟೆಯಲ್ಲಿ 7 ಸಾವಿರ ರೂ.ಗಳಿಗೆ ಮಾರಾಟ ಮಾಡಿ ಬೆಳೆವ ಪೈರು ಮೊಳಕೆಯಲ್ಲಿ ಎಂಬಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಕ್ಕಳು ಬೆಳೆದು ಮಾರಾಟ ಮಾಡಿಬಂದಿದ್ದ 7ಸಾವಿರ ಹಣದಲ್ಲಿ 1 ಜತೆ ಶೂ-ಸಾಕ್ಸ್ ಹಾಗೂ ನೋಟ್ ಬುಕ್ಕುಗಳನ್ನು ಖರೀದಿಸಿ ಕ್ಷೇತ್ರ ಶಿಕ್ಷಣಾ ಧಿಕಾರಿ ಲೋಕೇಶ್‌ರಿಂದ ಮಕ್ಕಳಿಗೆ ನೀಡಲಾಯಿತು ಎಂದರು.
10ಗುಂಟೆಯಲ್ಲಿ ಕೈತೋಟ :
ಇಲ್ಲಿಗೆ ಬಂದಾಗ 10 ಕುಂಟೆ ಶಾಲಾ ಕೈತೋಟ ಜಾಗ ಖಾಲಿ ಇತ್ತು. ನಂತರದ ದಿನದಲ್ಲಿ ಶಾಲೆಯ ಸುತ್ತ ತೆಂಗು, ಸಿಲ್ವರ್, ಜತೆಗೆ ತೇಗದ ಮರ ನೆಡಲಾಗಿದೆ.ಬಾಳೆಗೊನೆ ಜತೆಗೆ ಮಕ್ಕಳ ಬಿಸಿಯೂಟಕ್ಕೆ ತರಕಾರಿ ಮೆಂತ್ಯ ಸೊಪ್ಪು ಸಬ್ಬಸಿಗೆ ಸೊಪ್ಪು ಬೆಳೆಯಲಾಗುತ್ತಿದೆ. ಶಿಕ್ಷಣದ ಜತೆಗೆ ಮಕ್ಕಳಿಗೆ ಕೃಷಿ ಚಟುವಟಿಕೆಯಅಭ್ಯಾಸವನ್ನೂ ಮಾಡಲಾಗುತ್ತಿದೆ. ಇದಕ್ಕೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಗ್ರಾಪಂ ಸದಸ್ಯರು ಜತೆಗೆ ಗ್ರಾಮಸ್ಥರ ಸಹಕಾರ ಬಹು ಮುಖ್ಯ ಎಂದು ಶಾಲಾ ಶಿಕ್ಷಕ ಎಂ ಎನ್ ಮಂಜೇಗೌಡ ತಿಳಿಸಿದರು.