Advertisement

ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಸ್ಟ್ರಾಂಗು

09:35 PM Jul 06, 2019 | Lakshmi GovindaRaj |

ಮೈಸೂರು: ಎಲ್ಲಾ ವಿಷಯ, ವಿಚಾರಗಳಲ್ಲೂ ಖಾಸಗಿ ಶಾಲೆಯ ಮಕ್ಕಳಿಗಿಂತ ಸರ್ಕಾರಿ ಶಾಲೆಯ ಮಕ್ಕಳೇ ಸ್ಟ್ರಾಂಗು ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

Advertisement

ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ವತಿಯಿಂದ ಜಯನಗರದ ಪೈಲ್ವಾನ್‌ ಬಸವಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ನೋಟ್‌ಬುಕ್‌ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.

ಭ್ರಮೆ, ಅಪಪ್ರಚಾರ: ಹಿಂದಿನಿಂದಲೂ ಇಂದಿನತನಕವೂ ಸರ್ಕಾರಿ ಶಾಲೆಗಳು ಮತ್ತು ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಮೌಲಿಕ ಗುಣಮಟ್ಟದ ಶಿಕ್ಷಣದಲ್ಲಿ ಖಾಸಗಿಯವರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸರ್ಕಾರಗಳ ಶಿಕ್ಷಣಪರ ಕಾಳಜಿಯಿಂದ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿಗೊಂಡಿದ್ದು, ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಕಲ ಸವಲತ್ತುಗಳು ದೊರೆಯುತ್ತಿವೆ.

ಹೀಗಿದ್ದೂ ಸಹ ಖಾಸಗಿ ಶಾಲೆಗಳ ಭ್ರಮೆಯಲ್ಲಿರುವವರ ಅಪಪ್ರಚಾರದಿಂದಾಗಿ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಮತ್ತು ಅವರ ಪೋಷಕರೇ ವಸ್ತುಸ್ಥಿತಿಯನ್ನು ಇತರರಿಗೆ ತಿಳಿಸಿ ಸರ್ಕಾರಿ ಶಾಲೆಗೆ ಮಕ್ಕಳು ಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಅಳಿವು-ಉಳಿವು: ಇಂದು ಸರ್ಕಾರಿ ಶಾಲೆಗಳ ಅಳಿವು-ಉಳಿವು ವಿದ್ಯಾರ್ಥಿಗಳ ಕೈಯಲ್ಲಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ಇಲ್ಲಿನ ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳೇ ಉತ್ತರವಾಗಬೇಕು ಎಂದು ಕಿವಿಮಾತು ಹೇಳಿದರು.

Advertisement

ಶೈಕ್ಷಣಿಕ ವಾತಾವರಣ: ಸರ್ಕಾರಿ ಶಾಲೆಗಳಲ್ಲಿರುವ ಶೈಕ್ಷಣಿಕ ವಾತಾವರಣ, ಮೂಲಭೂತ ಸೌಕರ್ಯಗಳು, ಪ್ರತಿಭಾವಂತ ಬೋಧಕರು ಖಾಸಗಿ ಶಾಲೆಯಲ್ಲಿ ಸಿಗಲು ಸಾಧ್ಯವೇ ಇಲ್ಲ. ಇದನ್ನೆಲ್ಲ ಉಪಯೋಗಿಸಿಕೊಂಡು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಷ್ಟಪಡುವುದಕ್ಕಿಂತ ಹೆಚ್ಚಾಗಿ ಇಷ್ಟಪಟ್ಟು ಓದಿ ಸರ್ಕಾರಿ ಶಾಲೆಗಳಿಗೆ ಕೀರ್ತಿ ತರಬೇಕು ಎಂದು ಅವರು ಸಲಹೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕಿ ಕೆ.ವಿ.ಮೋಹನಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಾವೇರಿ ಬಳಗದ ಅಧ್ಯಕ್ಷೆ ಎನ್‌.ಕೆ.ಕಾವೇರಿಯಮ್ಮ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ, ಲೇಖಕ, ಚಿಂತಕ ಸೀತಾರಾಮ್‌, ಓರಿಗಾಮಿ ಕಲಾವಿದ ಎಚ್‌.ವಿ.ಮುರಳೀಧರ, ಶಿಕ್ಷಣ ತಜ್ಞ ವೆಂಕಟನಾರಾಯಣ, ಶಾಲಾ ಶಿಕ್ಷಕಿಯರಾದ ಡಿ.ಕೆ.ರಾಧಾ, ಟಿ.ರೂಪ, ಬಿ.ಎನ್‌.ಜಯಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next