Advertisement

ಖಾಸಗಿಗೆ ಸರಕಾರಿ ಮಕ್ಕಳ ಗುಳೆ

10:06 AM Dec 20, 2019 | mahesh |

ಬೆಂಗಳೂರು: ಸರಕಾರಿ ಶಾಲೆಗಳನ್ನು ಉಳಿಸಬೇಕು ಎಂಬ ಕೂಗಿನ ನಡುವೆಯೇ ಈ ಶಾಲೆಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

Advertisement

ಕಳೆದೊಂದು ವರ್ಷದಲ್ಲಿ ಸರಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ 1.20 ಲಕ್ಷದಷ್ಟು ಕಡಿಮೆಯಾಗಿದೆ. ಕಳೆದ 2 ವರ್ಷಗಳಲ್ಲಿ ಈ ಪ್ರಮಾಣ ಒಟ್ಟು 3.47 ಲಕ್ಷ. ಇದರಲ್ಲಿ 3.30 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ಪಾಲಾಗಿದ್ದಾರೆ. ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದ ಅನಂತರವೂ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಒಲವು ವ್ಯಕ್ತಪಡಿಸುತ್ತಿರುವುದು ಶಿಕ್ಷಣ ಇಲಾಖೆಗೆ ತಲೆನೋವು ತಂದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆಯಲ್ಲಿ ಡಿ.11ಕ್ಕೆ ಅನ್ವಯ ವಾಗುವಂತೆ 2019-20ನೇ ಸಾಲಿನ ದಾಖಲಾತಿ ವರದಿ ಪ್ರಕಟಿಸಿದೆ. ಈ ವರದಿ ಮತ್ತು ಕಳೆದ ಎರಡು ವರ್ಷಗಳ ವರದಿಯನ್ನು ಪರಿಶೀಲಿಸಿದಾಗ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಸಂಖ್ಯೆ ಏರಿಕೆ
2017-18ನೇ ಸಾಲಿನಲ್ಲಿ ಸರಕಾರಿ ಶಾಲೆಗಳ ಒಂದರಿಂದ 10ನೇ ತರಗತಿಯಲ್ಲಿ 44,57,535 ಮಕ್ಕಳಿ ದ್ದರು. ಇದೇ ಅವಧಿಯಲ್ಲಿ ಖಾಸಗಿ ಶಾಲೆಯ 1ರಿಂದ 10ನೇ ತರಗತಿಯಲ್ಲಿ 41,10,402 ವಿದ್ಯಾರ್ಥಿಗಳಿದ್ದರು. ಅಂದರೆ, ಖಾಸಗಿ ಶಾಲೆಗಿಂತ ಸರಕಾರಿ ಶಾಲೆಯಲ್ಲಿ 3.47 ಲಕ್ಷ ವಿದ್ಯಾರ್ಥಿಗಳು ಹೆಚ್ಚಿದ್ದರು. 2019-20ನೇ ಸಾಲಿನಲ್ಲಿ ಈ ಅಂಕಿಅಂಶ ಸಂಪೂರ್ಣ ಬದಲಾಗಿದೆ.

ಒಟ್ಟಾರೆಯಾಗಿ ಸರಕಾರಿ ಶಾಲೆಯ
1ರಿಂದ 10ನೇ ತರಗತಿಯ ವಿದ್ಯಾರ್ಥಿ ಗಳ ಸಂಖ್ಯೆ 42,88,726ಕ್ಕೆ ಇಳಿದಿದೆ. ಖಾಸಗಿ ಶಾಲೆಯ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ 42,73,871ಕ್ಕೆ ಏರಿಕೆಯಾಗಿದೆ. ಖಾಸಗಿ ಶಾಲೆ ಮತ್ತು ಸರಕಾರಿ ಶಾಲೆಯ ಮಕ್ಕಳ ಸಂಖ್ಯೆಯ ಅಂತರ 3.47 ಲಕ್ಷದಿಂದ 14,855ಕ್ಕೆ ಇಳಿದಿದೆ. 48,690 ಸರಕಾರಿ ಶಾಲೆಗಳಲ್ಲಿ 42.88 ಲಕ್ಷ ವಿದ್ಯಾರ್ಥಿಗಳು ಮತ್ತು 21,104 ಖಾಸಗಿ ಶಾಲೆಗಳಲ್ಲಿ 42.73 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

Advertisement

ಯೋಜನೆಗಳಿದ್ದರೂ ಬರುತ್ತಿಲ್ಲ
ಖಾಸಗಿ ಶಾಲೆಗಳಿಗೆ ವಾರ್ಷಿಕವಾಗಿ ಸಾವಿರಾರು ರೂ. ಶುಲ್ಕ ಪಾವತಿಸಬೇಕು (ಕೆಲವೊಂದು ಶಾಲೆ  ಗಳಲ್ಲಿ ಲಕ್ಷಾಂತರ ರೂ.). ಸರಕಾರಿ ಶಾಲೆಗಳಲ್ಲಿ ಶುಲ್ಕ ಇರುವುದಿಲ್ಲ. ಬದಲಾಗಿ ಬಿಸಿಯೂಟ, ಸಮವಸ್ತ್ರ, ಶೂ, ಸಾಕ್ಸ್‌, ಪಠ್ಯಪುಸ್ತಕ, ಸೈಕಲ್‌, ಹಾಲು ಸಹಿತವಾಗಿ ವಿದ್ಯಾರ್ಥಿಗಳಿಗೆ ಎಲ್ಲ ವನ್ನೂ ಶಾಲೆಯಿಂದಲೇ ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಆದರೂ ಮಕ್ಕಳ ಪಾಲಕ-ಪೋಷಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next