Advertisement

ಮುಳಿ ಹುಲ್ಲಿನ ಛಾವಣಿಯ ಶಾಲೆಗೆ ಈಗ ಸುಸಜ್ಜಿತ ಕಟ್ಟಡ

09:54 AM Nov 28, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1908 ಶಾಲೆ ಆರಂಭ
ಊರ ಗಣ್ಯರ ಶ್ರಮದ ಫ‌ಲವಾಗಿ ಆರಂಭಗೊಂಡ ಶಾಲೆ

ಮಾಣಿ: ಬಂಟ್ವಾಳ ತಾಲೂಕು ಮಾಣಿ ಪರಿಸರದ ಮಕ್ಕಳ ವಿದ್ಯಾರ್ಜನೆಗಾಗಿ ನೂಜಿಬೈಲು ಮನೆತನದ ಬೆಂಬಲ, ಕಾಂತಪ್ಪ ಶೆಟ್ಟಿ ಅಲೈತ್ತಿಮಾರು ಕಲ್ಲಾಜೆ ಹಾಗೂ ಊರ ಗಣ್ಯರ ಶ್ರಮದ ಫ‌ಲವಾಗಿ 1908ರಲ್ಲಿ ಮುಳಿ ಹುಲ್ಲಿನ ಛಾವಣಿಯ ನೂಜಿಬೈಲು ಬೋರ್ಡ್‌ ಶಾಲೆ ಆರಂಭಗೊಂಡಿತು.

1935ರಲ್ಲಿ ನಾರಾಯಣ ಭಂಡಾರಿ, ಮನೆಯವರು, ಊರಿನವರ ಸಹಕಾರದಿಂದ ಹೈಯರ್‌ ಪ್ರೈಮರಿ ಶಾಲೆಯಾಗಿ ಉನ್ನತೀಕರಣಗೊಂಡಿತು. ನಾರಾಯಣ ಭಂಡಾರಿ ಅವರು ಶಾಲೆಯ ಪುನರ್‌ ನಿರ್ಮಾಣದ ಶಿಲ್ಪಿ ಎಂದೇ ಕರೆಯಲ್ಪಡುತ್ತಾರೆ. ಪ್ರಸ್ತುತ 7 ಶಿಕ್ಷಕರು, ಓರ್ವ ಮುಖ್ಯ ಶಿಕ್ಷಕಿ ಇದ್ದಾರೆ. 157 ವಿದ್ಯಾರ್ಥಿಗಳು ಮತ್ತು ಈ ವರ್ಷ ಪ್ರಾರಂಭಗೊಂಡ ಎಲ್‌ಕೆಜಿ-ಯುಕೆಜಿಯಲ್ಲಿ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸುಸಜ್ಜಿತ ಕಟ್ಟಡ
ಈಗ ಮಾಣಿ ದ.ಕ. ಜಿ.ಪಂ. ಮಾದರಿ ಹಿ.ಪ್ರಾ. ಶಾಲೆಯು 0.76 ಸೆಂಟ್ಸ್‌ ಜಾಗ ಹೊಂದಿದ್ದು, ರಂಗಮಂದಿರ, ಹೈಟೆಕ್‌ ಶೌಚಾಲಯ, ವಿಶಾಲವಾದ ಮೈದಾನ ಮತ್ತು ಕೈತೋಟ ಇದೆ. ಎಸ್‌.ಡಿ.ಎಂ.ಸಿ. ಮತ್ತು ಹಳೆ ವಿದ್ಯಾರ್ಥಿಗಳ ಪರಿಶ್ರಮದಿಂದ 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಅಕ್ಕಪಕ್ಕದ ಶಾಲೆಗಳಾದ ನೇರಳಕಟ್ಟೆ ಹಿ.ಪ್ರಾ. ಶಾಲೆ, ಅನಂತಾಡಿ ಹಿ.ಪ್ರಾ. ಶಾಲೆ, ಪೆರಾಜೆ ಹಿ.ಪ್ರಾ. ಶಾಲೆ, ಶೇರಾ ಹಿ.ಪ್ರಾ. ಶಾಲೆ, ಬರಿಮಾರು ಶಾಲೆಗಳಿಗೆ ಕೇಂದ್ರ ಬಿಂದುವಾಗಿದೆ.

Advertisement

ಹಳೆ ವಿದ್ಯಾರ್ಥಿಗಳು
ಏಷ್ಯಾಡ್‌ನ‌ 100 ಮೀ. ಓಟದಲ್ಲಿ ಚಿನ್ನದ ಪದಕ ವಿಜೇತ ಆನಂದ ಶೆಟ್ಟಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಷ್ಟ್ರಿಯ ಕಬಡ್ಡಿ ಆಟಗಾರ ಉದಯ ಚೌಟ, ಶಾಲಾ ಕಟ್ಟಡ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ, ಸಾಹಿತಿ, ಪತ್ರಕರ್ತ ಜಯಾನಂದ ಪೆರಾಜೆ, ಎಸ್‌ಡಿಎಂಸಿ ಅಧ್ಯಕ್ಷ ಜನಾರ್ದನ ಪೆರಾಜೆ, ಹೈಕೋರ್ಟ್‌ ಸಿವಿಲ್‌ ಜಡ್ಜ್ ಮನೋಹರ ಕೆ. ಹೈಕೋರ್ಟ್‌ ವಕೀಲ ಸುಧಾಕರ ಪೈ, ಸುದೀಪ್‌ ಕುಮಾರ್‌ ಶೆಟ್ಟಿ, ಬಾಲಕೃಷ್ಣ ಆಳ್ವ, ಇಬ್ರಾಹಿಂ ಕೆ., ಬದ್ರುದ್ದೀನ್‌, ಸಂಜೀವ ಶೆಟ್ಟಿ, ಪ್ರಹ್ಲಾದ ಶೆಟ್ಟಿ, ಡಾ| ಜಗದೀಶ ಭಟ್‌, ಮಹಾವೀರ ಪ್ರಸಾದ್‌, ನಾರಾಯಣ ಶೆಟ್ಟಿ ತೋಟ ಮತ್ತಿತರರು ಈ ಶಾಲೆಯಲ್ಲಿ ವಿದ್ಯಾರ್ಜನೆಗೈದು ಸಾಧನೆ ಮಾಡಿದ್ದಾರೆ. ಎಸ್‌.ಡಿ.ಎಂ.ಸಿ.ಯವರು ಎಲ್ಲ ಕೆಲಸ ಕಾರ್ಯಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಯಕ್ಷಗಾನ, ನೃತ್ಯ, ಸಂಗೀತ ತರಬೇತಿ, ಶಾಲಾ ಪ್ರವಾಸ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.

ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕರು
ಎಚ್‌.ಡಿ. ಭಕ್ತ, ತಿರುಮಲೇಶ ಭಟ್‌, ಅನ್ನು ಗೌಡ, ಬೆಳ್ಳಿಯಪ್ಪ ಗೌಡ, ಗಂಗಾಧರ, ಆನಂದ ರೈ, ಶಕುಂತಳಾ ಎಚ್‌., ಕಸ್ತೂರಿ, ಲಕ್ಷ್ಮೀ ಟೀಚರ್‌, ಶಾಂತಪ್ಪ ನಾಯ್ಕ, ಶ್ರೀಧರ ಭಟ್‌, ಬಾಲಕೃಷ್ಣ ಕೊಂಡೆ ಮೊದಲಾದವರು ಸೇವೆ ಸಲ್ಲಿಸಿದ್ದಾರೆ.

ಊರಿನವರಿಂದ ಹಾಗೂ ಎಸ್‌.ಡಿ.ಎಂ.ಸಿ. ವತಿಯಿಂದ ಸರ್ವ ರೀತಿಯ ಸಹಕಾರ ದೊರೆಯುತ್ತಿದೆ. ತರಗತಿಗಳು ಅಡಚಣೆ ಇಲ್ಲದೆ ನಿರಂತರವಾಗಿ ನಡೆಯುತ್ತಿವೆ. ಈ ವಿದ್ಯಾಸಂಸ್ಥೆ ಸದೃಢವಾಗಿ ಬೆಳೆಯಲಿ ಎಂಬುದು ನನ್ನ ಆಶಯ.
-ಚಂದ್ರಾವತಿ, ಮುಖ್ಯ ಶಿಕ್ಷಕಿ.

1950ರ ಅವಧಿಯಲ್ಲಿ ಈ ಶಾಲೆಯ ವಿದ್ಯಾರ್ಥಿನಿಯಾಗಿದ್ದೆ. ನನ್ನ ಯಶಸ್ವೀ ಜೀವನದಲ್ಲಿ ಹಲವಾರು ಪ್ರಶಸ್ತಿಗಳು ನನಗೆ ದೊರೆತಿವೆ. ಅದಕ್ಕೆ ಮೂಲ ಕಾರಣರಾದ ಶಿಕ್ಷಕರು ಹಾಗೂ ಈ ಶಾಲೆಗೆ ಚಿರಋಣಿ.
-ಪ್ರಪುಲ್ಲಾ ರೈ,
ಹಿರಿಯ ವಿದ್ಯಾರ್ಥಿನಿ

- ಮಹೇಶ್‌ ಮಾಣೆ

Advertisement

Udayavani is now on Telegram. Click here to join our channel and stay updated with the latest news.

Next