Advertisement

ಸರ್ಕಾರಿ ಶಾಲೆ ಮೇಲ್ಛಾವಣಿ ಶಿಥಿಲ! 

10:28 AM Jul 17, 2021 | Team Udayavani |

ಹರಪನಹಳ್ಳಿ: ಸರ್ಕಾರಿ ಶಾಲೆ ಮೇಲ್ಛಾವಣಿ ಶಿಥಿಲಗೊಂಡು ಕುಸಿಯುವ ಹಂತಕ್ಕೆ ಬಂದು ತಲುಪಿದೆ.

Advertisement

ತಾಲೂಕಿನ ಅರೇಮಜ್ಜಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಪ್ರಸ್ತುತ 100ಕ್ಕೂ ಹೆಚ್ಚು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮುಖ್ಯ ಶಿಕ್ಷಕ ಸೇರಿ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಒಟ್ಟು 5 ಕೊಠಡಿಗಳಿದ್ದು, ಅದರಲ್ಲಿ 3 ಕೊಠಡಿಗಳು ಯೋಗ್ಯಕ್ಕೆ ಬಾರದಷ್ಟು ಹದಗೆಟ್ಟು ಹೋಗಿವೆ. ಇನ್ನುಳಿದ 2 ಕೊಠಡಿಯಲ್ಲಿಒಂದನ್ನು ಮುಖ್ಯ ಶಿಕ್ಷಕರು ಬಳಸಿಕೊಂಡರೆ ಉಳಿದ ಇನ್ನೊಂದು ಕೊಠಡಿಯಲ್ಲಿ 100ಕ್ಕೂಹೆಚ್ಚು ಮಕ್ಕಳು ಒಂದೇ ಕೊಠಡಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಇರೋ 2 ಕೊಠಡಿಗಳು ಶಿಥಿಲಗೊಂಡಿದ್ದು, ಯಾವ ಸಮಯದಲ್ಲಿ ಮೇಲ್ಛಾವಣಿ ಕುಸಿದು ಬೀಳಲಿದೆಯೋ ಎಂಬ ಪರಿಸ್ಥಿತಿಯಲ್ಲಿ ಶಾಲೆ ಶಿಕ್ಷಕರು ಮತ್ತು ಮಕ್ಕಳು ಜೀವ ಬಿಗಿಹಿಡಿದುಕೊಂಡು ಶಾಲೆ ಪ್ರಾರಂಭಿಸಬೇಕಿದೆ. ಇದರಿಂದ ನೂತನ ಮಕ್ಕಳನ್ನು ದಾಖಲಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಈ ಗ್ರಾಮದ ಬಡವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಸರ್ಕಾರಗಳು ಶಿಕ್ಷಣ ಇಲಾಖೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು, ಹಲವುಸೌಲಭ್ಯ ಕಲ್ಪಿಸಿದರೂ ಸಹ ಕೆಲ ಸರ್ಕಾರಿ ಶಾಲೆಗಳು ಮೂಲಸೌಲಭ್ಯದಿಂದ ವಂಚಿತವಾಗಿ ಗುಣಮಟ್ಟಶಿಕ್ಷಣಕ್ಕೆ ಅಡ್ಡಿಯಾಗಿವೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗೆ ಹೆಚ್ಚಾಗಿ ಬಡವರು, ಹಿಂದುಳಿದ ಎಸ್‌ಸಿ-ಎಸ್‌ಟಿ ಮಕ್ಕಳೇ ದಾಖಲಾತಿಯಲ್ಲಿ ಮುಂದಿದ್ದು, ಸರ್ಕಾರ ಎಲ್ಲ ರೀತಿಯ ಮೂಲಭೂತಸೌರ್ಕರ್ಯಗಳನ್ನು ಒದಗಿಸಿ ಅವರ ಕೈ ಹಿಡಿಯಬೇಕಿದೆ.

ಶಿಥಿಲಗೊಂಡಿರುವ ಕೊಠಡಿಗಳು: ಶಾಲೆಯ ಮೂರು ಕೊಠಡಿಗಳು ಶಿಥಿಲಗೊಂಡಿದ್ದು ಯಾವ ಸಮಯದಲ್ಲಾದರೂ ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಶಾಲೆ ಆರಂಭವಾದರೆ ಪೋಷಕರಿಗೆ ಮಕ್ಕಳ ಬಗ್ಗೆ ಚಿಂತೆ ಮಾಡುವಂತಾಗಿದೆ. ಕೂಡಲೇ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ಅಭಿವೃದ್ಧಿಪಡಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಪೋಷಕರ ಆಗ್ರಹಿಸಿದ್ದಾರೆ.

Advertisement

ಶಿಥಿಲಗೊಂಡಿರುವ ಅರೆಮಜ್ಜಿಗೆರೆ ಸೇರಿ ತಾಲೂಕಿನ ಎಲ್ಲ ಹಳೆಯ ಕಟ್ಟಡಗಳನ್ನು ಪಟ್ಟಿ ಮಾಡಿ ದುರಸ್ತಿ ಕಾರ್ಯಕ್ಕಾಗಿ ಹಿಂದಿನ ಸಾಲಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಹಣ ಮಂಜೂರಾಗಿ ಬಂದ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.ಎಸ್‌.ಎಂ. ವೀರಭದ್ರಯ್ಯ,ಕ್ಷೇತ್ರ ಶಿಕ್ಷಣಾಧಿಕಾರಿ

ಶಾಲೆ ಕೊಠಡಿಗಳ ದುರಸ್ತಿ ಬಗ್ಗೆ ಪ್ರತಿವರ್ಷ ಇಲಾಖೆ ಗಮನಕ್ಕೆ ತರಲಾಗುತ್ತಿದ್ದು, ಸದ್ಯ ಶಾಲೆಯಲ್ಲಿ 5 ಕೊಠಡಿಗಳಿದ್ದು, ಅದರಲ್ಲಿ 3 ಕೊಠಡಿಗಳ ಮೇಲ್ಛಾವಣಿ ಕುಸಿದು ಬಿಳುತ್ತಿರುವುದರಿಂದ ಶಾಲೆ ಆರಂಭವಾದರೆ ಮಕ್ಕಳನ್ನು ಕೂರಿಸಿ ಪಾಠ ಮಾಡಲು ಭಯವಾಗುತ್ತಿದೆ. ಹಾಗಾಗಿ ಶಿಥಿಲಗೊಂಡಿರುವ ಕೊಠಡಿಗಳನ್ನು ತಕ್ಷಣ ದುರಸ್ತಿಗೊಳಿಸಬೇಕಾಗಿದೆ.ಕೆ. ಧರ್ಮನಾಯ್ಕ, ಶಿಕ್ಷಕ

ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು. ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿರುವ ಶಿಕ್ಷಣ ವ್ಯವಸ್ಥೆ ಸುಗಮಗೊಳಿಸಲು ಮಕ್ಕಳಿಗೆ ಬೇಕಾದ ಮೂಲಸೌಲಭ್ಯ ಒದಗಿಸಬೇಕು.ಬಿ. ಮಂಜುನಾಥ್‌, ಶಿಕ್ಷಣ ಪ್ರೇಮಿ

 

ದೇವೇಂದ್ರಪ್ಪ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next