Advertisement

ಆಂಗ್ಲ ಮಾಧ್ಯಮ ಶಾಲೆಗೆ ಸಡ್ಡು ಹೊಡೆದ ಸರಕಾರಿ ಶಾಲೆ

06:00 AM Jun 17, 2018 | Team Udayavani |

ಕಾವೂರು: ಹೆಚ್ಚಿನ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಳಲುತ್ತಿದ್ದರೆ ಇಲ್ಲೊಂದು ಸರಕಾರಿ ಶಾಲೆ ವಿದ್ಯಾರ್ಥಿಗಳಿಂದ ಸಮೃದ್ಧವಾಗುತ್ತಿದೆ. ಪಂಜಿಮೊಗರು ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆ ಇದು. ಪೋಷಕರೇ ಆಸಕ್ತಿಯಿಂದ ತಮ್ಮ ಮಕ್ಕಳನ್ನು ಇಲ್ಲಿಗೆ ದಾಖಲಿಸುತ್ತಿದ್ದಾರೆ. ಪ್ರಸಕ್ತ ವರ್ಷ ಎಲ್‌ಕೆಜಿಗೆ 105 ಮಕ್ಕಳು ದಾಖಲಾಗಿದ್ದಾರೆ. ಕಳೆದ ವರ್ಷ 42 ಮಕ್ಕಳು ಎಲ್‌ಕೆಜಿಗೆ ಪ್ರವೇಶ ಪಡೆದಿದ್ದರು. ಒಂದನೇ ತರಗತಿಗೆ ಈ ಬಾರಿ 42 ಮಕ್ಕಳು ಸೇರಿದ್ದಾರೆ.

Advertisement

ಆಂಗ್ಲ ಮಾಧ್ಯಮದ ಆಕರ್ಷಣೆ
ಎಲ್ಲೆಡೆ ಹೆತ್ತವರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಿರುವಾಗ ಈ ಶಾಲೆಯನ್ನು ಹೇಗಾದರೂ ಉಳಿಸಲೇಬೇಕೆಂಬ ಸಂಕಲ್ಪದೊಂದಿಗೆ ಕಾರ್ಪೊರೇಟರ್‌ ದಯಾನಂದ ಶೆಟ್ಟಿ ನೇತೃತ್ವದಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು ಆರಂಭಿಸಲಾಯಿತು. ಸ್ಥಳೀಯ ದಾನಿಗಳೂ ಕೈಜೋಡಿಸಿದ್ದು, ಮಕ್ಕಳ ಕಲಿಕೆಗೆ ಬೇಕಾದ ಶೈಕ್ಷಣಿಕ ಪರಿಕರಗಳೆಲ್ಲವನ್ನೂ ಒದಗಿಸಲಾಗಿದೆ. ತರಗತಿಗಳಿಗೆ ಆಕರ್ಷಕ ಬಣ್ಣ ಬಳಿಯಲಾಗಿದೆ. ಮಕ್ಕಳಿಗೆ ಮೇಜು, ಕುರ್ಚಿ ಒದಗಿಸಲಾಗಿದೆ. ರೌಂಡ್‌ ಟೇಬಲ್‌, ಲೇಡಿಸ್‌ ಸರ್ಕಲ್‌ ಸಂಸ್ಥೆ ಮಕ್ಕಳ ಶೌಚಾಲಯ ನಿರ್ಮಿಸಿಕೊಟ್ಟಿದೆ. ಸರಕಾರದ ಅನುದಾನ ಇಲ್ಲದಿದ್ದರೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸರಸಮನಾಗಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹೊಸ ಕೊಠಡಿ ಭಾಗ್ಯ
ಹೊಸ ಕಟ್ಟಡ ನಿರ್ಮಾಣ ಯೋಜನೆಯನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆ ಎರಡು ತರಗತಿ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರು ಮಾಡಿದರೆ, ದಾನಿಗಳ ನೆರವಿನಿಂದ ಇನ್ನೆರಡು ಕೊಠಡಿ ನಿರ್ಮಿಸಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ನಡೆದು ಬಂದ ದಾರಿ
1954ರಲ್ಲಿ ಆರಂಭಗೊಂಡ ಈ ಶಾಲೆ ಹಿಂದಿನ ಮುಖ್ಯ ಶಿಕ್ಷಕ ನಾರಾಯಣ ರಾವ್‌ ಅವರ ವಿಶೇಷ ಮುತುವರ್ಜಿಯಿಂದ ಬೆಳೆದು ಬಂತು. ನೂರಾರು ಗಣ್ಯರನ್ನು, ಉದ್ಯಮಿಗಳನ್ನು ಕೊಟ್ಟ ಈ ಶಾಲೆಯಲ್ಲಿ ಅಂದು 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದರು. ಆಂಗ್ಲ ಮಾಧ್ಯಮದ ಆಕರ್ಷಣೆಯಿಂದ ಮಕ್ಕಳ ಸಂಖ್ಯೆ ಇನ್ನೂರಕ್ಕೆ ಇಳಿದಾಗ ಶಾಲೆಯ ಉಳಿವಿಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶಾಲಾಭಿವೃದ್ಧಿ ಸಮಿತಿ, ಶಿಕ್ಷಣಾಸಕ್ತರು, ಪಾಲಿಕೆ ಸದಸ್ಯರು ಒಂದುಗೂಡಿ 2017ರಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿದರು. ಒಂದು ಎರಡು ಮೂರನೇ ತರಗತಿಗೆ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲಾಯಿತು. ಈಗ ಈ ಶಾಲೆಯಲ್ಲಿ ಮತ್ತೆ ಮಕ್ಕಳ ಸಂಖ್ಯೆ ಏರತೊಡಗಿದೆ. 

ಜೂ. 18ರಂದು ಉದ್ಘಾಟನೆ
ಸ್ಮಾರ್ಟ್‌ ಕ್ಲಾಸ್‌, ನೂತನ ಕೊಠಡಿಗಳ ಉದ್ಘಾಟನೆ ಜೂ. 18ರಂದು ಬೆಳಗ್ಗೆ 10 ಗಂಟೆಗೆ ಜರಗಲಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಡಾ| ವೈ. ಭರತ್‌ ಶೆಟ್ಟಿ, ಮಾಜಿ ಶಾಸಕ ಮೊದಿನ್‌ ಬಾವಾ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. 

Advertisement

ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದಾಗ ಆಂಗ್ಲ ಮಾಧ್ಯಮಕ್ಕೆ ಸಮಾನಾಗಿ ವಿದ್ಯೆ ನೀಡಲು ಮುಂದಾದೆವು. ದಾನಿಗಳು ನೆರವಾದರು. ಖಾಸಗಿ ಶಿಕ್ಷಕರನ್ನು ನೇಮಿಸಿ ಆಂಗ್ಲ ಮಾಧ್ಯಮವನ್ನು ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನೀಡುತ್ತಿದ್ದೇವೆ. ಇದೀಗ ಸ್ಥಳೀಯ ಬಡ ವರ್ಗದವರ ಜತೆಗೆ ವಲಸ ಕಾರ್ಮಿಕರ ಮಕ್ಕಳೂ ಇಂಗ್ಲಿಷ್‌ ಕಲಿಯುವಂತಾಗಿದೆ.
ದಯಾನಂದ ಶೆಟ್ಟಿ, ಪಾಲಿಕೆ ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next