Advertisement

ಸರಕಾರಿ ಶಾಲೆ: ಕ್ಷೀಣಿಸುತ್ತಲೇ ಇದೆ ದಾಖಲಾತಿ

09:40 AM Nov 23, 2019 | Team Udayavani |

ಮಂಗಳೂರು: ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಸರಕಾರವು ಹಲವು ಯೋಜನೆಗಳನ್ನು ಪರಿಚಯಿಸಿದ್ದರೂ ಅವು ಅಷ್ಟೊಂದು ಫಲಿಸುತ್ತಿಲ್ಲ ಎನ್ನುವುದು ವಾಸ್ತವ. ಮಕ್ಕಳ ದಾಖಲಾತಿ ಪ್ರತೀ ವರ್ಷವೂ ಇಳಿಕೆಯಾಗುತ್ತಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಸೇರಿದ ಮಕ್ಕಳ ಸಂಖ್ಯೆ ಕಳೆದ ಬಾರಿಗಿಂತ 24 ಸಾವಿರದಷ್ಟು ಕಡಿಮೆಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

Advertisement

ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾದಂತೆ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ನಿರಂತರವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ದಾಖಲಾತಿ ಕೊರತೆಯಿಂದ ರಾಜ್ಯಾದ್ಯಂತ ಹಲವು ಶಾಲೆಗಳು ಮುಚ್ಚಿವೆ, ಅಂದಾಜು 715 ಶಾಲೆಗಳ ಒಂದನೇ ತರಗತಿಗೆ ದಾಖಲಾತಿ 10ಕ್ಕಿಂತ ಕಡಿಮೆಯಾಗಿದೆ. ಸರಕಾರ ಏನೇ ಕ್ರಮ ಕೈಗೊಂಡರೂ ಸಂಖ್ಯೆ ಇಳಿಕೆಯಾಗುತ್ತಲೇ ಇದೆ. 2017-18ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯವ್ಯಾಪಿಯಾಗಿ ಒಂದನೇ ತರಗತಿಗೆ 4,35,946 ಮಕ್ಕಳು ದಾಖಲಾದರೆ 2018-19ನೇ ಸಾಲಿನಲ್ಲಿ ಈ ಸಂಖ್ಯೆ 4,54,872ಕ್ಕೇರಿ ಆಶಾಭಾವನೆ ಉಂಟಾಗಿತ್ತು. ಆದರೆ 2019-20ನೇ ಸಾಲಿನಲ್ಲಿ ಇದು 4,30,578ಕ್ಕೆ ಕುಸಿದಿದೆ.

ಕಡಿಮೆ ದಾಖಲಾತಿಯ ಶಾಲೆಗಳು
ಮಕ್ಕಳ ಸಂಖ್ಯೆ ಕುಸಿದರೆ ಶಾಲೆಗಳು ಮುಚ್ಚುತ್ತವೆ. ಕೆಲವು ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾತಿಯೇ ಆಗಿಲ್ಲ. ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ 2017-18ರಲ್ಲಿ 21,225 ಕಿ.ಪ್ರಾ. ಶಾಲೆಗಳು, 22,487 ಹಿ.ಪ್ರಾ. ಶಾಲೆಗಳಿದ್ದರೆ, 2018-19ರಲ್ಲಿ ಅವುಗಳ ಸಂಖ್ಯೆ ಕ್ರಮವಾಗಿ 21,009 ಮತ್ತು 22,483ಕ್ಕೆ ಇಳಿದಿತ್ತು. 2019-20ನೇ ಸಾಲಿನಲ್ಲಿ ಒಟ್ಟು 43,492 ಶಾಲೆಗಳಿದ್ದು, ಹಿ.ಪ್ರಾ. ಮತ್ತು ಕಿ.ಪ್ರಾ. ಶಾಲೆಗಳ ಲೆಕ್ಕ ಸಿಕ್ಕಿಲ್ಲ.

ಕಾರಣವೇನು?
ಸರಕಾರಿ ಶಾಲೆಗಳು ಬಡವಾಗಲು ಖಾಸಗಿ ಶಾಲೆಗಳತ್ತ ಆಕರ್ಷಣೆ, ಆಂಗ್ಲ ಮಾಧ್ಯಮ ವ್ಯಾಮೋಹ, ಪ್ರತಿಷ್ಠೆಯ ಪ್ರಶ್ನೆ ಇತ್ಯಾದಿ ಹಲವು ಕಾರಣಗಳು. ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸಲು 2019-20ನೇ ಸಾಲಿನಲ್ಲಿ ರಾಜ್ಯದ ಆಯ್ದ ಒಂದು ಸಾವಿರ ಶಾಲೆಗಳಲ್ಲಿ ಒಂದನೇ ತರಗತಿಗೆ ಆಂಗ್ಲ ಮಾಧ್ಯಮವನ್ನು ಪರಿಚಯಿಸಿತ್ತು.

ಸರಕಾರಿ ಶಾಲೆಗಳ ಸಶಕ್ತೀಕರಣ ಕುರಿತು ಸಾಕಷ್ಟು ಚರ್ಚೆ ಮಾಡಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚು ಮಾಡುವುದು ಹೇಗೆ ಎಂಬ ಬಗ್ಗೆ ವಿಸ್ತೃತ ಮಾತುಕತೆ ನಡೆಯುತ್ತಿದೆ. ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವರದಿ ತಯಾರಿಸಿದ್ದು, ವರದಿಯ 21 ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಪರಿಶೀಲನೆಗಾಗಿ ನನ್ನ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ. ಮೂರು ತಿಂಗಳಿಗೊಮ್ಮೆ ಈ ಸಮಿತಿ ಚರ್ಚೆ ನಡೆಸಿ ಕಾರ್ಯೋನ್ಮುಖವಾಗುವುದು ಉದ್ದೇಶ.
-ಎಸ್‌. ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

Advertisement

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next