Advertisement

ಕಲಿಕೆಗೆ ಶಾಲಾ ಕೊಠಡಿಯೇ ಅಯೋಗ್ಯ!

06:10 AM Sep 07, 2017 | |

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕಲು ಶೈಕ್ಷಣಿಕ ಗುಣಮಟ್ಟದ ಕೊರತೆ ಒಂದು ಕಾರಣವಾದರೆ, ಶಾಲಾ ಕಟ್ಟಡಗಳ ದುಸ್ಥಿತಿಯೂ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ!

Advertisement

ಹೌದು, ರಾಜ್ಯದ 73 ಸಾವಿರ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲೂ ಸಹ ಸಾಧ್ಯವಾಗದ ದಯನೀಯ ಸ್ಥಿತಿ ಇದೆ. ಏಕೆಂದರೆ, ಕೊಠಡಿಗಳು ಯಾವಾಗ ಕುಸಿದು ಮೈಮೇಲೆ ಬೀಳುತ್ತವೆಯೋ ಎಂಬ ಜೀವಭಯ ವಿದ್ಯಾರ್ಥಿ, ಶಿಕ್ಷಕರಿಗೆ ಕಾಡುತ್ತಿದೆ.

ಪೀಠೊಪಕರಣ ಹಾಗೂ ಮೂಲಭೂತ ಸೌಕರ್ಯದ ವಿಚಾರವಾಗಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುತ್ತದೆ. ಸುಸಜ್ಜಿತ ಕೊಠಡಿ, ಡೆಸ್ಕ್, ಕುರ್ಚಿ ಸೇರಿದಂತೆ ಆಧುನಿಕ ತಂತ್ರಜ್ಞಾನದ ಬ್ಲ್ಯಾಕ್‌ಬೋರ್ಡ್‌ ವ್ಯವಸ್ಥೆ ಕೂಡ ಇರುತ್ತದೆ. ಇದಕ್ಕೆ ತಕ್ಕಂತೆ ಶೈಕ್ಷಣಿಕ ಗುಣಮಟ್ಟವನ್ನು ಹೊಂದಿರುತ್ತಾರೆ.

ಆದರೆ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಸಾಮಾನ್ಯ ಸೌಲಭ್ಯವೇ ಇರುವುದಿಲ್ಲ. ತರಗತಿ ಕೊಠಡಿಯೇ ಸರಿಯಿಲ್ಲ ಎಂದಾದರೆ, ವಿದ್ಯಾರ್ಥಿಗಳು ಯಾವ ಧೈರ್ಯದಲ್ಲಿ ಕುಳಿತು ಪಾಠ ಕೇಳುತ್ತಾರೆ ಮತ್ತು ಶಿಕ್ಷಕರು ಹೇಗೆ ಪಾಠ ಮಾಡಬಲ್ಲರು ಎಂಬುದನ್ನು ನಾಗರಿಕ ಸಮಾಜ ಮತ್ತು ಆಡಳಿತರೂಢ ಸರ್ಕಾರ ಗಂಭೀರವಾಗಿ ಚಿಂತಿಸಬೇಕಾದ ಸ್ಥಿತಿ ಇದೆ.

ಶೇಕಡ 25ರಷ್ಟು  ಕೊಠಡಿ ಕಲಿಕೆಗೆ ಯೋಗ್ಯವಾಗಿಲ್ಲ!
ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯು ಎರಡು ದಿನಗಳ ಹಿಂದೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ವರದಿಯಲ್ಲಿ ಪ್ರಮುಖವಾಗಿ ಒಂದು ಅಂಶದ ಮೇಲೆ ಬೆಳಕು ಚೆಲ್ಲಿದೆ. ಅದೇನೆಂದರೆ, ಶಾಲಾ ಕೊಠಡಿಯ ಸ್ಥಿತಿಗತಿ. ಸರ್ಕಾರಿ ಶಾಲೆಯ ಮೂಲಭೂತ ಸೌಕರ್ಯದಲ್ಲಿ ಶೌಚಾಲಯ ಹಾಗೂ ಕಲಿಕ ಕೊಠಡಿ ಮುಖ್ಯವಾಗಿರುತ್ತದೆ. ಆದರೆ, ಇಲ್ಲಿನ  ಕಲಿಕ ಕೊಠಡಿಯ ಸ್ಥಿತಿ ಶೋಚನೀಯವಾಗಿದೆ.

Advertisement

2010-11ರಲ್ಲಿ ರಾಜ್ಯದ ಎಲಿಮೆಂಟರಿ ಶಾಲೆಗಳಲ್ಲಿ  1,98,415 ಕೊಠಡಿ ಲಭ್ಯವಿದ್ದು, ಅದರಲ್ಲಿ 1,25,000 ಕೊಠಡಿಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವೆ. 63,415 ಕೊಠಡಿ ಕಲಿಕೆಗೆ ಪೂರಕವಾಗಿರಲಿಲ್ಲ. 2016-17ರಲ್ಲಿ ಲಭ್ಯವಿದ್ದ 2,11,098 ಕೊಠಡಿಯಲ್ಲಿ 1,27,969 ಕೊಠಡಿಗಳು ಚೆನ್ನಾಗಿವೆ. ಆದರೆ, ಶೇಕಡ 25ರಷ್ಟು ಅಂದರೆ 73,129 ಕೊಠಡಿ ಮಕ್ಕಳ ಕಲಿಕೆಗೆ ಯೋಗ್ಯವಾಗಿಲ್ಲ. 2010-11ರಲ್ಲಿ ಕಲಿಕೆಗೆ ಪೂರಕವಾಗಿಲ್ಲದ ಕೊಠಡಿ 63,415 ಇದ್ದದ್ದು 2016-17ರಲ್ಲಿ ಅದು 73,129 ಕ್ಕೆ ಏರಿಕೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ದುರಸ್ಥಿಗಾಗಿ ವರ್ಗೀಕರಣ
ತುರ್ತಾಗಿ ಸರಿಪಡಿಸಬೇಕಾದ ಕೊಠಡಿ, ಹಂತಹಂತವಾಗಿ ಪೀಠೊಪಕರಣ ಒದಗಿಸಬಹುದಾದ ಕೊಠಡಿ ಹಾಗೂ ಪೀಠೊಪಕರಣದ ತುರ್ತು ಅಗತ್ಯ ಇಲ್ಲದ ಕೊಠಡಿಗಳು, ಹೀಗೆ ಶಾಲೆಗಳ ಪೀಠೊಪಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮೂರು ರೀತಿಯಲ್ಲಿ ವರ್ಗೀಕರಣ ಮಾಡಲಾಗಿದೆ. ತುರ್ತು ಪೀಠೊಪಕರಣದ ಅಗತ್ಯ ಇರುವ ಶಾಲೆಗೆ ಅಲ್ಪ ಪ್ರಮಾಣದ ಅನುದಾನ ಒದಗಿಸಲಾಗುತ್ತಿದೆ. ಇನ್ನು ಕೆಲವು ಶಾಲೆಗಳಿಗೆ ಕೇರಳ ಮಾದರಿಯಲ್ಲಿ ಶಾಲಾ ವ್ಯಾಪ್ತಿಯ ಸಚಿವ, ಶಾಸಕ ಅಥವಾ ಜನಪ್ರತಿಧಿನಿಗಳ ಮೂಲಕ ಅಭಿವೃದ್ಧಿಗೆ ಮುಂದಾಗಿದೆ.

1776 ಶಾಲೆಗಳಿಗೆ ಬೀಗ
ಕನ್ನಡ ಶಾಲೆ ಮುಚ್ಚುವುದಿಲ್ಲ ಎಂದು ಹೇಳುತ್ತಲೇ ಬರುತ್ತಿರುವ ಸರ್ಕಾರ ಕಳೆದ 7 ವರ್ಷದಲ್ಲಿ 1776 ಸರ್ಕಾರಿ ಶಾಲೆ ಮುಚ್ಚಿದೆ ಎಂಬುದನ್ನು ವರದಿಯಲ್ಲಿ ಬಹಿರಂಗಪಡಿಸಿದೆ. 2010-11ರಲ್ಲಿ ರಾಜ್ಯದಲ್ಲಿ 23,109 ಕಿರಿಯ ಹಾಗೂ 22,568 ಹಿರಿಯ ಪ್ರಾಥಮಿಕ ಶಾಲೆ ಅಸ್ಥಿತ್ವದಲ್ಲಿದ್ದವು. 2016-17ನೇ ಸಾಲಿನಲ್ಲಿ ಕ್ರಮವಾಗಿ 21,881 ಹಾಗೂ 22,454ಕ್ಕೆ ಇಳಿದಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಇಟಿ) ಅನುಷ್ಠಾನವಾಗಿ, ಶಿಕ್ಷಣ ಮೂಲಭೂತ ಹಕ್ಕಾಗಿ ಜಾರಿಯಾದ ನಂತರ ಸರ್ಕಾರ 1668 ಕಿರಿಯ ಹಾಗೂ 118 ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿದ್ದು, 3186 ಖಾಸಗಿ ಶಾಲೆ ತೆರೆಯಲು ಅನುಮತಿ ನೀಡಿದೆ.

ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿರುವ ವರದಿ ಬಗ್ಗೆ ಮಾಹಿತಿ ಸಿಕ್ಕಿದೆ. ಎಲ್ಲಾ ಸರ್ಕಾರಿ ಶಾಲೆಗಳು ಸುಸಜ್ಜಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಶಾಲೆಗಳಿಗೆ ಪೀಠೊಪಕರಣದ ಅಗತ್ಯ ಇದೆ. ಅಂಥ ಶಾಲೆಗಳನ್ನು ಗುರುತಿಸಿದ್ದೇವೆ.
-ಬಿ.ಕೆ.ಬಸವರಾಜು, ನಿರ್ದೇಶಕ, ಪ್ರಾಥಮಿಕ ಶಿಕ್ಷಣ

ಬೆಂಗಳೂರು ನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಕಲಿಕೆಗೆ ಯೋಗ್ಯವಾಗಿಲ್ಲದ ತರಗತಿ ಕೊಠಡಿ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಶೌಚಾಲಯ ಇದೆ. ನೀರಿನ ಕೊರತೆಯಿಂದ ಉಪಯೋಗಿಸಲಾಗದ ಸ್ಥಿತಿಯಲ್ಲಿವೆ.
– ಪ್ರೊ. ಎಸ್‌.ಜಿ.ಸಿದ್ದರಾಮಯ್ಯ, ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next