Advertisement
ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡುತ್ತಿರುವ ಈ ದಿನಗಳಲ್ಲಿಯೂ ಈ ಶಾಲೆ ಮಕ್ಕಳು ಮಳೆ, ಗಾಳಿ, ಚಳಿ ಮತ್ತು ಬಿಸಿಲಿನಲ್ಲಿ ಪಾಠ ಕೇಳಬೇಕಾದ ದುಸ್ಥಿತಿಯಿದೆ. ಕೆ.ಆರ್.ಪೇಟೆ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮರದ ಕೆಳಗೆ ಕುಳಿತು ಪಾಠ ಕೇಳಬೇಕಾದ ದುರ್ಗತಿ.ಇನ್ನು ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿಗತಿ ಹೇಗಿರಬಹುದೆಂಬುದು ಬಿಡಿಸಿ ಹೇಳಬೇಕಿಲ್ಲ. 1998ರಲ್ಲಿ ಶಾಲೆ ಆರಂಭ: ಪಟ್ಟಣದ ಹೇಮಾವತಿ ಬಡಾವಣೆ ಯಲ್ಲಿ 1998ರಲ್ಲಿ ಬಾಡಿಗೆ ಮನೆಯೊಂದರಲಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಯಿತು. ನಂತರದ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ಲಾ ತರಗತಿಗಳಿಗೂ ಒಂದೇ ಬಾಡಿಗೆ ಮನೆಯಲ್ಲಿ ಬೋಧನೆ ಮಾಡುವುದು ಕಷ್ಟವಾಯಿತು. ಅಲ್ಲದೆ ಹೆಚ್ಚು ಮನೆಗಳನ್ನು ಬಾಡಿಗೆಗೆ ಪಡೆದರೂ, ಬಾಡಿಗೆ ಕೊಡುವುದು ಕಷ್ಟವಾಗುತ್ತದೆ ಎಂದು ಶಿಕ್ಷಕರು ಅದೇ ಬಡಾವಣೆಯ ಲ್ಲಿರುವ ಗಣಪತಿ ಪಾರ್ಕ್‌ಗೆ ಕರೆತಂದು ಒಂದೊಂದು ಮರದ ಕೆಳಗೆ ಒಂದು ತರಗತಿ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡಲು ಆರಂಭಿಸಿದರು. ಒಂದು ಕಾಲದಲ್ಲಿ 150 ಮಕ್ಕಳಿದ್ದ ಸರ್ಕಾರಿ ಶಾಲೆಯಲ್ಲೀಗ 15 ಮಕ್ಕಳು, ಇಬ್ಬರು ಶಿಕ್ಷರಿದ್ದಾರೆ.
Related Articles
Advertisement
20 ಸಾವಿರ ಮಕ್ಕಳು ಕಲಿತ ಶಾಲೆ: 20 ವಸಂತಗಳನ್ನು ಪೂರೈಸಿರುವ ಈ ಸರ್ಕಾರಿ ಶಾಲೆಯಲ್ಲಿ ಬಯಲಲ್ಲೇ ಪಾಠ ನಡೆಯುತ್ತಿದ್ದರೂ ಮಕ್ಕಳ ಕೊರತೆ ಇರಲಿಲ್ಲ. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸುಮಾರು 20 ಸಾವಿರ ಮಕ್ಕಳು ವ್ಯಾಸಂಗ ಮಾಡಿದ್ದಾರೆ. ಯಾವೊಬ್ಬ ಪೋಷಕರು ತಕರಾರು ಮಾಡಲಿಲ್ಲ. ಇಂತಹ ಶಾಲೆಗೆ ಸೂಕ್ತ ಕಟ್ಟಡ ನಿರ್ಮಾಣ ಮಾಡಲು ಕ್ರಮ ವಹಿಸದ ರಾಜಕಾರಣಿಗಳು ತಮ್ಮ ಪ್ರತಿಷ್ಠೆಗಾಗಿ ಮಕ್ಕಳಿಲ್ಲದ ಹಾಗೂ ಈಗಾಗಲೇ ಕೊಠಡಿಗಳಿರುವ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಿಸಿಕೊಡುತ್ತಿರುವುದು ವಿಪರ್ಯಾಸ.
ಶಾಲೆಗೆ ಒಂದೇ ಒಂದು ಕೊಠಡಿ!:
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಂದು ನಾಮಫಲಕ ಹಾಕಿಕೊಂಡು ಶಾಲೆಯ ದಾಖಲೆಗಳು, ಪಠ್ಯ ಪರಿಕರಗಳು, ಶಾಲಾ ಸಿಬ್ಬಂದಿ ಆಡಳಿತ ವ್ಯವಹಾರ ನಡೆಸಲು ಅನಿವಾರ್ಯವೆಂಬ ಕಾರಣಕ್ಕೆ ಒಂದೇ ಒಂದು ಕೊಠಡಿ ನಿರ್ಮಿಸಲಾಗಿದೆ. ಅದರಲ್ಲೇ ಮಳೆ ಬಂದರೆ ಎಲ್ಲಾ ಮಕ್ಕಳು(ಒಂದರಿಂದ ನಾಲ್ಕನೇ ತರಗತಿ) ಶಾಲಾ ಸಿಬ್ಬಂದಿ, ಮುಖ್ಯ ಶಿಕ್ಷಕರು, ಮೇಜು, ಕುರ್ಚಿ………ಇತ್ಯಾದಿ ಎಲ್ಲವನ್ನೂ ಆ ಒಂದೇ ಕೊಠಡಿಯಲ್ಲಿ ತುಂಬಿಸಿಕೊಂಡು ಮಳೆ ನಿಂತ ಮೇಲೆ ಮಕ್ಕಳನ್ನು ಮನೆಗಳಿಗೆ ಕಳಿಸಿ ಶಿಕ್ಷಕರು ಹೊರಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ಮಳೆ ಬಂದರೆ ಶಾಲೆಗೆ ರಜಾ:
ಶಾಲೆಯಲ್ಲಿ ಇರುವ ಒಂದು ಕೊಠಡಿಯಲ್ಲಿ ದಾಖಲೆಗಳು, ಮೇಜು, ಕುರ್ಚಿ, ಮತ್ತಿತತರೆ ಶಾಲಾ ವಸ್ತುಗಳನ್ನು ತುಂಬಿಕೊಂಡಿದ್ದಾರೆ. ಮಕ್ಕಳಿಗೆ ಮಾತ್ರ ಪಾಠ ಕೇಳಲು ಉದ್ಯಾನವನದ ಬಯಲೇ ಗತಿ. ಬಯಲಲ್ಲಿ ಮಕ್ಕಳು ಕುಳಿತು ಪಾಠ ಕಲಿಯುವಾಗ ಸಣ್ಣ ಮಳೆ ಬಂದರೂ ಸಾಕು ಅಂದಿನ ಪಾಠಕ್ಕೆ ಬ್ರೇಕ್. ಅನಿವಾರ್ಯವಾಗಿ ಶಾಲೆಗೆ ರಜೆ ಕೊಡದೆ ಅನ್ಯ ಮಾರ್ಗವಿಲ್ಲ. ಇನ್ನು ಈಗ ಈ ಎರಡು ತಿಂಗಳಲ್ಲೂ ನಿರಂತರ ಜಡಿ ಮಳೆ ಹಿಡಿದುಕೊಳ್ಳುವುದರಿಂದ ಶಾಲೆಗೆ ವಾರಗಟ್ಟೆಲೇ ರಜೆ ಕೊಡಬೇಕಾದ ಪರಿಸ್ಥಿತಿ ಬರುತ್ತದೆ. ಜೊತೆಗೆ ಸುತ್ತಮುತ್ತ್ತಲಿನ ಜನರ ಮಾತುಗಳು, ಗಲಾಟೆ, ಪಾರ್ಕ್ ಆವರಣದಲ್ಲಿ ಓಡಾಡುವ ನಾಯಿ, ಹಸು ಮತ್ತು ಪೋಲಿ ಹುಡುಗರ ಕೀಟಲೆಗಳ ನಡುವೆ ಮಕ್ಕಳು ಎಷ್ಟರ ಮಟ್ಟಿಗೆ ಪಾಠ ಕಲಿಯಲು ಸಾಧ್ಯ. ಆದರೂ ಕಲಿಯಲೇಬೇಕು. ಬೇರೆ ದಾರಿಯಿಲ್ಲ.
● ಎಚ್.ಬಿ.ಮಂಜುನಾಥ್