Advertisement

ಸರಕಾರಿ ಶಾಲಾ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಇಲ್ಲ

08:11 AM Sep 28, 2019 | sudhir |

ಬೆಂಗಳೂರು: ಪ್ರಸಕ್ತ ಸಾಲಿ ನಲ್ಲಿ ಸರಕಾರಿ ಶಾಲೆ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ನೀಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಗುರುವಾರ ಖಾಸಗಿ ಶಾಲಾ ಒಕ್ಕೂಟದ ಜತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಭೆಯಲ್ಲಿ ಮಾತನಾಡಿದ ಸಚಿವ ಸುರೇಶ್‌ ಕುಮಾರ್‌, ಪ್ರಸಕ್ತ ಸಾಲಿನಲ್ಲಿ ಸರಕಾರಿ ಶಾಲೆ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ನೀಡುವುದಿಲ್ಲ. ಈ ವರ್ಷದ ಸಮವಸ್ತ್ರ ಟೆಂಡರ್‌ ಮತ್ತು ತೀರ್ಮಾನಗಳು ತಾವು ಸಚಿವರಾಗಿದ್ದಾಗ ತೆಗೆದುಕೊಂಡಿರುವ ನಿರ್ಧಾರಗಳಲ್ಲ. ಮುಂದಿನ ವರ್ಷ ಎರಡನೇ ಜತೆ ಸಮವಸ್ತ್ರ ನೀಡುವುದರ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನೋ ಡಿಟೆನ್ಶನ್‌ ರದ್ದು?
1ರಿಂದ 8ನೇ ತರಗತಿ ತನಕ ಯಾವ ವಿದ್ಯಾರ್ಥಿಯನ್ನು ಫೇಲ್‌ ಮಾಡುವಂತಿಲ್ಲ ಎಂಬ ಕಾನೂನಿನಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ. ಈ ಹಿಂದಿನಂತೆ 6- 8ನೇ ತರಗತಿ ನಡುವೆ ಒಂದು ಪಬ್ಲಿಕ್‌ ಎಕ್ಸಾಂ ನಡೆಸುವುದರಿಂದ ಶಿಕ್ಷಣದ ಗುಣಮಟ್ಟ ಸುಧಾರಣೆಗೊಳ್ಳಲಿದೆ. ಹಾಗಾಗಿ ಕೇಂದ್ರ ಸರಕಾರದ “ನೋ ಡಿಟೆನ್ಶನ್‌’ ನಿಯಮವನ್ನು ರದ್ದುಗೊಳಿಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಸುರೇಶ್‌ ಕುಮಾರ್‌ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಮಾತನಾಡಿ ಪ್ರತಿ ವರ್ಷ ಖಾಸಗಿ ಶಾಲೆಗಳ ಅನುಮತಿ ನವೀಕರಣ ಮಾಡುವ ಅವೈಜ್ಞಾನಿಕ ಪದ್ಧತಿಯನ್ನು ರದ್ದುಗೊಳಿಸಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾದರಿಯಲ್ಲಿ ರಾಜ್ಯ ಸರಕಾರದ ಅನುದಾನ ರಹಿತ ಶಾಲೆಗಳ ಹಿತ ಕಾಯಬೇಕು. ಪ್ರತಿ ವರ್ಷದ ಜನವರಿ ತಿಂಗಳೊಳಗೆ ಶಿಕ್ಷಕರ ತರಬೇತಿ, ಸರಕಾರಿ ಸಭೆಗಳಂಥ ಕೆಲಸಗಳನ್ನು ಮುಗಿಸಬೇಕು, ಅನಂತರ ಶಿಕ್ಷಕರು ವಿದ್ಯಾರ್ಥಿಗಳ ವ್ಯಾಸಂಗದ ಕಡೆ ಗಮನಹರಿಸುವ ಕೆಲಸ ಮಾಡಬಹುದು ಎಂದು ಸಚಿವರಿಗೆ ಮನವಿ ಮಾಡಿದರು.

ಕ್ಯಾಮ್ಸ್‌ ಖಾಸಗಿ ಶಾಲೆಗಳ ಸಂಘ ಟನೆ ಕಾರ್ಯದರ್ಶಿ ಶಶಿಕುಮಾರ್‌ ಮಾತನಾಡಿ, ಶಿಕ್ಷಣ ಇಲಾಖೆ ಶಾಲೆಗಳಿಗೆ ಬಾಕಿ ಉಳಿಸಿಕೊಂಡಿರುವ ಆರ್‌ಟಿಇ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

Advertisement

ಮಕ್ಕಳಿಗೆ ಹೆಚ್ಚಿನ ಹೋಂ ವರ್ಕ್‌ ನೀಡುವುದು ಸರಿಯಲ್ಲ. ಇದರಿಂದಾಗಿ ರಜೆ ದಿನಗಳಲ್ಲೂ ಮಕ್ಕಳು ಹೆಚ್ಚಿನ ಕಾಲ ಪುಸ್ತಕಗಳ ಮುಂದೆ ಕೂರುವಂತಾಗಿದೆ. ಹೋಂ ವರ್ಕ್‌ ಎಂಬುದು ಮಕ್ಕಳಿಗೆ ಶಿಕ್ಷೆಯಂತಾಗಿ ಪರಿಣಮಿಸಿದೆ. ಹಾಗಾಗಿ ಇದನ್ನು ಕಡಿಮೆಗೊಳಿಸಬೇಕು ಅಥವಾ ನಿಷೇಧಿಸಬೇಕು ಎಂದು ಎಂದು ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next