Advertisement
ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಅತಿಯಾದ ಮಳೆಯಿಂದ ಹೆಚ್ಚಾಗಿ ಸರ್ಕಾರಿ ಶಾಲಾ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ನಿರಂತರ ಮಳೆಯಿಂದಾಗಿ ಶಾಲೆಯ ಮೇಲ್ಛಾವಣಿಗಳು ಸೋರುತ್ತಿರುವುದು, ಗೋಡೆಗಳು ಬಿರುಕು ಬಿಟ್ಟಿರುವುದು, ಕೊಠಡಿಗಳು ಕುಸಿದು ಬಿದ್ದಿರುವುದು, ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ ಉದುರುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸರ್ಕಾರಿ ಶಾಲಾ ಕೊಠಡಿಗಳು ತುತ್ತಾಗಿವೆ. ಇಂತಹ ಶಾಲೆಗಳ ಬಗ್ಗೆ ಸರ್ಕಾರ, ಶಿಕ್ಷಣ ಇಲಾಖೆ ಹೆಚ್ಚು ಗಮನ ನೀಡಿ ಕೂಡಲೇ ಕಟ್ಟಡಗಳನ್ನು ದುರಸ್ತಿಗೊಳಿಸುವ ಮೂಲಕ ಪಾಲಕರು ಮತ್ತು ಮಕ್ಕಳ ಆತಂಕ ದೂರ ಮಾಡಲು ಕ್ರಮ ಕೈಗೊಳ್ಳಬೇಕಿದೆ.
Related Articles
Advertisement
ಪರ್ಯಾಯ ವ್ಯವಸ್ಥೆ: ನಿರಂತರ ಮಳೆಯಿಂದಾಗಿ ಕೊಠಡಿಗಳು ಹಾನಿಗೊಂಡಿದ್ದು, ಜಿಲ್ಲೆಯಲ್ಲಿ ಕಂಡುಬಂದ ಇಂತಹ ಕೊಠಡಿಗಳನ್ನು ಪಟ್ಟಿ ಮಾಡಿರುವ ಶಿಕ್ಷಣ ಇಲಾಖೆ, ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸದೇ ಪರ್ಯಾಯ ಕೊಠಡಿಗಳಲ್ಲಿ ವ್ಯವಸ್ಥೆ ಕಲ್ಪಿಸಿ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಹಲವು ಶಾಲೆಗಳಲ್ಲಿ ಮಕ್ಕಳು ಸೋರುವ ಕೊಠಡಿಗಳಲ್ಲಿಯೇ ಶಿಕ್ಷಣ ಪಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟಿನಲ್ಲಿ ಇನ್ನಾದರೂ ಜಿಲ್ಲಾಡಳಿತ ಜಿಲ್ಲೆಯಲ್ಲಿನ ಸರ್ಕಾರಿ ಕಟ್ಟಡಗಳ ದುರಸ್ತಿ, ಶಿಥಿಲಾವಸ್ಥೆಯ ಕಟ್ಟಡಗಳ ಬಗ್ಗೆ ಗಮನ ಹರಿಸಿ ಅನಾಹುತಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
10 ಕೋಟಿ ಬಿಡುಗಡೆಗೆ ಪ್ರಸ್ತಾವನೆ
ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ಹಾನಿಗಿಡಾದ 1104 ಕೊಠಡಿಗಳ ದುರಸ್ತಿಗೆ ವಿಪತ್ತು ಪರಿಹಾರ ನಿಧಿ ಯಿಂದ 9.62 ಕೋಟಿ ರೂ. ಬಿಡುಗಡೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿಥಿಲಗೊಂಡ ಕೊಠಡಿಗಳಿಂದ ಮಕ್ಕಳನ್ನು ಲಭ್ಯವಿರುವ ಸುಸಜ್ಜಿತ ಕೊಠಡಿಗಳಿಗೆ ಸ್ಥಳಾಂತರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡುವಂತೆ ಎಲ್ಲ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಲಾ ಕೊಠಡಿ ಕೊರತೆ ಇರುವ ಕಡೆ ಸರ್ಕಾರಿ ಕಟ್ಟಡ, ಪಂಚಾಯಿತಿ ಕಟ್ಟಡಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಬಿ.ಎಸ್.ಜಗದೀಶ್ವರ ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ವಾರ ಸುರಿದ ನಿರಂತರ ಮಳೆಯಿಂದ ಜಿಲ್ಲೆಯ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಇಂತಹ 1141 ಕಟ್ಟಡಗಳನ್ನು ಗುರುತಿಸಿದ್ದು, ಸಂಬಂಧಪಟ್ಟ ಇಲಾಖೆಗಳು ಕಟ್ಟಡಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಿವೆ. ಹಾನಿಗೊಂಡ ಕಟ್ಟಡಗಳ ದುರಸ್ತಿಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. –ಡಾ|ಎನ್.ತಿಪ್ಪೇಸ್ವಾಮಿ, ಅಪರ ಜಿಲ್ಲಾಧಿಕಾರಿ
-ವೀರೇಶ ಮಡ್ಲೂರ