ರಿಷಭ್ ಶೆಟ್ಟಿ ನಿರ್ಮಾಣ, ನಿರ್ದೇಶನದ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮುಂದಿನ ತಿಂಗಳು ತೆರೆಕಾಣಲಿದೆ. ಚಿತ್ರದ ಹಾಡುಗಳು ಹಿಟ್ ಆಗುವ ಮೂಲಕ ಸಿನಿಮಾದ ಬಗೆಗಿನ ಕುತೂಹಲ ಕೂಡ ಹೆಚ್ಚಾಗಿದೆ. ಈಗಾಗಲೇ ರಿಷಭ್ ತಮ್ಮ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಎರಡು ಹಾಡುಗಳು ಹಿಟ್ ಆಗಿವೆ.
ಅದರಲ್ಲೂ ಚಿತ್ರದ “ದಡ್ಡ’ ಹಾಡು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಅದರ ಬೆನ್ನಲ್ಲೇ “ಹೇ ಶಾರದೇ’ ಹಾಡನ್ನು ಬಿಡುಗಡೆ ಮಾಡಿದ್ದರು. ಈ ಹಾಡು ಕೂಡಾ ಮೆಚ್ಚುಗೆ ಪಡೆದಿತ್ತು. ಈ ಹಾಡನ್ನು ಆಶಾ ಹಾಗೂ ಸುನಿಧಿ ಎಂಬ ಮಕ್ಕಳಿಬ್ಬರು ಹಾಡಿದ್ದರು. ಈಗ ಮತ್ತೂಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ ರಿಷಭ್.
ಅದು “ಬಲೂನ್’. ಚಿತ್ರದ “ಬಲೂನ್’ ಹಾಡು ಬಿಡುಗಡೆಯಾಗಿದ್ದು, ಹೊಸ ಬಗೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡನ್ನು ಸರಿಗಮಪ ಖ್ಯಾತಿಯ ಜ್ಞಾನೇಶ್ವರ್ ಹಾಡಿದ್ದಾರೆ. ಬಲೂನ್ ಹಾಡಿನಲ್ಲಿ ಪೋಷಕರ ಹಾಗೂ ಮಕ್ಕಳ ಭಾವನೆಗಳನ್ನು ಹಾಸ್ಯಮಿಶ್ರಿತ ರೀತಿಯಲ್ಲಿ ಹೇಳಲಾಗಿದೆ. ತನ್ನ ತಂದೆ ಬಿಸಿಲಿನಲ್ಲಿ ಬಲೂನ್ ಮಾರಲು ನಿಲ್ಲಿಸಿದಾಗ ಬಾಲಕನ ಮನಸ್ಸಿನಲ್ಲಾಗುವ ಭಾವನೆಗಳ ಸುತ್ತ ಈ ಹಾಡು ಸಾಗುತ್ತದೆ.
ವಿಭಿನ್ನ ಶೈಲಿಯಲ್ಲಿ ಈ ಹಾಡು ಇರುವುದರಿಂದ ಇದು ಕೂಡಾ “ದಡ್ಡ’ ಹಾಡಿನಂತೆ ಸೌಂಡ್ ಮಾಡುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು. ಚಿತ್ರದಲ್ಲಿ ಅನಂತ್‌ನಾಗ್ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಬಹುತೇಕ ಹೊಸಬರೇ ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಹಾಡುಗಳು ಮಾತ್ರ ಸ್ಟಾರ್‌ಗಳ ಚಿತ್ರದಂತೆ ಹಿಟ್ ಆಗಿದೆ ಎಂಬ ಖುಷಿ ಚಿತ್ರತಂಡದ್ದು.
ರಿಷಭ್ ಇಲ್ಲಿ ಒಂದು ಸೂಕ್ಷ್ಮ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬ ಅಂಶವನ್ನು ಇಲ್ಲಿ ಹೇಳಲು ಹೊರಟಿದ್ದಾರಂತೆ. ಇದು ರೆಗ್ಯುಲರ್ ಶೈಲಿಯ ಸಿನಿಮಾವಲ್ಲ. ಕನ್ನಡದ ಬಗೆಗಿನ ಹೋರಾಟ, ಅಲ್ಲಿನ ಶಾಲೆಗಳ ಪರಿಸ್ಥಿತಿಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ.
ಹಾಗಂತ ಇಲ್ಲಿ ಬೋಧನೆ ಇಲ್ಲ. ವಿಷಯವನ್ನು ಮಜಾವಾಗಿ ಹೇಳಲು ಪ್ರಯತ್ನಿದ್ದೇನೆ. ಇದೊಂದು ಯುನಿವರ್ಸಲ್ ಸಬೆjಕ್ಟ್. ನಾನು ಕಾಸರಗೋಡನ್ನು ಮೂಲವಾಗಿಟ್ಟುಕೊಂಡು ಮಾಡಿದ್ದೇನೆ. ಇದನ್ನು ಯಾವ ಊರಿಗೆ ಬೇಕಾದರೂ ಕನೆಕ್ಟ್ ಮಾಡಿಕೊಂಡು ಮಾಡಬಹುದು ಎನ್ನುವುದು ರಿಷಭ್ ಮಾತು.