Advertisement

ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅಣಿಯಾದ ಸರಕಾರಿ ಶಾಲೆ​​​​​​​

12:30 AM Mar 16, 2019 | |

ಪಡುಬಿದ್ರಿ: ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಈ ದಿನಗಳಲ್ಲಿ ತಮ್ಮ ಶಾಲೆಯನ್ನು ಜೀವಂತ ಉಳಿಸಲು ನಂದಿಕೂರು ಹಿ.ಪ್ರಾ.ಶಾಲೆ ಹಳೆ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಅದರಂತೆ ನಂದಿಕೂರು ಎಜುಕೇಶನ್‌ ಟ್ರಸ್ಟ್‌ ಮಾ.18ರಂದು ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರೆಯ ಸಂದರ್ಭ ಉದ್ಘಾಟನೆಗೊಳ್ಳಲಿದೆ. ಮುಂದಿನ ವರ್ಷದಿಂದ ಆಂಗ್ಲಮಾಧ್ಯಮ ಶಿಕ್ಷಣವನ್ನೂ ನೀಡಲಿದೆ. 
 
ಶತಮಾನದ ಶಾಲೆ
ದಾಖಲೆಗಳ ಪ್ರಕಾರ ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ  ಗೋಪುರದಲ್ಲಿ ಬ್ರಿಟಿಷರ ಕಾಲದಿಂದಲೂ ಈ ಶಾಲೆ ನಡೆದುಕೊಂಡು ಬರುತ್ತಿತ್ತು. ರಾಮರಾವ್‌ ಪಡುಬಿದ್ರಿ ಎಂಬ ಶಿಕ್ಷಕರು ಮುಳಿಹುಲ್ಲಿನ ಛಾವಣಿಯಲ್ಲಿ ಮರಳಿನಲ್ಲಿಯೇ ಅಕ್ಷರಾಭ್ಯಾಸವನ್ನು ನಡೆಸಿದ ಶಾಲೆ “ಅರಮಂದ ಕಾಡು ಶಾಲೆ’ ಎಂದು ಪ್ರಚಲಿತಗೊಂಡಿತ್ತು. ಶಾಲೆಯ ಉಚ್ಛಾಯ ಸ್ಥಿತಿಯ ವೇಳೆ 600 ವಿದ್ಯಾರ್ಥಿಗಳು ಹಾಗೂ ಸುಮಾರು 20 ಶಿಕ್ಷಕರನ್ನು ಹೊಂದಿತ್ತು. 

Advertisement

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಶ್ರಮ 
ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿ, ವಿದ್ಯಾರ್ಥಿಗಳ ಸಂಖ್ಯೆ ಕೊರತೆಯಿಂದ ಈಗ ಮೂವತ್ತೇಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ನಾಲ್ಕು ತಂಡಗಳನ್ನು ರಚಿಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಶ್ರಮಿಸಲಾಗುತ್ತಿದೆ. 

ಜತೆಗೆ ಮುಂದಿನ ವರ್ಷದಿಂದ ಟ್ರಸ್ಟ್‌ ಮೂಲಕ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯವರೆಗೆ ಉಚಿತ ಆಂಗ್ಲ  ಮಾಧ್ಯಮ ಶಿಕ್ಷಣವನ್ನೂ ನೀಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. 

ಶಾಲಾಭಿವೃದ್ಧಿ 
ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ ಅಗತ್ಯವಿರುವ ಮೂಲ ಸೌಕರ್ಯಗಳಾದ ಕಲಿಕಾ ಸಾಮಾಗ್ರಿಗಳು, ಪೀಠೊಪಕರಣ, ತರಗತಿ ಕೊಠಡಿಗಳಿಗೆ ವಿದ್ಯುತ್‌ ದೀಪಗಳ ಜೋಡಣೆ, ಕುಡಿಯುವ ನೀರು, ನಳ್ಳಿ ನೀರಿನ ವ್ಯವಸ್ಥೆ, ಅಕ್ಷರ ದಾಸೋಹ ಕೊಠಡಿಯ ನವೀಕರಣ, ಶಾಲಾ ಕಚೇರಿಗೆ ಆಧುನಿಕ ಸ್ಪರ್ಶ, ವಿದ್ಯಾರ್ಥಿಗಳಿಗೆ ಮತ್ತು ಕಚೇರಿ ಉಪಯೋಗಕ್ಕಾಗಿ ಕಂಪ್ಯೂಟರ್‌ ಹಾಗೂ ಪ್ರಿಂಟರ್‌ ವ್ಯವಸ್ಥೆ, ಶೌಚಾಲಯ ದುರಸ್ತಿ, ನಲಿ-ಕಲಿ ತರಗತಿಗೆ ಸಲಕರಣೆಗಳ ಜೋಡಣೆ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು  ಮಾಡಲಾಗಿದೆ. 

ಅರ್ಜಿ ಸಲ್ಲಿಸಲಾಗುವುದು.
ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮೌಖೀಕ ಆದೇಶ ನೀಡಿದ್ದಾರೆ. ಅಲ್ಲದೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಶಿಕ್ಷಕರೋರ್ವರನ್ನು ನಿಯೋಜಿಸಿ ಆಂಗ್ಲ ಭಾಷಾ ಸಂವಹನದ ಶಿಕ್ಷಣವನ್ನೂ ನೀಡಲಾಗುತ್ತದೆ. 2020-21 ನೇ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 6 ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ಪರವಾನಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕಾಗಿ ಅರ್ಜಿ ಸಲ್ಲಿಸಲಾಗುವುದು.
– ಲಕ್ಷ್ಮಣ್‌ ಶೆಟ್ಟಿವಾಲ್‌, ಶಾಲಾ ಹಳೆ ವಿದ್ಯಾರ್ಥಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next