ಮುದ್ದೇಬಿಹಾಳ: ಸಮಸ್ಯೆಗಳನ್ನೇ ಕಂಟಕವಾಗಿಸಿ ಕೊಂಡಿದ್ದ ಇಲ್ಲಿನ ಶತಮಾನ ಪೂರೈಸಿದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ನೀಡಲು ಶಿಕ್ಷಣ ಇಲಾಖೆ ಮುಂದಾಗಿದ್ದು ಇದೀಗ ಶಾಲೆಯ ಮುಂಭಾಗದ ಕಾಂಪೌಂಡ್ ಎತ್ತರಿಸುವ ಮೂಲಕ ಕಿಡಿಗೇಡಿಗಳು ಶಾಲಾ ಆವರಣ ಪ್ರವೇಶಿಸಿ ನಡೆಸುವ ಹಾವಳಿಗೆ ಕಡಿವಾಣ ಹಾಕಲು ಶುಕ್ರವಾರ ಕ್ರಮ ಕೈಗೊಳ್ಳಲಾಗಿದೆ.
ಪಿಎಸೈ ಮಲ್ಲಪ್ಪ ಮಡ್ಡಿ ಅವರು ಮೊದಲ ಕಲ್ಲನ್ನು ಇಟ್ಟು ಸಿಮೆಂಟ್ ಹಾಕಿದರೆ, ಎರಡನೇ ಕಲ್ಲನ್ನು ಬಿಇಒ ಗಾಂಜಿ ಅವರೇ ಇಟ್ಟು ಸಿಮೆಂಟ್ ಹಾಕುವ ಮೂಲಕ ಶಾಲೆ ಮುಂಭಾಗದ ಕಾಂಪೌಂಡ್ ಎತ್ತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಗೋವಾ ಭಾಗದಲ್ಲಿ ಬಳಸುವ ಕೆಂಪು ವರ್ಣದ ಚೆರ್ರಿ ಕಲ್ಲುಗಳನ್ನು ಕಾಂಪೌಂಡ್‌ಗೆ ಬಳಸಿದ್ದು ವಿಶೇಷವಾಗಿದೆ.
ಡಿ. 3ರಂದು ಶತಮಾನದ ಶಾಲೆಗೆ ಸಮಸ್ಯೆಗಳೇ ಕಂಟಕ ಶಿರೋನಾಮೆಯಡಿ ಉದಯವಾಣಿ ಪ್ರಕಟಿಸಿದ್ದ ಗಮನ ಸೆಳೆಯುವ ವಿಶೇಷ ವರದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಸ್ಪಂದಿಸಿ ಅಂದೇ ಶಾಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಪಟ್ಟಿ ಮಾಡಿಕೊಂಡಿದ್ದರು. ಶಾಲೆಯ ಮುಂಭಾಗದ ಕಾಂಪೌಂಡ್ ಸಮಸ್ಯೆಯನ್ನು ತುರ್ತು ಆದ್ಯತೆ ಮೇರೆಗೆ ಬಗೆಹರಿಸಲು ಸ್ಥಳದಲ್ಲೇ ಶಾಲಾ ಸಂಚಿತ ನಿಧಿ ಅಡಿ 60,000 ರೂ. ಬಳಕೆಗೆ ಮಂಜೂರಾತಿ ನೀಡಿ ಕಾಂಪೌಂಡ್ ಎತ್ತರಿಸುವುದಾಗಿ ತಿಳಿಸಿದ್ದರು. ಇದೀಗ ಅವರು ತಾವು ಅಂದು ನೀಡಿದ್ದ ಭರವಸೆಯನ್ನು ಈಡೇರಿಸಿ ಶತಮಾನದ ಶಾಲೆಯ ಬಗೆಗಿನ ತಮ್ಮ ಕಾಳಜಿ ತೋರಿಸಿಕೊಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಬಿಇಒ ಗಾಂಜಿ ಅವರು, ಈ ಶಾಲಾ ಆವರಣದಲ್ಲಿ ಕೆಬಿಎಂಪಿಎಸ್, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಆರ್‌ಎಂಎಸ್‌ಎ ಶಾಲೆಗಳು ನಡೆಯುತ್ತವೆ. ಈಗಾಗಲೇ ಶಾಲಾ ಆವರಣ ಸ್ವತ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಶಾಲೆ ಹಿಂಭಾಗದಲ್ಲಿ ಬಸ್‌ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಾಂಪೌಂಡ್ ಅನ್ನು ಈಗಾಗಲೇ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಅವರು ಎತ್ತಿರಿಸಿ ಕಟ್ಟಿಸಿ ಕಿಡಿಗೇಡಿಗಳು ಒಳಗೆ ನುಸುಳದಂತೆ ಕ್ರಮ ಕೈಗೊಂಡಿದ್ದಾರೆ.
ಶಾಲೆ ಮುಂಭಾಗದ ಕಾಂಪೌಂಡ್ ಎತ್ತರಿಸಲು ಇದೀಗ ಪ್ರಾರಂಭಿಸಲಾಗಿದೆ. ಶತಮಾನದ ಈ ಶಾಲೆಯ ವ್ಯವಸ್ಥೆ ಅತ್ಯುತ್ತಮವಾಗಿರಬೇಕು ಎನ್ನುವುದು ಎಲ್ಲರ ಅಪೇಕ್ಷೆ. ಉತ್ತಮ ಆಟದ ಮೈದಾನ, ಮಕ್ಕಳಿಗೆ ಮೂಲಸೌಕರ್ಯ ಸೇರಿ ಎಲ್ಲ ಸೌಲಭ್ಯ ದೊರಕಿಸಿಕೊಡುವುದು ನಮ್ಮ ಉದ್ದೇಶ. ಇಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುವಂತಾಗಬೇಕು. ಶಾಸಕರ ನೆರವಿನೊಂದಿಗೆ ಇನ್ನೂ ಹೆಚ್ಚು ಸೌಲಭ್ಯ ಪಡೆದುಕೊಂಡು ಇದನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಎಸಿಎಂಸಿ ಅಧ್ಯಕ್ಷ ಹುಸೇನಬಾಷಾ ಮಮದಾಪುರ, ಕೆಬಿಎಂಪಿಎಸ್‌ನ ಮುಖ್ಯಾಧ್ಯಾಪಕ ಟಿ.ಎನ್. ರೂಢಗಿ, ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಂ.ಎಸ್. ಕವಡಿಮಟ್ಟಿ, ಆದರ್ಶ ವಿದ್ಯಾಲಯ ಪ್ರಾಂಶುಪಾಲೆ ಎನ್.ಬಿ. ತೆಗ್ಗಿನಮಠ ಇದ್ದರು. ಸಿಆರ್‌ಸಿ ಟಿ.ಡಿ. ಲಮಾಣಿ ನಿರೂಪಿಸಿದರು.