Advertisement

ಆಂಗ್ಲ ಮಾಧ್ಯಮಕ್ಕೆ ಅಣಿಯಾದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು

11:22 PM May 11, 2019 | mahesh |

ಬೆಳ್ಳಾರೆ: ಸರಕಾರ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಸುಳ್ಯ ತಾಲೂಕಿನ ಗ್ರಾಮೀಣ ಭಾಗದ ಎರಡು ಸರಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಹೆತ್ತವರು ಹಾಗೂ ಊರವರು ಮುಂದೆ ಬಂದಿದ್ದಾರೆ.

Advertisement

ಅಲೆಕ್ಕಾಡಿ, ಪಂಜದಲ್ಲಿ ಪೂ.ಪ್ರಾ. ಶಾಲೆ
ಅಲೆಕ್ಕಾಡಿ ಮುರುಳ್ಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾತಿ ಆರಂಭಿಸಲಾಗಿದ್ದು, 20ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿಗೆ ಹೆಸರು ನೋಂದಾಯಿಸಿದ್ದಾರೆ. ಸುಮಾರು 6 ಲಕ್ಷ ರೂ. ವೆಚ್ಚದ ಈ ಯೋಜನೆಗೆ ಸಹಕರಿಸಲು ಊರವರು ಹಾಗೂ ಹೆತ್ತವರೇ ಮುಂದೆ ಬಂದಿರುವುದು ವಿಶೇಷ. ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ಸಮಿತಿಯನ್ನು ರಚಿಸಲಾಗಿದ್ದು, ವಿದ್ಯಾರ್ಥಿಗಳನ್ನು ದಾಖಲಿಸುವಲ್ಲಿ ಸಮಿತಿ ಕಾರ್ಯೋನ್ಮುಖವಾಗಿದೆ. 4 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಇಲ್ಲಿ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ದಾಖಲಾತಿ ಪಡೆಯುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ದಾನಿಗಳ ನೆರವಿನಿಂದ ಊಟ ಇನ್ನಿತರ ಖರ್ಚು – ವೆಚ್ಚಗಳನ್ನು ಭರಿಸಲು ನಿರ್ಧರಿಸಲಾಗಿದೆ.

ಪಂಜದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ ಆಂಗ್ಲಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತಿದ್ದು, 3 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಎಲ್‌.ಕೆ.ಜಿ. ತರಗತಿಗೆ, 4 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಯುಕೆಜಿ ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಯೂ 35ಕ್ಕೂ ಅಧಿಕ ಮಕ್ಕಳು ದಾಖಲಾತಿಗೆ ಹೆಸರು ನೋಂದಾಯಿಸಿದ್ದಾರೆ. ಇಲ್ಲಿ ಇಬ್ಬರು ಶಿಕ್ಷಕಿಯರು ಹಾಗೂ ಒಬ್ಬರು ಸಹಾಯಕಿ ಕಾರ್ಯ ನಿರ್ವಹಿಸಲಿದ್ದಾರೆ. ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಯವರ ಉಪಸ್ಥಿತಿ ಯಲ್ಲಿ ಸಭೆ ನಡೆಸಲಾಗಿದ್ದು, ಪೂ.ಪ್ರಾ. ಶಾಲಾ ಸಮಿತಿಯನ್ನೂ ರಚಿಸಲಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಶ್ರಮ
ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವ ಈ ದಿನಗಳಲ್ಲಿ ಶಾಲೆಯನ್ನು ಜೀವಂತ ಉಳಿಸಲು ಹೆತ್ತವರೇ ಮುತುವರ್ಜಿ ವಹಿಸಿ ಗ್ರಾಮೀಣ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಮುಂದಾಗಿದ್ದು, ಇದರಿಂದ ಮುಂದೆ ಇದೇ ಮಕ್ಕಳು ಒಂದನೇ ತರಗತಿಗೆ ದಾಖಲಾತಿ ಪಡೆದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಉದ್ದೇಶವನ್ನೂ ಹೊಂದಲಾಗಿದೆ. ಇಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಹೆತ್ತವರೇ ಮುತುವರ್ಜಿ ವಹಿಸಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಶ್ರಮಿಸುತ್ತಿದ್ದಾರೆ.

ಸಂಖ್ಯೆ ಹೆಚ್ಚಿಸಲು ಪ್ರಯತ್ನ
ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಲು ಶಿಕ್ಷಣಾಧಿಕಾರಿ ಮೌಖೀಕ ಅನುಮತಿ ನೀಡಿದ್ದಾರೆ. ಖಾಸಗಿ ಶಾಲೆ ಮಾದರಿಯಲ್ಲೇ ಮಕ್ಕಳಿಗೆ ಯಾವುದೇ ಕೊರತೆಯಾಗದ ರೀತಿಯಲ್ಲಿ ಸಮಾನ ಶಿಕ್ಷಣ ನೀಡಲಾಗುವುದು. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸ್ಮಾರ್ಟ್‌ ಕ್ಲಾಸ್‌, ಆಟಪಾಠದೊಂದಿಗೆ ಮೌಲ್ಯಯುತ ಶಿಕ್ಷಣ ನೀಡಿ ಸರಕಾರಿ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತೇವೆ.
-ಅವಿನಾಶ್‌ ದೇವರಮಜಲು,
ಅಧ್ಯಕ್ಷರು ಪೂ.ಪ್ರಾ. ಶಾಲಾ ಸಮಿತಿ, ಅಲೆಕ್ಕಾಡಿ

Advertisement

ಉತ್ತಮ ಸ್ಪಂದನೆ
ಶಿಕ್ಷಣ ಇಲಾಖೆ, ಹೆತ್ತವರು ಹಾಗೂ ಊರವರ ನೆರವಿನಿಂದ ಪಂಜದ ಸರಕಾರಿ ಶಾಲೆಯನ್ನು ಮಾದರಿಯಾಗಿ ಪರಿವರ್ತಿಸಲು ನಿರ್ಧರಿಸಿದ್ದೇವೆ. ಪೂ.ಪ್ರಾ. ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೆತ್ತವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಯಿಂದ ಸರಕಾರದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಪ್ರಯತ್ನಿಸಲಾಗುವುದು.
– ಕಾರ್ಯಪ್ಪ ಗೌಡ ಚಿದ್ಗಲ್ಲು
ಅಧ್ಯಕ್ಷರು, ಪೂ.ಪ್ರಾ.ಶಾಲಾ ಸಮಿತಿ ಪಂಜ

 ಗುಣಮಟ್ಟದ ಶಿಕ್ಷಣ
ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ನಲಿ – ಕಲಿ ಮಾದರಿ ಶಿಕ್ಷಣದೊಂದಿಗೆ ಬಡ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶವಿದೆ.
– ದೇವಿಪ್ರಸಾದ್‌ ಜಾಕೆ, ವಿದ್ಯಾರ್ಥಿ ಹೆತ್ತವರು

– ಉಮೇಶ್‌ ಮಣಿಕ್ಕಾರ

Advertisement

Udayavani is now on Telegram. Click here to join our channel and stay updated with the latest news.

Next