Advertisement
ಶಾಲಾ ವೇಳಾಪಟ್ಟಿಯಲ್ಲಿನ ಮೌಲ್ಯ ಶಿಕ್ಷಣ ಮತ್ತು ಸಾಮಾಜಿಕ ಉಪಯುಕ್ತ ಉತ್ಪಾದನೆ ಕಾರ್ಯಕ್ಕೆ ಮೀಸಲಾಗಿರುವ ಅವಧಿಯನ್ನು ಹೊಂದಿಕೆ ಮಾಡಿಕೊಂಡು ಕಡ್ಡಾಯವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.ವಾರಕ್ಕೆ 120 ನಿಮಿಷ ಅಂದರೆ ಮೂರು ಅವಧಿಯಲ್ಲಿ (40 ನಿಮಿಷ) ವಿಚಾರ ವಿಮರ್ಶೆ ಮತ್ತು ಸಂವಾದವನ್ನು ಒಳಗೊಂಡ ಕಾರ್ಯಕ್ರಮನನ್ನು ಆಯೋಜಿಸಬೇಕು. ವಿದ್ಯಾ ಕೇಂದ್ರಗಳನ್ನು ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯ ಕೇಂದ್ರವನ್ನಾಗಿಸುವುದು ಕಾರ್ಯಕ್ರಮದ ಉದ್ದೇಶ.
ಸ್ಥಳೀಯ ಆಚರಣೆಗಳ ಹಿನ್ನೆಲೆ, ಮಹತ್ವದ ಬಗ್ಗೆ ಚರ್ಚೆ, ರಾಷ್ಟ್ರೀಯ ಹಬ್ಬಗಳ ಮಹತ್ವದ ಬಗ್ಗೆ ಸಂವಾದ, ಸಮಾಜ ಸುಧಾರಕರ ಬಗ್ಗೆ ಚಿಂತನೆಗಳ ಬಗ್ಗೆ ಚರ್ಚೆ, ಸ್ಥಳೀಯ ಪ್ರಸಿದ್ಧ ತಾಣಗಳು, ಕುಲಕಸುಬು, ಗುಡಿ ಕೈಗಾರಿಕೆಗೆಳಿಗೆ ಭೇಟಿ, ಮಹತ್ವದ ಚರ್ಚೆ, ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳ ಬಗ್ಗೆ ಚರ್ಚೆ, ಕುಟುಂಬದ ಸಾಂಪ್ರದಾಯಿಕ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಚರ್ಚೆ, ಅಸಮಾನತೆ ನಿರ್ಮೂಲನೆ, ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭಾತೃತ್ವ ಕುರಿತು ಸಂವಾದ, ಪರಿಸರ ಪ್ರಜ್ಞೆ, ಮೂಢನಂಬಿಕೆ ನಿರ್ಮೂಲನೆ, ಅಡುಗೆ ಮನೆ ಮತ್ತು ನಿತ್ಯ ಜೀವನದಲ್ಲಿ ವಿಜ್ಞಾನ, ಸ್ಥಳೀಯ ಮೌಡ್ಯಗಳ ನಿವಾರಣೆ, ಮನೆ ಮದ್ದುಗಳ ಪರಿಚಯಿಸುವಿಕೆ, ಪ್ರಶ್ನೆ ಕೇಳುವ ಮನೋಭಾವ, ಡಿಜಿಟಲ್ ಸಾಧನಗಳ ಸದ್ಬಳಕೆ, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ, ಸಹಪಂಕ್ತಿ ಭೋಜನದ ಮಹತ್ವ ಮುಂತಾದ ವಿಷಯಗಳಿಗೆ ಒತ್ತು ನೀಡಿ ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗಿದೆ.