ಬೆಂಗಳೂರು: ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿರುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿಗೆ ಖಡಕ್ ನಿರ್ದೇಶನ ನೀಡಿದೆ.
ಪ್ರತಿ ಆಸ್ಪತ್ರೆಯಲ್ಲೂ ಸ್ಟ್ರೆಚರ್ ಮತ್ತು ವ್ಹೀಲ್‌ಚೈರ್ ಹೊಂದಿರಲೇ ಬೇಕು. ವೈದ್ಯರು, ನರ್ಸ್, ಭದ್ರತಾ ಸಿಬ್ಬಂದಿ ಸೇರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಮೇಲೆ ಕರ್ತವ್ಯ ಲೋಪದ ಆರೋಪ ಕೇಳಿ ಬಂದ ತಕ್ಷಣವೇ ಮುಖ್ಯಸ್ಥರು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು.
ರಸ್ತೆ ಅಪಘಾತ ಸೇರಿದಂತೆ ತುರ್ತು ಸೇವೆಗಾಗಿ ಬರುವ ರೋಗಿಗಳಿಗೆ ಅಗತ್ಯ ಸಂದರ್ಭದಲ್ಲಿ ನಿರ್ದಿಷ್ಟ ಚಿಕಿತ್ಸೆ ನೀಡಬೇಕು. ತುರ್ತು ಚಿಕಿತ್ಸಾ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇರಬಾರದು. ವೈದ್ಯರು ಅಥವಾ ಸಿಬ್ಬಂದಿ ವಿರುದ್ಧ ರೋಗಿಗಳ ಕಡೆಯಿಂದ ಯಾವುದೇ ದೂರು ಬಂದರೂ ಅದಕ್ಕೆ ಆಸ್ಪತ್ರೆಯ ಮುಖ್ಯಸ್ಥರೇ ನೇರ ಹೊಣೆಯಾಗಿರುತ್ತಾರೆ ಎಂದು ಎಚ್ಚರಿಸಿದೆ.
ಸಹಾಯಕ ಪ್ರಾಧ್ಯಾಪಕರಿಗೆ ಹಾಗೂ ಸಹ ಪ್ರಾಧ್ಯಾಪಕರಿಗೆ ರಾತ್ರಿ ಪಾಳಿ ಹಾಕುವಂತೆ ಈಗಾಗಲೇ ತಿಳಿಸಲಾಗಿದ್ದು, ಅನೇಕ ಸಂಸ್ಥೆಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಎಲ್ಲಾ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ರಾತ್ರಿಪಾಳಿ ವ್ಯವಸ್ಥೆ ಕಡ್ಡಾಯ ಜಾರಿಮಾಡಬೇಕು. ನಿತ್ಯ ಸೇವೆಗೆ ಬರುವ ಅವಧಿಯನ್ನು ದಾಖಲಿಕರಿಸಿಕೊಳ್ಳಬೇಕು.
ರಾತ್ರಿ ಪಾಳಿಯ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ವರ್ಗ ತಡವಾಗಿ ಸೇವೆಗೆ ಬರುವುದನ್ನು ಸಹಿಸುವುದಿಲ್ಲ. ಅಂತಹ ಸಿಬ್ಬಂದಿ ವಿರುದ್ಧ ಮುಖ್ಯಸ್ಥರು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ವೈದ್ಯಕೀಯ ಕಾಲೇಜು, ಆಸ್ಪತ್ರೆಯ ವೈದ್ಯಾಧಿಕಾರಿಗಳು, ನಿರ್ದೇಶಕರು ಆಸ್ಪತ್ರೆಯ ಆವರಣದಲ್ಲೇ ಇರಬೇಕು. ಆಸ್ಪತ್ರೆಯಿಂದ ಹೊರಗೆ ಹೋಗಬೇಕಾದರೆ ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕರ ಅನುಮತಿಯನ್ನು ಪಡೆಯಬೇಕು.
ಹಾಗೆಯೇ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಆಸ್ಪತ್ರೆ ಬಿಟ್ಟು ಹೋಗುವಂತಿಲ್ಲ. ವೈದ್ಯರಿಗೆ ಆಸ್ಪತ್ರೆಯ ಆವರಣದಲ್ಲಿಯೇ ವಸತಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಸರ್ಕಾರದ ಆದೇಶವನ್ನು ಉಲ್ಲಂ ಸುವ ವೈದ್ಯಕೀಯ, ದಂತವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.