Advertisement

ಹೊರ ರಾಜ್ಯದ ವಲಸಿಗರಿಗೂ “ಅನ್ನಭಾಗ್ಯ’ಕ್ಕೆ ಸರ್ಕಾರ ಸಿದ್ಧ :ಖಾದರ್‌

06:20 AM Jan 19, 2018 | Team Udayavani |

ಬೆಂಗಳೂರು: ಹೊರ ರಾಜ್ಯಗಳಿಂದ ಕೂಲಿಗಾಗಿ ರಾಜ್ಯಕ್ಕೆ ಆಗಮಿಸಿರುವ ಕಾರ್ಮಿಕರಿಗೂ ಅನ್ಯಭಾಗ್ಯ ಯೋಜನೆ ಅಡಿಯಲ್ಲಿ ಆಹಾರ ಧಾನ್ಯ ವಿತರಿಸಲು ರಾಜ್ಯ ಸರ್ಕಾರ ಸಿದ್ದವಿದೆ. ಕೇಂದ್ರ ಸರ್ಕಾರ ಅಗತ್ಯ ಪಡಿತರ ಸರಬರಾಜು ಮಾಡಲಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದ ಇತರ ಜಿಲ್ಲೆಗಳಿಂದ ಕೂಲಿಗಾಗಿ ವಲಸೆ ಬಂದಿರುವ ಕಾರ್ಮಿಕರಿಗೆ ಅವರು ವಾಸಿಸುವ ಸ್ಥಳದಲ್ಲಿಯೇ ಪಡಿತರ ಮೂಲಕ ಆಹಾರ ಧಾನ್ಯ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರ ಅಗತ್ಯ ಆಹಾರ ಸರಬರಾಜು ಮಾಡಿದರೆ, ಬೇರೆ ರಾಜ್ಯಗಳಿಂದಲೂ ರಾಜ್ಯಕ್ಕೆ ಕೂಲಿಗಾಗಿ ಬಂದಿರುವ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಲು ರಾಜ್ಯ ಸರ್ಕಾರ ಸಿದ್ದವಿದೆ ಎಂದರು.

ಪಡಿತರ ಚೀಟಿ ವಿತರಣೆ ಹಾಗೂ ಜನಜಾಗೃತಿ ಮೂಡಿಸಿರುವುದಕ್ಕೆ ಆಹಾರ ಇಲಾಖೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರದಿಂದ ನಾಲ್ಕೂವರೆ ವರ್ಷದಲ್ಲಿ 33 ಲಕ್ಷ 70 ಸಾವಿರ ಹೊಸ ಬಿಪಿಎಲ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ.. ರಾಜ್ಯದಲ್ಲಿ ಒಂದೂವರೆ ಕೋಟಿ ಕುಟುಂಬಗಳು  ಅನ್ನಭಾಗ್ಯ ಯೋಜನೆಯ ಫ‌ಲ ಪಡೆಯುತ್ತಿವೆ. ಎಲ್ಲದಕ್ಕೂ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಬೋಗಸ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದ್ದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಿದೆ ಎಂದರು.

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ದೇಶಕ್ಕೆ ಮಾದರಿಯಾಗಿದೆ. ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ಈ ವ್ಯವಸ್ಥೆ ಇಲ್ಲ ಎಂದರು. ರಾಜ್ಯದ ಅನೇಕ ಅನಾಥಾಶ್ರಮಗಳಲ್ಲಿರುವ ನಿರ್ಗತಿಕರು ಹಾಗೂ ವೃದ್ಧರಿಗೆ ದಾಸೋಹ ಯೋಜನೆ ಜಾರಿಗೊಳಿಸಲಾಗಿದ್ದು, 28 ಸಾವಿರ ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದರು.

ಈಶ್ವರಪ್ಪಗೆ ತಿರುಗೇಟು: ರಾಜ್ಯ ಸರ್ಕಾರ ಪಾಪರ್‌ ಆಗಿದೆ ಎಂದು ಹೇಳಿರುವ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರಿಗೆ ತಿರುಗೇಟು ನೀಡಿರುವ ಖಾದರ್‌,  ಅವರು ಅಧಿಕಾರ ಬಿಟ್ಟು ಹೋಗುವಾಗ ಖಜಾನೆಯಲ್ಲಿ ನಯಾ ಪೈಸೆ ಉಳಿಸಿರಲಿಲ್ಲ. ಹಣ ಇಡದೇ ರೈತರ ಸಾಲ ಮನ್ನಾ ಮಾಡಿ ಹೋಗಿದ್ದರು. ಅದನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತೀರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಅತ್ಯಂತ ಸಧೃಢ ಆರ್ಥಿಕ ಸ್ಥಿತಿ ಕಾಯ್ದುಕೊಂಡು ಬಂದಿದ್ದಾರೆ. ಬಿಜೆಪಿಯವರನ್ನು ಕೇಳಿ ಬಜೆಟ್‌ ಮಂಡನೆ ಮಾಡಬೇಕಿಲ್ಲ ಎಂದರು.

Advertisement

ಮಹದಾಯಿ ವಿಷಯದಲ್ಲಿ ಗೋವಾ ಮುಖ್ಯಮಂತ್ರಿ ನಮ್ಮ ಮುಖ್ಯಮಂತ್ರಿಗೆ ಪತ್ರ ಬರೆಯುವ ಬದಲು ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮನೆಯಲ್ಲಿ ಸಭೆ ನಡೆಸುತ್ತಾರೆ. ಇದರಿಂದ ಏನು ಪ್ರಯೋಜನ ? ಮಹದಾಯಿ ವಿಷಯದಲ್ಲಿ ಬಿಜೆಪಿಯವರು ಆಡಿದ ಆಟ ಜನರಿಗೆ ಗೊತ್ತಾಗಿದೆ.ಅವರು ಎಷ್ಟೇ ಟೀಕೆ ಮಾಡಿದರೂ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದರು. ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಅವರಿಗೆ ಬಿಜೆಪಿಯವರೇ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಖಾದರ್‌ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next