Advertisement

ಸರ್ಕಾರಿ ಪಿಯು ಕಾಲೇಜು ಪ್ರವೇಶಕ್ಕೆ ದುಬಾರಿ ಶುಲ್ಕ ವಸೂಲಿ ಸರಿನಾ?

03:57 PM Sep 17, 2021 | Team Udayavani |

ನಂಜನಗೂಡು: ಹೇಳಿ ಕೇಳಿ ಸರ್ಕಾರಿ ಕಾಲೇಜು. ಇಲ್ಲಿ ಓದುವವರ ಪೈಕಿ ಬಹುತೇಕ ಮಂದಿ ಬಡವರು. ಖಾಸಗಿ ಕಾಲೇಜುಗಳಲ್ಲಿ ಡೊನೇಷನ್‌
ಹಾವಳಿಗೆ ಬೇಸತ್ತು ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾರೆ. ಆದರೆ, ಸರ್ಕಾರಿ ಕಾಲೇಜಿನಲ್ಲೂ ವಿದ್ಯಾರ್ಥಿಗಳಿಂದ ಸಹಸ್ರಾರು
ರೂ. ವಸೂಲಿ ಮಾಡಲಾಗುತ್ತಿದೆ.

Advertisement

ನಂಜನಗೂಡು ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜನಲ್ಲಿ ಪ್ರತಿ ವಿದ್ಯಾರ್ಥಿನಿಯರಿಂದ ತಲಾ 1,900 ರೂ. ಶುಲ್ಕ
ಪಡೆಯಲಾಗುತ್ತಿದೆ. ಸಮವಸ್ತ್ರಕ್ಕಾಗಿ 1,100 ಹಾಗೂ ಇತರೆ ಖರ್ಚು ಎಂದು 800 ರೂ. ಸೇರಿದಂತೆ ಒಟ್ಟು 1.900 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಪ್ರಥಮ ಪಿಯು ಪ್ರವೇಶಕ್ಕೆ ತಲಾ 1,100 ರೂ.ಗಳನ್ನು ಕಡ್ಡಾಯವಾಗಿ ತರಲೇ ಬೇಕೆಂದು ಕಾಲೇಜಿನ ಪರವಾಗಿ ವಿದ್ಯಾರ್ಥಿನಿ ಯರಿಗೆ ಮೊಬೈಲ್‌ ಮೂಲಕ ಸೂಚನೆ ನೀಡಲಾಗಿದೆ.

ಸರ್ಕಾರವೇ ಮಹಿಳಾ ವಿದ್ಯಾರ್ಥಿಗಳ ಶುಲ್ಕದಲ್ಲಿ ರಿಯಾಯಿತಿ ತೋರಿರುವಾಗ ಕಾಲೇಜಿನ ಆಡಳಿತ ಮಂಡಳಿಯರು ವಿದ್ಯಾರ್ಥಿನಿಯರಿಂದ
ಈ ರೀತಿ ಹಣ ವಸೂಲಿ ಮಾಡಿದರೆ ಹೇಗೆ ಎಂಬುದು ಪೋಷಕರ ಪ್ರಶ್ನೆಯಾಗಿದೆ. ಕೋವಿಡ್‌ ಸಂಕಷ್ಟದಲ್ಲಿ ಇರುವಾಗ ಈ ರೀತಿ ದುಬಾರಿ ಹಣ
ನಿಗದಿ ಮಾಡಿದರೆ ಇದನ್ನು ಭರಿಸುವುದು ಸಾಧ್ಯವೇ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

ಹಣ ನಿಗದಿ ನಿಜ: ಈ ಕುರಿತು ಪ್ರತಿಕ್ರಿಯಿಸಿರುವ ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್‌, “ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನ
ದಂತೆ ಹಣ ಪಡೆಯಲಾಗುತ್ತಿದೆ. ಸಮವಸ್ತ್ರಕ್ಕೆ 1,100 ರೂ., ಅತಿಥಿ ಉಪನ್ಯಾಸಕರ ಗೌರವ ಧನಕ್ಕಾಗಿ 800 ರೂ. ಸೇರಿ ಪ್ರತಿ ವಿದ್ಯಾರ್ಥಿ  ನಿಯರಿಗೆ 1,900 ರೂ.ನಿಗದಿಪಡಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಅತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡುವುದು ಸರ್ಕಾರವಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಾಚಾರ್ಯರು, “ಸರ್ಕಾರ ಇನ್ನೂ ಹಣ ಕೊಟ್ಟಿಲ್ಲ. ಅದಕ್ಕಾಗಿ ಈ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೇಡ ಎಂದಾದರೆ ವಸೂಲಿಯಾದ ಹಣವನ್ನು ವಾಪಸ್‌ ನೀಡಲೂ ಸಿದ್ಧ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

Advertisement

ಈ ವಿಚಾರವಾಗಿ ಉದಯವಾಣಿಯೊಂದಿಗೆ ಮಾತನಾಡಿರುವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಕಾಶ್‌ ಚಂದ್‌ ಜೈನ್‌, “ಕಾಲೇಜಿನಲ್ಲಿ
ಸಮವಸ್ತ್ರಕ್ಕೆ ಹಣ ಪಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಆದರೆ, ಅತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡಲು ವಿದ್ಯಾರ್ಥಿಗಳಿಂದ ತಲಾ 800 ರೂ. ಪಡೆಯುವಂತೆ ಸಭೆಯಲ್ಲೇ ನಿರ್ಧರಿಸಲಾಗಿದೆ. ಈ ವಿಷಯವನ್ನೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಹರ್ಷವರ್ಧನ್‌ ಗಮನಕ್ಕೂ ತರಲಾಗಿದೆ’ ಎಂದು ಹೇಳಿದ್ದಾರೆ.

ಕಾಲೇಜಿನಲ್ಲಿ ಉಪನ್ಯಾಸಕರ ಗೌರವ ಧನ, ಮೂಲಭೂತ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿಗಳಿಂದ ಹಣ ಪಡೆಯುವ ಅಧಿಕಾರ ಸಮಿತಿಗೆ ಇದೆ. ಆದರೆ, ಪ್ರತಿ ಮಕ್ಕಳಿಂದ ಇಷ್ಟು ದುಬಾರಿ ಹಣ ವಸೂಲಿ ಮಾಡುವುದು ಸರಿಯಲ್ಲ. ಕೋವಿಡ್‌ ಸಂಕಷ್ಟದಲ್ಲಿ ಈ ರೀತಿ ಬರೆ ಎಳೆಯುವುದು ಖಂಡನೀಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಬಡ ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಕೊಂಡು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಮುತುವರ್ಜಿ ವಹಿಸಿ ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿಗೆ ಅತ್ಯಾಧುನಿಕ ಕಟ್ಟಡ ನಿರ್ಮಿಸಿದ್ದಾರೆ. ಆದರೆ, ಇಲ್ಲಿನ ಆಡಳಿತ ವರ್ಗ ಸಂಸದರ ಸದಾಶಯವನ್ನು ಬದಿಗಿಟ್ಟು ನಿಯಮ ಬಾಹಿರವಾಗಿ ಹಣ ವಸೂಲಿಗೆ ಇಳಿದಿರುವುದು ನಾಚಿಕೆಗೇಡು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುಬಾರಿ ಶುಲ್ಕದಿಂದ 10 ಲಕ್ಷ ರೂ. ಸಂಗ್ರಹ
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು-770 ಹಾಗೂ ದ್ವಿತೀಯ ಪಿಯು-530 ಸೇರಿ ಒಟ್ಟು 1,300 ವಿದ್ಯಾರ್ಥಿನಿ ಯರು ಪ್ರವೇಶ ಪಡೆದಿದ್ದಾರೆ. ಪ್ರತಿ ವಿದ್ಯಾರ್ಥಿಗೆ 1,900 ರೂ.ಶುಲ್ಕ ನಿಗದಿಪಡಿಸಿದರೆ 10 ಲಕ್ಷ ರೂ.ಗೂ ಅಧಿಕ ಹಣ ಸಂಗ್ರಹವಾಗುತ್ತದೆ. ಸಮವಸ್ತ್ರಕ್ಕಾಗಿ 1,100 ಹಾಗೂ ಅತಿಥಿ ಉಪನ್ಯಾಸಕರ ಗೌರವ ಧನಕ್ಕಾಗಿ 800 ರೂ.ಶುಲ್ಕ ನಿಗದಿಪಡಿಸಲಾಗಿದೆ.

ಶಾಸಕರೇ, ದುಬಾರಿ ಶುಲ್ಕ ಇಳಿಸಿ
ಖಾಸಗಿ ಕಾಲೇಜಿನಲ್ಲಿ ದುಬಾರಿ ಡೊನೇಷನ್‌ಗೆ ಹೆದರಿ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆಯುತ್ತಾರೆ.
ಮೊದಲೇ ಜನರು ಕೋವಿಡ್‌ ಸಂಕಷ್ಟ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಿಲುಕಿ ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಂದ ಸಹಸ್ರಾರು ರೂ. ವಸೂಲಿ ಮಾಡುವುದು ಸಮಂಜಸವಲ್ಲ. ಕಾಲೇಜು ಸಮಿತಿ ಅಧ್ಯಕ್ಷರಾಗಿರುವ ಶಾಸಕ
ಹರ್ಷವರ್ಧನ್‌ ಹಾಗೂ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರು ಈ ಶುಲ್ಕ ವಸೂಲಿ ಬಗ್ಗೆ ಪುನರ್‌ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಇಷ್ಟು ದುಬಾರಿ ಹಣ ಪಡೆಯಬಾರದು. ಈಗಾಲೇ ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಹಣವನ್ನು ವಾಪಸ್‌ ನೀಡಲು ಕ್ರಮ ಕೈಗೊಳ್ಳಬೇಕು. ಜನರಿಗೆ ಹೊರೆ ಆಗುವುದನ್ನು ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

-ಶ್ರೀಧರ್‌ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next