ಸಿಂಧನೂರು/ಗೊರೇಬಾಳ: ರಾಜ್ಯದಲ್ಲಿ ಭೀಕರ ಬರ ಎದುರಾಗಿದ್ದು, ಕಳೆದ 18 ವರ್ಷಗಳಲ್ಲಿ 11 ವರ್ಷ ಮಳೆಯಾಧಾರಿತ ಪ್ರದೇಶ ಬರಕ್ಕೆ ತುತ್ತಾಗಿದೆ. ಜನರು ಕಷ್ಟಕರ ಜೀವನ ನಡೆಸುತ್ತಿದ್ದು, ಬರ ನಿರ್ವಹಣೆಗೆ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಬರ ಅಧ್ಯಯನ ಸಮಿತಿ ಅಧ್ಯಕ್ಷ, ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.
ಸಿಂಧನೂರು ತಾಲೂಕಿನ ಕಲ್ಮಂಗಿ, ಮಾಟೂರು ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಬರ ಅಧ್ಯಯನ ನಡೆಸಿದ ಅವರು, ಬಳಿಕ ಸಿಂಧನೂರಿನ ಸರ್ಕ್ನೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬರ ಅಧ್ಯಯನಕ್ಕಾಗಿ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ. ತಮ್ಮ ನೇತೃತ್ವದ ತಂಡದಲ್ಲಿ ವೆಂಕಟರಾವ್ ನಾಡಗೌಡ, ರಾಜಶೇಖರ ಪಾಟೀಲ, ತುಕಾರಾಂ, ಪಿ.ಟಿ.ಪರಮೇಶ್ವರ ಇದ್ದಾರೆ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಗುರುವಾರ ಬರ ಅಧ್ಯಯನ ನಡೆಸಲಾಗಿದೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ಫೆ.4 ಇಲ್ಲವೇ 5ರಂದು ಮುಖ್ಯಮಂತ್ರಿ ಹಾಗೂ ದೇಶಪಾಂಡೆಗೆ ವರದಿ ಸಲ್ಲಿಸಲಾಗುವುದು ಎಂದರು.
ಕುಡಿಯುವ ನೀರು ಹಾಗೂ ದನಕರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 150 ಮಾನವ ದಿನಗಳಿದ್ದು, ಅದನ್ನು ಹೆಚ್ಚಿಗೆ ಮಾಡಲು ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು. ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ 850 ಕೋಟಿ ರೂ. ನೀಡಬೇಕಿದೆ. ಕೇಂದ್ರ ಸರ್ಕಾರದ ಅನುದಾನದ ಕೊರತೆ ನಡುವೆಯೂ ಕೂಲಿಕಾರರಿಗೆ ಹಣ ಕೊರತೆಯಾಗದಂತೆ ರಾಜ್ಯ ಸರ್ಕಾರದಿಂದಲೇ ಭರಿಸಲು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿ ನಾಯಕರಿಗೆ ನಿಜವಾಗಿಯೂ ಕಳಕಳಿ ಇದ್ದರೆ ಕೂಡಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನರೇಗಾ ಯೋಜನೆಯಡಿ ಬಾಕಿ ಇರುವ ಹಣ ಬಿಡುಗಡೆಗೆ ಪ್ರಯತ್ನಿಸಲಿ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಇರುವ ಕಾನೂನು ತೊಡಕುಗಳ ನಿವಾರಣೆಗೆ ಕಾನೂನು ಇಲಾಖೆ ಕಾರ್ಯದರ್ಶಿಯೊಂದಿಗೆ ಚರ್ಚಿಸಲಾಗುತ್ತಿದೆ. ಕೆಲವೊಂದು ವಿಶ್ವವಿದ್ಯಾಲಯಗಳ ಅನುಮೋದನೆಗೆ ರಾಜ್ಯಪಾಲರ ಬಳಿ ಹೋಗಿದ್ದು, ಅವರು ಅನುಮೋದನೆ ನೀಡುತ್ತಿಲ್ಲ. ಹೀಗಾಗಿ ರಾಷ್ಟ್ರಪತಿಗಳಿಗೆ ಪ್ರಸ್ತಾವನೆ ಕಳುಹಿಸಬೇಕೋ ಅಥವಾ ಇನ್ನೊಮ್ಮೆ ಸದನದಲ್ಲಿ ಮಂಡಿಸಬೇಕೋ ಎನ್ನುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಡಿವಾಣ: ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ಮರಳು ಮಾಫಿಯಾ ತಡೆಯಲು ಉಪ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸರಳೀಕರಣ ಹಾಗೂ ಸುಲಭವಾಗಿ ಮರಳು ಸಿಗುವಂತಾಗಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕರಾದ ಅಮರೇಗೌಡ ಬಯ್ನಾಪುರ, ಪ್ರತಾಪಗೌಡ ಪಾಟೀಲ, ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ, ಜಿಲ್ಲಾಧಿಕಾರಿ ಬಿ.ಶರತ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್ ಹಾಗೂ ಅಧಿಕಾರಿಗಳು ಹಾಜರಿದ್ದರು.