Advertisement

ಕೊಳಗೇರಿ ನಿರ್ಮಾಣಕ್ಕೆ ಸರ್ಕಾರದ ನೀತಿ ಕಾರಣ

03:27 PM Jul 05, 2017 | Team Udayavani |

ದಾವಣಗೆರೆ: ಕೊಳಗೇರಿಗಳ ನಿರ್ಮಾಣಕ್ಕೆ ಬಡವರು ಕಾರಣರಲ್ಲ. ಆಳುವ ಸರ್ಕಾರಗಳ ನೀತಿಗಳೇ ಪ್ರಮುಖ
ಕಾರಣ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ದೂರಿದ್ದಾರೆ.

Advertisement

ಮಂಗಳವಾರ ರೋಟರಿ ಬಾಲಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾ ಫುಲೇ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ನಡೆದ ಸ್ಲಂ ಜನಾಂದೋಲನ ಕರ್ನಾಟಕದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ 
ಅವರು, ಸಮಾಜದ ವ್ಯವಸ್ಥೆ ತನ್ನ  ತೆವಲುಗಳನ್ನು ತೀರಿಸಲು ಸ್ಲಂಗಳನ್ನು ಜೀವಂತವಾಗಿ ಇಟ್ಟಿದೆ ಎಂದು ತೀವ್ರ
ಬೇಸರ ವ್ಯಕ್ತಪಡಿಸಿದರು. ಈಚೆಗೆ ಪ್ರತಿಯೊಂದಕ್ಕೂ ಆಧಾರ್‌ ಕಡ್ಡಾಯ ಮತ್ತು ಜಿ.ಎಸ್‌.ಟಿ ಜಾರಿಯಿಂದಾಗಿ ಬಡವರ ಸೌಲಭ್ಯ ಕಸಿಯುವ ಹುನ್ನಾರ ನಡೆಯುತ್ತಿದೆ. ಆಧಾರ್‌ ಕಾರ್ಡ್‌ ಇಲ್ಲ ಎಂದರೆ ದೇಶದ ನಾಗರಿಕರೇ ಅಲ್ಲ ಎಂದೇಳುವ ಸ್ಥಿತಿ ಬಂದೊದಗುತ್ತಿದೆ. ಇಡೀ ದೇಶದ ಸಂಪತ್ತು ಕೆಲವೇ ಕೆಲ ವ್ಯಕ್ತಿಗಳ ಕೈಯಲ್ಲಿದೆ. ಕಾರ್ಪೋರೇಟ್‌ ಕಾನೂನುಗಳ
ಮೂಲಕ ಜನಸಾಮಾನ್ಯರ ಅಭಿವೃದ್ಧಿ ನಿಯಂತ್ರಿಸಲಾಗುತ್ತಿದೆ. ಸರ್ಕಾರಗಳು ಪ್ರತಿಯೊಬ್ಬ ಪ್ರಜೆಗೆ ಭೂಮಿ,
ಗೌರವಯುತವಾದ ಬದುಕಿಗೆ ಮನೆ ನೀಡಬೇಕು. ಸಂಪತ್ತನ್ನು ಸಮಾನ ರೀತಿಯಲ್ಲಿ ಹಂಚಬೇಕು ಎಂದು 
ಒತ್ತಾಯಿಸಿದರು.

ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್‌. ಎಚ್‌. ಅರುಣ್‌ ಕುಮಾರ್‌ ಮಾತನಾಡಿ, ಕರ್ನಾಟಕದಲ್ಲಿ
ಅದರಲ್ಲೂ 80ರ ದಶಕದಲ್ಲಿ ತೀವ್ರವಾದ ದಲಿತ, ರೈತ, ಎಡಪಂಥೀಯ ಚಳವಳಿಗಳು ರೂಪುಗೊಂಡು, ಒಡೆದು ಹೋಗಿದ್ದರೂ ಶೋಷಿತ, ದಮನಿತ ಜನರ ಸ್ವಾಭಿಮಾನ ಎಚ್ಚರಗೊಳಿಸಿದವು. ಆದರೆ, ಈಗ ಭಾರತದಲ್ಲಿ ನಗರಗಳಲ್ಲಿನ ವಂಚಿತ ಸಮುದಾಯಗಳ ಘನತೆಯ ಬದುಕಿಗಾಗಿ ಒಂದು ಚಳವಳಿ ನಡೆಯದಿರುವುದು ವಿಷಾದನೀಯ ಎಂದರು.

ರಾಜ್ಯದಲ್ಲಿ 5,250ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಲ್ಲಿ 1 ಕೋಟಿಗೂ ಹೆಚ್ಚು ಜನರು ಇದ್ದಾರೆ. ಸ್ಲಂ ಮುಕ್ತ ನಗರದ ಬದಲಾಗಿ ಬಡತನ, ಅಸ್ಪೃಶ್ಯತೆ ಮತ್ತು ತಾರತಮ್ಯ ಮುಕ್ತ ನಗರಕ್ಕಾಗಿ ಸಮುದಾಯ ಜಾಗೃತವಾಗಬೇಕು ಎಂದು ಮನವಿ ಮಾಡಿದರು. ಯುವ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌, ಸ್ಲಂ ಜನಾಂದೋಲನ ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ ಹಾವೇರಿ, ಶಬ್ಬೀರ್‌ಸಾಬ್‌, ಮಂಜುನಾಥ್‌, ಸಾವಿತ್ರಮ್ಮ, ಪ್ರಭುಲಿಂಗಪ್ಪ, ಮರಿಯಪ್ಪ,
ಹನುಮಂತಪ್ಪ, ಶಿಲ್ಪಾ, ಸ್ಲಂ ಬೋರ್ಡ್‌ ಇಂಜಿನಿಯರ್‌ ಆನಂದಪ್ಪ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next