Advertisement
ರೈತರು ತಮ್ಮ ಭೂಮಿಯಲ್ಲಿ ಶೇಖರಣೆಯಾಗಿರುವ ಮರಳನ್ನು ಸ್ವಂತ ಬಳಕೆಗೆ ಉಪಯೋಗಿಸಿ ಉಳಿಕೆ ಮರಳಿಗೆ ರಾಯಧನ ಪಾವತಿಸಿ ನೆರೆಹೊರೆ, ಇತರರಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಿಂದ ರೈತರ ಭೂಮಿ ಹಸನಾಗಿಸುವ ಜತೆಗೆ ಮರಳಿನ ಸದ್ಬಳಕೆಗೆ ಒತ್ತು ನೀಡುವುದು. ಹಾಗೆಯೇ ತಾತ್ಕಾಲಿಕವಾಗಿ ಮರಳಿನ ಕೊರತೆ ನಿವಾರಿಸಿ, ಮರಳು ಮಾಫಿಯಾ ತಡೆಯುವುದು ಸರ್ಕಾರದ ಚಿಂತನೆ.
Related Articles
Advertisement
ರಾಯಧನ ಪಡೆದು ಮಾರಾಟಕ್ಕೆ ಅವಕಾಶ: ಸ್ವಂತ ಬಳಕೆ ನಂತರ ಉಳಿಕೆಯಾಗುವ ಮರಳನ್ನು ನೆರೆಹೊರೆಯವರಿಗೆ ಅಥವಾ ಇತರರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಪಟ್ಟಾ ಭೂಮಿಯಲ್ಲಿ ಭಾರೀ ಪ್ರಮಾಣದಲ್ಲಿ ಶೇಖರಣೆಯಾಗಿರುವ ಮರಳನ್ನು ತೆರವುಗೊಳಿಸ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಸ್ವಂತ ಬಳಕೆಗೆ ಹೊರತುಪಡಿಸಿ ಉಳಿಕೆ ಮರಳಿನ ಪ್ರಮಾಣಕ್ಕೆ ಅನುಗುಣವಾಗಿ ರಾಯಧನ ಸಂಗ್ರಹಿಸಿ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಇದರಿಂದ ಸರ್ಕಾರದ ಖಜಾನೆಗೂ ಆದಾಯ ಬರಲಿದ್ದು, ಜತೆಗೆ ಮರಳಿನ ಅಭಾವವನ್ನು ತಾತ್ಕಾಲಿಕವಾಗಿ ತಗ್ಗಿಸಲು ಸಹಕಾರಿಯಾಗಲಿದೆ ಎಂಬುದು ಇಲಾಖೆ ಲೆಕ್ಕಾಚಾರ. ಇದರಿಂದ ಆಯಾ ಭೂಮಾಲೀಕರೂ ಒಂದಿಷ್ಟು ಆದಾಯ ಗಳಿಸಲು ಸಾಧ್ಯತೆಯಿದೆ.
ಸ್ಥಳೀಯ ಬಳಕೆಗೆ ಒತ್ತು: ಭೂಮಾಲೀಕರು ತಮ್ಮ ಜಮೀನಿನಲ್ಲಿ ಶೇಖರಣೆಯಾಗಿರುವ ಮರಳು ಮಾರಾಟಕ್ಕೆ ಅವಕಾಶ ನೀಡಿದರೂ ಅದು ಸ್ಥಳೀಯವಾಗಿಯೇ ಬಳಕೆಯಾಗಬೇಕು ಎಂಬುದು ಇಲಾಖೆ ಆಶಯ. ಹೆಚ್ಚುವರಿ ಮರಳನ್ನು ಮೊದಲಿಗೆ ಗ್ರಾಮ ಪಂಚಾಯ್ತಿ ಮಿತಿಗೊಳಗೆ, ಬಳಿಕ ತಾಲೂಕು ಪಂಚಾಯ್ತಿ ಆನಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾರಾಟಕ್ಕೆ ಅವಕಾಶ ನೀಡುವುದು. ಜಿಲ್ಲಾ ವ್ಯಾಪ್ತಿಯಿಂದ ಮರಳು ಹೊರ ಹೋಗದೆ ಸ್ಥಳೀಯವಾಗಿಯೇ ಬಳಕೆಯಾಗುವಂತಾಗಬೇಕು. ಇಲ್ಲದಿದ್ದರೆ ಜಿಲ್ಲೆ ವ್ಯಾಪ್ತಿಯಿಂದ ಹೊರ ಹೋಗುವುದಾದರೆ ಮತ್ತೆ ಆ ಮರಳು ಬೆಂಗಳೂರು ಸೇರಿ ಇತರೆ ಪ್ರಮುಖ ನಗರಗಳಿಗೆ ಸಾಗಣೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೆರೆ ಮರಳು ಬಳಕೆಯನ್ನು ಜಿಲ್ಲಾ ವ್ಯಾಪ್ತಿ ಮಿತಿಯೊಳಗೆ ಸೀಮಿತಗೊಳಿಸುವ ಬಗ್ಗೆ ಚಿಂತಿಸಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ಪಟ್ಟಾ ಭೂಮಿಯಲ್ಲಿದೆ ಮರಳು: ನೆರೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಇನ್ನೊಂದೆಡೆ ತುಂಗಭದ್ರಾ, ಕೃಷ್ಣಾ ನದಿ ಪಾತ್ರದ ಪ್ರದೇಶ ಸೇರಿ ಶಿವಮೊಗ್ಗ, ಸಕಲೇಶಪುರ, ಮಡಿಕೇರಿ ಇತರೆಡೆ ಪಟ್ಟಾ ಭೂಮಿಯಲ್ಲಿ ಸಾಕಷ್ಟು ಮರಳು ಹರಡಿದೆ. ಹಾಗಾಗಿ ಆ ಮರಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತಾವ ರೂಪಿಸಲಾಗಿದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ನೆರೆ ಕಾಣಿಸಿಕೊಂಡ ಪ್ರದೇಶಗಳ ಹಲವೆಡೆ ಪಟ್ಟಾ ಜಮೀನಿನಲ್ಲಿ ಮರಳು ಹರಡಿದ್ದು, ಜಮೀನುದಾರರು ತಮ್ಮ ಸ್ವಂತ ಬಳಕೆಗೆ ಬೇಕಾಗುವಷ್ಟು ಮರಳು ಬಳಸಲು ಅವಕಾಶ ನೀಡು ವುದು, ಉಳಿಕೆ ಮರಳಿಗೆ ರಾಯಧನ ಸಂಗ್ರಹಿಸಿ ಮಾರಾಟಕ್ಕೆ ಅವಕಾಶ ನೀಡಲು ಚಿಂತಿಸಲಾಗಿದೆ. ಇದರಿಂದ ಮರಳಿನ ಸದ್ಬಳಕೆ ಜತೆಗೆ ಮಾಫಿಯಾ ತಡೆಗೂ ಸಹಕಾರಿಯಾಗುವ ನಿರೀಕ್ಷೆ ಇದೆ. ಪ್ರಸ್ತಾವ ಸಲ್ಲಿಕೆಯಾಗುತ್ತಿದ್ದಂತೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.-ಸಿ.ಸಿ.ಪಾಟೀಲ್, ಗಣಿ ಸಚಿವ * ಎಂ. ಕೀರ್ತಿಪ್ರಸಾದ್