ಕೋಲಾರ: ಅಪೌಷ್ಟಿಕತೆ, ರಕ್ತಹೀನತೆ, ಅವಧಿ ಪೂರ್ವಪ್ರಸವ ಮತ್ತಿತರ ಕಾರಣಗಳಿಂದ ಸಂಭವಿಸುವ ಶಿಶು ಮರಣವನ್ನು ತಡೆಯಲು ಸರ್ಕಾರದ ಯೋಜನೆಗಳು ಅರ್ಹರಿಗೆ ಸಮಪರ್ಕವಾಗಿ ತಲುಪುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್.ಮಹಾಲಕ್ಷ್ಮೀ ನೇರಳೆ ಹೇಳಿದರು. ತಾಲೂಕಿನ ಮದನಹಳ್ಳಿ ಕ್ರಾಸ್‌ನಲ್ಲಿನ ಮೋರಾರ್ಜಿ ದೇಸಾಯಿ ಸನಿವಾಸ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹದ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಪದ್ಧತಿಯಿಂದ ಅನೇಕ ಕಾಯಿಲೆಗಳು ಹುಡುಕಿಕೊಂಡು ಬರುತ್ತಿವೆ. ಜನಿಸುವ ಮಕ್ಕಳಲ್ಲಿ ಅಂಗ ನ್ಯೂನತೆ, ಅಪೌಷ್ಟಿಕತೆ ತಡೆಯಲು ತಾಯಂದಿರಿಗೆ ಆರೋಗ್ಯ ರಕ್ಷಣೆಯ ಮಹತ್ವ ತಿಳಿಸಿಕೊಡಬೇಕು. ಸರ್ಕಾರದ ಸೌಲಭ್ಯಗಳನ್ನು ಕಾಲಕ್ಕೆ ಸರಿಯಾಗಿ ತಲುಪಿಸಬೇಕೆಂದು ಹೇಳಿದರು.
ಯೋಜನೆಗಳ ಸಮರ್ಪಕ ಜಾರಿ ಅಗತ್ಯ: ಬದುಕುವ ಹಕ್ಕು ಎಲ್ಲರಿಗೂ ಇದೆ. ಈ ಅಮೂಲ್ಯ ಹಕ್ಕಿಗೆ ಚ್ಯುತಿ ಬಾರದಂತೆ ಕಾಪಾಡುವ ಹೊಣೆಯೂ ಸರ್ಕಾರ ಮತ್ತು ಸಮಾಜದ ಮೇಲಿದೆ. ಸರ್ಕಾರ ಯೋಜನೆ ಜಾರಿಗೆ ತಂದಿದ್ದೇವೆ ಎಂದರೆ ಪ್ರಯೋಜನವಾಗದು. ಆ ಯೋಜನೆ ಸಮುದಾಯಕ್ಕೆ ತಲುಪಿದೆಯೇ, ಎಲ್ಲಿ ಲೋಪಗಳಿವೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕಾದ ಅಗತ್ಯವೂ ಇದೆ ಎಂದು ಅಭಿಪ್ರಾಯಪಟ್ಟರು. ಆರೋಗ್ಯ ಇಲಾಖೆ ಶಿಕ್ಷಣ ಅಧಿಕಾರಿ ಪ್ರಸನ್ನ ಮಾತನಾಡಿ, ಗರ್ಭಿಣಿಯರಲ್ಲಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ತಡೆಯುವ ಕುರಿತು ಮಾಹಿತಿ ನೀಡಿದರು. ಬಿಇಒ ರಘುನಾಥರೆಡ್ಡಿ, ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಅಗತ್ಯವಿದೆ. ಮುಂದಿನ ಸಮಾಜದ ಆಸ್ತಿಯಾಗಿರುವ ಮಕ್ಕಳಿಗೆ ಬಿಸಿಯೂಟದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಸ್ವತ್ಛತೆ, ಶುಭ್ರತೆಯ ಪಾಠ ಕಲಿಸಿ: ವಿಷಯ ಪರಿವೀಕ್ಷಕ ಸಿ.ಆರ್.ಅಶೋಕ್, ಮಕ್ಕಳಿಗೆ ಶಿಕ್ಷಣದ
ಜತೆಗೆ ಸ್ವತ್ಛತೆ, ಶುಭ್ರತೆಯ ಪಾಠ ಕಲಿಸಿದರೆ ಅದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಉತ್ತಮ ಆಹಾರ ನೀಡಿದರೆ ಸಾಲದು, ಅದರ ಶುಭ್ರತೆಯೂ ಅಷ್ಟೇ ಮುಖ್ಯ ಎಂದರು.ರೋಟರಿ ಸಂಸ್ಥೆ ಅಧ್ಯಕ್ಷ ದೇವರಾಜ್, ರೋಟರಿ ಸಂಸ್ಥೆಯಿಂದ ಸರ್ಕಾರಿ ಶಾಲೆಗಳಿಗೆ ಶುದ್ಧ ನೀರಿನ ಘಟಕ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸಮುದಾಯದ ಸೇವೆ ನಮ್ಮ ಗುರಿಯಾಗಿದ್ದು, ಶಾಲೆ, ಶಿಕ್ಷಣಕ್ಕೆ ನೆರವಾಗಲು ಒತ್ತು ನೀಡಲಾಗುತ್ತಿದೆ ಎಂದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲೂ ಮಕ್ಕಳ ಆರೋಗ್ಯಕ್ಕೆ ಒತ್ತು ನೀಡಲಾಗಿದೆ. ಗುಣಮಟ್ಟದ ಆಹಾರ ನೀಡಿಕೆಗೆ ಗಮನ ಹರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೈನಂದಿನ ಬದುಕಿನಲ್ಲಿ ಅನುಸರಿಸಲೇಬೇಕಾದ ಜೀವನಾಂಶಕ ಸರಳ
ಕಾನೂನುಗಳ ಕುರಿತು ವಕೀಲರ ಸಂಘದ ಅಧ್ಯಕ್ಷ ಸಿ. ರಾಮಕೃಷ್ಣ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಮೊರಾರ್ಜಿ ದೇಸಾಯಿ ಸನಿವಾಸ ವಸತಿ ಶಾಲೆಯ ಪ್ರಿನ್ಸಿಪಾಲ್ ಜಿ.ಆರ್.ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸನ್ ಮತ್ತಿತರರು ಹಾಜರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿ, ಶಿಕ್ಷಕ ಶ್ರೀಕಾಂತ್ ನಿರೂಪಿಸಿ, ಶಿಕ್ಷಕಿ ಚೇತನಾ ವಂದಿಸಿದರು.