Advertisement

ಸರ್ಕಾರಿ ಯೋಜನೆಗಳು ರೈತರಿಗೆ ತಲುಪಲಿ: ದಿನಕರ

12:47 PM Jun 23, 2019 | Suhan S |

ಕುಮಟಾ: ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಕೇವಲ ಕಾಟಾಚಾರಕ್ಕಾಗದೆ ರೈತರ ಮನೆಗಳಿಗೆ ತಲುಪಬೇಕು. ಆಗ ಮಾತ್ರ ಸರ್ಕಾರ ಕೈಗೊಂಡ ಯೋಜನೆಗೆ ಪ್ರತಿಫಲ ದೊರಕುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಕೃಷಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಇಲಾಖೆಗಳ ಮುಖ್ಯಸ್ಥರು ರೈತಪರ ನಿಂತು ಕೆಲಸ ಮಾಡಬೇಕು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪ್ರಥಮ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲಾಯಿತು. ಈಗಿರುವ ಮೋದಿ ಸರಕಾರದಲ್ಲಿಯೂ ಫಸಲ್ ಭೀಮಾ, ಕೃಷಿ ಸಮ್ಮಾನ್‌ ಸೇರಿದಂತೆ ಅನೇಕ ರೈತಪರ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ಈ ಬಾರಿ ಮಳೆಯ ಕೊರತೆಯಿಂದಾದ ಪರಿಣಾಮಗಳನ್ನು ಮೂರೂರು ಹಾಗೂ ಹೆಬೈಲ್ ಕಡೆ ಒಣಗಿದ ತೋಟಗಳನ್ನು ಗಮನಿಸಿದರೆ ತಿಳಿಯುತ್ತದೆ. ಇಂತಹ ಸ್ಥಿತಿಯಲ್ಲಿ ಸರಕಾರದ ಆದೇಶಕ್ಕೆ ಕಾಯದೇ ಸ್ಥಳಕ್ಕೆ ಹೋಗಿ ಪರಿಶೀಲಿಸಿ ವರದಿ ಸಲ್ಲಿಸುವ ಕೆಲಸ ಇಲಾಖೆಯಿಂದಾಗಬೇಕು. ಇದರ ಬಗ್ಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯವರು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಕುಮಟಾದಿಂದ ಹೆಚ್ಚಿನ ಯಾವುದೇ ಬೇಡಿಕೆಗಳು ಬರುವುದಿಲ್ಲ ಎಂಬುದು ಜಿಲ್ಲಾ ಮಟ್ಟದ ಸಭೆಗಳಲ್ಲಿ ಕೇಳಲ್ಪಡುತ್ತದೆ ಎಂದರು.

ಅರ್ಹ ಫಲಾನುಭವಿಗಳಿಗೆ ಕೃಷಿ ಉಪಕರಣ ವಿತರಿಸಲಾಯಿತು. ನಂತರ ಕೃಷಿ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು.

ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ, ಉಪಾಧ್ಯಕ್ಷೆ ಗೀತಾ ಮುಕ್ರಿ, ಜಿ.ಪಂ ಸದಸ್ಯ ಗಜಾನನ ಪೈ, ತಾ.ಪಂ. ಸದಸ್ಯ ಜಗನ್ನಾಥ ನಾಯ್ಕ, ಸದಸ್ಯೆ ಅನುಸೂಯ ಅಂಬಿಗ ಸೇರಿದಂತೆ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next