ಬೆಂಗಳೂರು: ರಾಜ್ಯ ಸರ್ಕಾದ ಅನೇಕ ಯೋಜನೆಗಳ ಫಲವನ್ನು ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಕುಟುಂಬದವರೇ ಪಡೆಯುತ್ತಿದ್ದಾರೆ ಎಂದು ರಾಜ್ಯ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ್ ಹಾಲಪ್ಪ ತಿಳಿಸಿದ್ದಾರೆ.
ನಗರದ ಗ್ರೀನ್ ಪಾಥ್ ಹೊಟೇಲನಲ್ಲಿ ಮಂಗಳವಾರ ಕಾನ್ಫಿಡರೇಷನ್ ಆಫ್ ಉಮೇನ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಹಮ್ಮಿಕೊಂಡಿದ್ದ ಕೌಶಲ ಕರ್ನಾಟಕದ ಮಹಿಳಾ ಉದ್ಯಮಿಗಳ “ಜ್ಞಾನ ಮತ್ತು ಕೌಶಲತೆ ಅಪ್‌ಗೆಡ್’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, “ನಗರ ಮತ್ತು ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಆಗಬೇಕಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಪೂರ್ಣಪ್ರಮಾಣದಲ್ಲಿ ಮಹಿಳೆಯರಿಗೆ, ಬಡ ಮತ್ತು ಮಧ್ಯಮ ವರ್ಗದವರಿಗೆ ತಲುಪಿಸಬೇಕು,’ ಎಂದು ಒತ್ತಾಯಿಸಿದರು.
“ಕೌಶಲ್ಯ ಕರ್ನಾಟಕ ಯೋಜನೆಯಡಿ ತರಬೇತಿ ಪಡೆಯಲು ಈಗಾಗಲೇ 6 ಲಕ್ಷ ಯುವಜನತೆ ನೋಂದಾಣಿ ಮಾಡಿಕೊಂಡಿದ್ದಾರೆ. ರಾಜ್ಯದ ಐದು ಕಡೆಗಳಲ್ಲಿ ತಂತ್ರಜ್ಞಾನ ಆಧಾರಿತ ತರಬೇತಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜರ್ಮನ್ ಸಂಸ್ಥೆ ಬಂಡವಾಳ ಹೂಡಿಕೆ ಮಾಡುತ್ತಿದೆ,’ ಎಂದರು.
ಮೇಯರ್ ಜಿ. ಪದ್ಮವತಿ ಮಾತನಾಡಿ, “ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯದ ಬಗ್ಗೆ ಲಕ್ಷಾಂತರ ಮಹಿಳೆಯರಿಗೆ ತಿಳಿದೇ ಇಲ್ಲ. ಗಂಡ ರಾಜಕಾರಣಿಯಾಗಿದ್ದರೆ ಮೀಸಲಾತಿ ಆಧಾರದಲ್ಲಿ ಹೆಂಡತಿಗೆ ಸೀಟು ದೊರೆಯುತ್ತದೆ. ಹಾಗೆಯೇ ಅಣ್ಣ ಅಥವಾ ತಮ್ಮ ರಾಜಕೀಯ ಮುಖಂಡನಾಗಿದ್ದರೆ ಅವರ ತಂಗಿ ಅಥವಾ ಅಕ್ಕನಿಗೆ ಸೀಟು ಸಿಗುತ್ತದೆ.
ಸಾಮಾನ್ಯ ಮಹಿಳೆಗೂ ಮೀಸಲಾತಿ ಆಧಾರದಲ್ಲಿ ಸೀಟು ಸಿಗುವಂತೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಅನುದಾನ ಮೀಸಲಿಡಲಾಗಿದೆ. ಪ್ರತಿ ವಾರ್ಡ್‌ನ 50 ಮಹಿಳೆಗೆ ಟೈಲರಿಂಗ್ ಮಿಷನ್ ಹಾಗೂ ಹೆಣ್ಣು ಮಕ್ಕಳಿಗೆ ಸೈಕಲ್ ನೀಡಲಿದ್ದೇವೆ,’ ಎಂದು ಹೇಳಿದರು.
ಎಸ್‌ಐಡಿಬಿಐ ಜನರಲ್ ಮ್ಯಾನೇಜರ್ ಆನಂದಿ ಚರಣ ಸಹು, ಸಿಡಬ್ಲೂಸಿಸಿಐ ಸ್ಥಾಪಕಿ ಐಶ್ವರ್ಯ ನಂದ್ಯಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮೀ ವೆಂಕಟನಾರಾಯಣನ್, ನಿರ್ದೇಶಕಿ ಪುಷ್ಪವತಿ ಮೊದಲಾದವರು ಉಪಸ್ಥಿತರಿದ್ದರು.