ನವದೆಹಲಿ: ಹಾಲು ಮತ್ತು ದಿನಪತ್ರಿಕೆಗಳನ್ನು ಮನೆ ಬಾಗಿಲಿಗೇ ತಲುಪಿಸುವ ಹಾಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಯಾಕೆ ತಲುಪಿಸಬಾರದು?
ಇದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಐಡಿಯಾ! ಹಿಂದೊಮ್ಮೆ ಇದೇ ಪ್ರಸ್ತಾಪ ಇಟ್ಟು ಮುಜುಗರಕ್ಕೊಳಗಾಗಿದ್ದ ಇವರು, ಮತ್ತೂಮ್ಮೆ ಅದೇ ಪ್ರಸ್ತಾಪ ಮುಂದಿಟ್ಟಿದ್ದಾರೆ.
ಬುಧವಾರ ದೆಹಲಿಯಲ್ಲಿ ಆರಂಭವಾದ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಈಗಾಗಲೇ ಟೆಲಿಕಾಂ ಮತ್ತು ಐಟಿ ವಲಯದಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ಅದೇ ರೀತಿಯಲ್ಲೇ ತೈಲ ವಲಯದಲ್ಲೂ ಸುಧಾರಣೆ ತರಬೇಕಿತ್ತು, ಸರ್ಕಾರ ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮನೆ ಮನೆಗೆ ತಲುಪಿಸಲಿದೆ ಎಂದು ಹೇಳಿದ್ದಾರೆ. ಅಂದರೆ ಈಗ ಇ-ಕಾಮರ್ಸ್ ಸೈಟ್‌ಗಳು ಕಾರ್ಯ ನಿರ್ವಹಿಸುತ್ತಿರುವ ರೀತಿಯಲ್ಲೇ ತೈಲವೂ ಸಿಗಲಿದೆ ಎಂದು ತಿಳಿಸಿದ್ದಾರೆ.
ಟೆಲಿಕಾಂ ವಲಯದಲ್ಲಿನ ಅತ್ಯಾಧುನಿಕ ನೀತಿ, ಇತರೆ ವಲಯಗಳ ಬೆಳವಣಿಗೆಗೂ ಕಾರಣವಾಗಿದೆ. ಅದೇ ರೀತಿ ಪೆಟ್ರೋಲಿಯಂ ವಲಯದಲ್ಲೂ ಸುಧಾರಣೆ ತರಬೇಕು. ಸದ್ಯ 35 ಕೋಟಿ ಮಂದಿ ಪ್ರತಿ ದಿನ ಪೆಟ್ರೋಲ್ ಬಂಕ್‌ಗಳ ಮುಂದೆ ನಿಲ್ಲುತ್ತಿದ್ದಾರೆ. ಈ ಕ್ಯೂ ತಪ್ಪಿಸುವ ಸಲುವಾಗಿ ಇಂಧನವನ್ನು ಮನೆ ಬಾಗಿಲಿಗೆ ತಲುಪಿಸಲು ಚಿಂತನೆ ನಡೆಸಿದ್ದೇವೆ. ಇದರಿಂದ ಜನರ ಸಮಸ್ಯೆಗೆ ಕಡಿವಾಣ ಬಿದ್ದಂತಾಗುತ್ತದೆ ಎಂದು ಹೇಳಿದ್ದಾರೆ.
ಇದೇ ಮೊದಲಲ್ಲ: ಕಳೆದ ಏಪ್ರಿಲ್‌ನಲ್ಲೂ ಧರ್ಮೇಂದ್ರ ಪ್ರಧಾನ್ ಅವರು ಈ ಪ್ರಸ್ತಾಪ ಇಟ್ಟಿದ್ದರು. ಇ-ಕಾಮರ್ಸ್ ಸೈಟ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆರ್ಡರ್ ಮಾಡಿ ಮನೆಗೆ ತಂದುಕೊಡುವ ವ್ಯವಸ್ಥೆ ಮಾಡಲಿದ್ದೇವೆ ಎಂದಿದ್ದರು. ಅಲ್ಲದೆ ಇದಕ್ಕಾಗಿ ಪುಟ್ಟ ಮತ್ತು ಸಂಚಾರಿ ಪೆಟ್ರೋಲ್ ಪಂಪ್‌ಗ್ಳನ್ನು ಸ್ಥಾಪಿಸಲಿದ್ದೇವೆ ಎಂದೂ ಹೇಳಿದ್ದರು. ಆದರೆ ಪೆಟ್ರೋಲಿಯಂ ಮತ್ತು ಸುರಕ್ಷತಾ ಮಂಡಳಿ ಸಚಿವರ ಆಸೆಗೆ ತಣ್ಣಿರೇರಚಿತ್ತು. ಇದರಿಂದ ತೈಲವನ್ನು ದುರ್ಬಳಕೆ ಮಾಡಿಕೊಳ್ಳುವುದು ಸುಲಭವಾಗಲಿದೆ. ಜತೆಗೆ, ಇದು ಸುರಕ್ಷತಾ ವಿಧಾನವೂ ಅಲ್ಲ ಎಂದಿತ್ತು.