Advertisement

ಸರ್ಕಾರಿ ಯೋಜನೆ ಸಾರ್ವಜನಿಕರಿಗೆ ತಲುಪಲಿ: ಉಪಾಸೆ

10:44 AM Feb 11, 2019 | Team Udayavani |

ಯಾದಗಿರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಯಾದಗಿರಿ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಫೆ. 9ರಿಂದ 11ರ ವರೆಗೆ ಹಮ್ಮಿಕೊಂಡಿರುವ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಶನಿವಾರ ಚಾಲನೆ ನೀಡಿದರು.

Advertisement

ನಂತರ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದ ಅವರು, ಪ್ರದರ್ಶನದಲ್ಲಿ ಮೈತ್ರಿ ಸರ್ಕಾರದ ಪ್ರಮುಖ ಜನಪರ ಯೋಜನೆಗಳು ಚೆನ್ನಾಗಿ ಅನಾವರಣಗೊಂಡಿವೆ. ಸರ್ಕಾರಿ ಯೋಜನೆಗಳು ಸಾರ್ವಜನಿಕರಿಗೆ ತಲುಪಿದಾಗ ಯೋಜನೆಗಳ ಉದ್ದೇಶ ಈಡೇರುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನವನ್ನು ವಿವಿಧ ನಗರ, ಗ್ರಾಮಗಳಿಂದ ಬಸ್‌ ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬ ಸಾರ್ವಜನಿಕರು ವೀಕ್ಷಿಸುವ ಮೂಲಕ ಯೋಜನೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಜನಪರ ಯೋಜನೆಗಳ ಕುರಿತು ಚಿತ್ರಸಹಿತ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ರಾಜ್ಯ ಸರ್ಕಾರವು ರೈತ ಬಂಧು ಯೋಜನೆಯ ಮೂಲಕ 48 ಸಾವಿರ ಕೋಟಿ ರೂಪಾಯಿ ಮೊತ್ತದ ಬೆಳೆಸಾಲ ಮನ್ನಾ ಮಾಡಿದೆ. ಇದರಿಂದ 43.59 ಲಕ್ಷ ರೈತರು ಋಣಮುಕ್ತವಾಗಲಿದ್ದಾರೆ ಎಂಬ ಮಾಹಿತಿಯ ಜೊತೆಗೆ ಬೀದಿಬದಿ ವ್ಯಾಪಾರಿಗಳಿಗೆ ಗರಿಷ್ಠ 10 ಸಾವಿರ ರೂ. ಗಳ ಬಡ್ಡಿರಹಿತ ಸಾಲಸೌಲಭ್ಯ. ಜನತಾ ದರ್ಶನ, ಮುಖ್ಯಮಂತ್ರಿ ಮಾತೃಶ್ರೀ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಆಧುನಿಕ ಕೃಷಿ ಪದ್ಧತಿಗೆ ಆದ್ಯತೆ, ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲ ಸೌಕರ್ಯ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, ಬೆಳೆ ಸಮೀಕ್ಷೆ, ಹಸಿರು ಕರ್ನಾಟಕ ಇತರೆ ಹಲವಾರು ಮಹತ್ವದ ಯೋಜನೆಗಳ ಮಾಹಿತಿ ಪ್ರದರ್ಶನದಲ್ಲಿ ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಲೇಖಕ ಬೊಳುವಾರು ಮಹಮದ್‌ ಕುಂಞಿ ರಚಿತ ಪಾಪು ಬಾಪು ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಜಿಪಂ ಪ್ರಭಾರ ಸಹಾಯಕ ಕಾರ್ಯದರ್ಶಿ ಅಜೀತ್‌ ನಾಯಕ್‌, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರಿ ನಿಯಂತ್ರಣಾಧಿಕಾರಿ ಮಹಿಪಾಲ ಬೇಗಾರ, ಶುಭಂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುರುಪ್ರಸಾದ ವೈದ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ವಾರ್ತಾ ಸಹಾಯಕ ಡಿ.ಕೆ. ರಾಜರತ್ನ, ವಾರ್ತಾ ಇಲಾಖೆ ಸಿಬ್ಬಂದಿಗಳಾದ ವಿಶ್ವರಾಧ್ಯ ಎಸ್‌. ಹಂಗನಳ್ಳಿ, ಸಿದ್ಧರಾಮ ಹಾಗೂ ಮಳಿಗೆ ಸ್ಥಾಪಿಸಿರುವ ಸ್ಪೆಕ್ಟ್ರಂ ಬೆಂಗಳೂರು ಸಂಸ್ಥೆಯ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next