ಸಾಗರ: ಸರ್ಕಾರದ ಸಾಧನೆ ಮತ್ತು ಶಾಸಕರ ಈವರೆಗಿನ ಅಭಿವೃದ್ಧಿ ಕೆಲಸಗಳು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಹಕಾರಿಯಾಗುತ್ತವೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಆರ್.ಡಿ. ಹೆಗಡೆ ಹೇಳಿದರು.
ಇಲ್ಲಿನ ಸೇವಾ ಸಾಗರದ ಅಜಿತ್ ಸಭಾಭವನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿದೆ. ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರಲ್ಲದೆ ಉಳಿದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಪಕ್ಷದ ಮುಖಂಡರು ಮನವೊಲಿಸಬೇಕು ಎಂದರು.
ಶಾಸಕ ಎಚ್. ಹಾಲಪ್ಪ ಹರತಾಳು ಮಾತನಾಡಿ, ಚುನಾವಣೆಯಲ್ಲಿ ಶತಾಯ ಗತಾಯ ನಾವು ಗೆಲ್ಲಲೇಬೇಕು. ಪಕ್ಷದ ಮುಖಂಡರು ಹೆಚ್ಚು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ನಾವು ಹೆಚ್ಚು ಗ್ರಾಪಂ ಸದಸ್ಯರನ್ನು ಹೊಂದಿದ್ದೇವೆ. ಅದು ನಮಗೆ ಸಹಕಾರಿಯಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಬಿಜೆಪಿ ಅಭ್ಯರ್ಥಿಗೆ ಮೊದಲನೇ ಪ್ರಾಶಸ್ತ್ಯದ ಮತ ಹೆಚ್ಚು ಬರುವಂತೆ ನಾವೆಲ್ಲ ಕೆಲಸ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಎಲ್ಲಾ ಅವಕಾಶ ಅನುಕೂಲತೆ ಇದೆ. ನಾವು ಹೆಚ್ಚು ಶಾಸಕರನ್ನು ಹಾಗೂ ಸಂಸದರನ್ನು ಹೊಂದಿದ್ದೇವೆ. ನ. 18ರಂದು ಶಿವಮೊಗ್ಗದಲ್ಲಿ ಬೃಹತ್ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಾಗರ ಗ್ರಾಮಾಂತರ ಮಂಡಲದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀನಾಥ್ ಮತ್ತು ಕುಪೇಂದ್ರ, ಯೋಜನಾ ಆಯೋಗದ ಸದಸ್ಯರಾದ ಪ್ರಸನ್ನ ಕೆರೆಕೈ, ಎಪಿಎಂಸಿ ಅಧ್ಯಕ್ಷರಾದ ಚೇತನ್‌ರಾಜ್ ಕಣ್ಣೂರು, ಜಿಪಂ ಮಾಜಿ ಸದಸ್ಯರಾದ ರಾಜಶೇಖರ ಗಾಳಿಪುರ, ಗ್ರಾಪಂ ಸದಸ್ಯರ ಒಕ್ಕೂಟದ ಸಾಗರ ಘಟಕದ ಅಧ್ಯಕ್ಷರಾದ ಶಿವಾನಂದ್, ಕಾರ್ಗಲ್- ಜೋಗ್ ಪಪಂ ಅಧ್ಯಕ್ಷೆ ವಾಸಂತಿ ರಮೇಶ್ ಇದ್ದರು. ಸುಮಾ ರವಿ ಮತ್ತು ಸುವರ್ಣ ಟೀಕಪ್ಪ ಪ್ರಾರ್ಥಿಸಿದರು. ಗೌತಮ ಸ್ವಾಗತಿಸಿದರು. ದೇವೇಂದ್ರಪ್ಪ ಯಲಕುಂದ್ಲಿ ವಂದಿಸಿದರು.