Advertisement

ಕಾರ್ಮಿಕರ ವೇತನ ಭರಿಸುವ ಸರಕಾರ!

09:13 AM Apr 18, 2020 | mahesh |

ಉಡುಪಿ: ಆ ದೇಶದಲ್ಲಿ ದಾಖಲಾಗಿರುವ ಕೋವಿಡ್‌-19 ಪ್ರಕರಣಗಳು ಕೇವಲ 11. ಆದರೂ ತಪಾಸಣೆ ಸಹಿತ ಮುನ್ನೆಚ್ಚರಿಕೆ ಕ್ರಮಗಳೆಲ್ಲ ಬಿಗಿ. ಎಪ್ರಿಲ್‌ ಅಂತ್ಯಕ್ಕಾಗುವಾಗ ಲಾಕ್‌ಡೌನ್‌ಗೆ 1 ತಿಂಗಳಾಗುತ್ತದೆ. ಲಾಕ್‌ಡೌನ್‌ ಅವಧಿಯಲ್ಲಿ ದೇಶದಲ್ಲಿ ಕರ್ತವ್ಯದಲ್ಲಿದ್ದವರೆಲ್ಲರ ವೇತನವನ್ನು ಸರಕಾರವೇ ಭರಿಸುತ್ತಿದೆಯಂತೆ. ಇದು ದ್ವೀಪ ರಾಷ್ಟ್ರವಾಗಿರುವ ಸೀಶೆಲ್ಸ್‌ ದೇಶದ ಕಥೆ. ಸೀಶೆಲ್ಸ್‌ ದೇಶದಲ್ಲಿ ಸ್ಪಾ ಮ್ಯಾನೇಜರ್‌ ಆಗಿರುವ ಬ್ರಹ್ಮಾವರ ಮೂಲದ ವೆಂಕಟೇಶ್‌ ಅವರು ಅಲ್ಲಿನ ಪರಿಸ್ಥಿತಿಯನ್ನು “ಉದಯವಾಣಿ’ ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಪೂರ್ವ ಆಫ್ರಿಕಾದ ಹಿಂದಿರುವ ಹಿಂದೂ ಮಹಾ ಸಾಗರದ 115 ದ್ವೀಪಗಳ ಸಮೂಹ ಇದಾಗಿದ್ದು, ಹಲವಾರು ಕಡಲತೀರಗಳು, ಹವಳದ ಬಂಡೆಗಳು ಮತ್ತು ದೈತ್ಯ ಅಲ್ಡಾಬ್ರಾ ಆಮೆಗಳಂತಹ ಅಪೂರ್ವ ಪ್ರಾಣಿಗಳ ನೆಲೆಯಾಗಿದೆ. ಪ್ರವಾಸೋದ್ಯಮವನ್ನೇ ಮುಖ್ಯ ಕಸುಬಾಗಿಸಿಕೊಂಡಿರುವ ಈ ನಗರ ಪ್ರಸ್ತುತ ಸ್ತಬ್ಧವಾಗಿದೆ.

Advertisement

ಸರಕಾರದಿಂದಲೇ ವೇತನ
ಲಾಕ್‌ಡೌನ್‌ ಆದೇಶ ಬಹುತೇಕ ಭಾರತದಲ್ಲಿರು ವಂತೆಯೇ ಇವೆ. ಬೆಳಗ್ಗೆ 6ರಿಂದ 11ರ ವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ ಇದೆ. ಅನಂತರ ಯಾರೂ ಕೂಡ ಹೊರಗಿಳಿಯುವಂತಿಲ್ಲ. ಎಲ್ಲ ಕಾರ್ಮಿಕರಿಗೂ ರಜೆ ಸಾರಲಾಗಿದೆ. ವೇತನವನ್ನು ಸರಕಾರವೇ ಭರಿಸುತ್ತಿದೆ.

10 ಸಾವಿರ ಭಾರತೀಯರು
ಈ ದೇಶದಲ್ಲಿ ಸುಮಾರು 10 ಸಾವಿರ ಭಾರತೀಯರು ಕೆಲಸ ನಿರ್ವಹಿಸುತ್ತಿದ್ದಾರೆ. ರಷ್ಯಾ, ಇಂಡೋನೇಷ್ಯಾ ಸಹಿತ ವಿವಿಧ ದೇಶದವರೂ ಇದ್ದಾರೆ. ಚೀನದಲ್ಲಿ ಕೋವಿಡ್‌-19 ಸೋಂಕು ಲಕ್ಷಣ ಉಲ್ಬಣಗೊಳ್ಳುತ್ತಿದ್ದಂತೆ ಅಲ್ಲಿಂದ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಅಮೆರಿಕದವರು ಈ ದೇಶಕ್ಕೆ ಅತೀ ಹೆಚ್ಚು ಭೇಟಿ ನೀಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಈಗ ಎಲ್ಲವೂ ಬಂದ್‌ ಆಗಿವೆ. ಮಿಲಿಟರಿ, ಪೊಲೀಸರು, ಹೆಲಿಕಾಪ್ಟರ್‌ ಆ್ಯಂಬುಲೆನ್ಸ್‌ಗಳು, ಬ್ಯಾಂಕ್‌ಗಳು, ಆಸ್ಪತ್ರೆಗಳು ಸೇವೆಯಲ್ಲಿವೆ ಎನ್ನುತ್ತಾರೆ ಅವರು.

ಕೆಲವು ದಿನಗಳ ಮಟ್ಟಿಗೆ ಲಾಕ್‌ಡೌನ್‌ ಸಡಿಲಿಕೆ ಮಾಡಿ ಹೊರ ರಾಷ್ಟ್ರಗಳ ಪ್ರಜೆಗಳನ್ನು ಅವರ ದೇಶಗಳಿಗೆ ಕಳಿಸಿಕೊಡುವ ಚಿಂತನೆಯನ್ನು ಈ ರಾಷ್ಟ್ರ ನಡೆಸುತ್ತಿದೆಯಂತೆ. ಒಂದು ವೇಳೆ ಎಲ್ಲ ರಾಷ್ಟ್ರಗಳು ಇದನ್ನು ಅನುಸರಿಸಿದ್ದೇ ಆದಲ್ಲಿ ವೈರಸ್‌ ಸೋಂಕು ಮತ್ತಷ್ಟು ಹರಡುವ ಭೀತಿಯೂ ಇದೆ ಎನ್ನುತ್ತಾರೆ ಅಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು.

ಪ್ರಸಕ್ತ ಸ್ಥಿತಿಯಲ್ಲಿ ಆಹಾರ ಸಹಿತ ಇನ್ನಿತರ ಮೂಲಸೌಕರ್ಯಗಳಿಗೆ ಯಾವುದೇ ಸಮಸ್ಯೆಯಿಲ್ಲ. ಬೇರೆ ದೇಶದಲ್ಲಿರುವವರನ್ನು ಹಿಂದಕ್ಕೆ ಕಳುಹಿಸುವ ಯೋಜನೆಯನ್ನು ಸರಕಾರ ರೂಪಿಸುತ್ತಿದೆ. ಇದು ಜಾರಿಗೆ ಬಂದಿದ್ದೇ ಆದಲ್ಲಿ ಇಲ್ಲಿ ನೆಲೆಸಿರುವ ಭಾರತೀಯರು ಮತ್ತಷ್ಟು ಸಂಕಷ್ಟಕ್ಕೊಳಗಾಗಲಿದ್ದಾರೆ.
– ವೆಂಕಟೇಶ್‌ ಬ್ರಹ್ಮಾವರ, ಸೀಶೆಲ್ಸ್‌ ದೇಶವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next