Advertisement
ಬ್ರಹ್ಮಾವರದಿಂದ ಬಾರ್ಕೂರು, ಬಿದ್ಕಲ್‌ಕಟ್ಟೆ, ಜನ್ನಾಡಿ, ಹಾಲಾಡಿ, ಸಿದ್ದಾಪುರ ಮಾರ್ಗವಾಗಿ ಹುಲಿಕಲ್ ಘಾಟಿ, ಸಾಗರ-ಶಿವಮೊಗ್ಗ-ಬೆಂಗಳೂರು ತಲುಪಲು, ಕೊಲ್ಲೂರು ಮುಂತಾದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲು ಈ ರಸ್ತೆ ಅನುಕೂಲವಾಗಿದ್ದು ಸಾಕಷ್ಟು ವಾಹನದಟ್ಟಣೆ ಹೊಂದಿರುವ ಕಾರಣಕ್ಕೆ ಜಿಲ್ಲಾ ಮುಖ್ಯ ರಸ್ತೆಯಿಂದ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಇತ್ತು. ಒಂದು ವರ್ಷದ ಹಿಂದೆ ಪಿ.ಡಬ್ಲ್ಯು.ಡಿ. ಇಲಾಖೆ ಈ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅದು ರಾಜ್ಯ ಸಚಿವ ಸಂಪುಟ ದಲ್ಲಿ ಮಂಡನೆಯಾಗಿ ಅನುಮೋದನೆಗೊಂಡಿದೆ.
ಜಿಲ್ಲಾ ಮುಖ್ಯ ರಸ್ತೆಗಿಂತ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಎಸ್‌ಎಚ್‌ಡಿಪಿ ಮೂಲಕ ದುಪ್ಪಟ್ಟು ಅನುದಾನ ಲಭ್ಯವಾಗಲಿದ್ದು ಇದರ ಅಭಿವೃದ್ಧಿಗೆ ಪೂರಕವಾಗಲಿದೆ ಹಾಗೂ ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕಟ್ಟಡ ನಿರ್ಮಿಸುವಾಗ ಪಟ್ಟಾ ಸ್ಥಳದಿಂದ 6 ಮೀ. ಸ್ಥಳವನ್ನು ಬಿಡಬೇಕು ಎನ್ನುವ ಕಾನೂನು ಇರುವುದರಿಂದ ರಸ್ತೆ ಪಕ್ಕದಲ್ಲೇ ಕಟ್ಟಡ ನಿರ್ಮಾಣದ ಒತ್ತುವರಿಗೆ ತಡೆ ಬೀಳಲಿದೆ. ಎಸ್.ಎಚ್.ಡಿ.ಪಿ. ಅನುದಾನದಲ್ಲಿ ರಸ್ತೆ ವಿಸ್ತರಣೆಗೆ ಅವಕಾಶವಿದೆ. ಶಿಥಿಲ ಗೊಂಡ ಸೇತುವೆಗಳನ್ನು ತೆರವು ಗೊಳಿಸಿ ಹೊಸ ಸೇತುವೆ ನಿರ್ಮಾಣ, ಅಪಾಯಕಾರಿ ತಿರುವು ಸರಿಪಡಿಸುವಿಕೆ, ಸರ್ಕಲ್‌ಗಳ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಮೂರ್‍ನಾಲ್ಕು ದಶಕಗಳ ಹೋರಾಟ
ಈ ರಸ್ತೆಯನ್ನು ರಾಜ್ಯ ಹೆದ್ದಾರಿ ಯಾಗಿಸುವಲ್ಲಿ ಮೂರ್‍ನಾಲ್ಕು ದಶಕ ಗಳಿಂದ ಸ್ಥಳೀಯರು ಹೋರಾಟ ನಡೆಸುತ್ತಿದ್ದು, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್ ಮುಂತಾದವರ ಮೂಲಕ ಸರಕಾರದ ಗಮನಸೆಳೆಯಲಾಗಿತ್ತು ಹಾಗೂ ಪ್ರಸ್ತುತ ಮೀನುಗಾರಿಕೆ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಉಡುಪಿ ಶಾಸಕ ಕೆ. ರಘುಪತಿ ಭಟ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಸಂಸದ ಬಿ.ವೈ.ರಾಘವೇಂದ್ರ ಅವರಲ್ಲಿ ಮನವಿ ಮಾಡಲಾಗಿತ್ತು. ಇವರ ಪ್ರಯತ್ನ ಮತ್ತು ಪಿ.ಡ.ಬ್ಲ್ಯು.ಡಿ. ಅಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಈ ಬಗ್ಗೆ ಹೋರಾಟ ನಡೆಸಿದವರಲ್ಲಿ
ಪ್ರಮುಖರಾದ ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
Related Articles
ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಬೇಡಿಕೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದರೂ ಒಂದು ಹಂತದಲ್ಲಿ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ಉದಯವಾಣಿ ಹಲವು ಬಾರಿ ವರದಿ ಪ್ರಕಟಿಸಿ ರಾಜ್ಯ ಹೆದ್ದಾರಿಯ ಅವಶ್ಯಕತೆ ಮತ್ತು ರಸ್ತೆಯ ಪ್ರಸ್ತುತ ಸಮಸ್ಯೆ ಕುರಿತು ಗಮನ ಸೆಳೆದಿತ್ತು. ಅನಂತರ ಇಲಾಖೆ ವತಿಯಿಂದ ರಾಜ್ಯಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿ ಜನಪ್ರತಿನಿಧಿಗಳು, ಸ್ಥಳೀಯರು, ಅಧಿಕಾರಿಗಳ ಪ್ರಯತ್ನದ ಫಲವಾಗಿ ಅನುಮೋದನೆ ದೊರೆತಿದೆ.
Advertisement
ಹಂತ ಹಂತವಾಗಿ ಅಭಿವೃದ್ಧಿಬ್ರಹ್ಮಾವರ -ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸುವಂತೆ ಇಲಾಖೆ ವತಿಯಿಂದ ಮನವಿ ಮಾಡಿದ್ದು ಇದೀಗ ರಾಜ್ಯ ಸರಕಾರ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ. ಮುಂದೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಅನುದಾನದಲ್ಲಿ ಹಂತ ಹಂತವಾಗಿ ರಸ್ತೆ ಅಭಿವೃದ್ಧಿಪಡಿಸಲಾಗುವುದು.
-ಜಗದೀಶ್ ಭಟ್, ಎಂಜಿನಿಯರ್ , ಲೋಕೋಪಯೋಗಿ ಇಲಾಖೆ