ಬೆಂಗಳೂರು : ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದ ತಾರಕಕ್ಕೆ ಏರಿರುವುದರ ಮಧ್ಯೆಯೇ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಪಶುಹತ್ಯೆ ಸಂದರ್ಭದಲ್ಲಿ ಹಿಂಸೆ ಮಾಡಬಾರದು ಎಂದು ನಿರ್ದೇಶಿಸಿದೆ ಎಂದು ಸುದ್ದಿಯಾಗಿದೆ.
ಹಲಾಲ್ ಕಟ್ ಕುರಿತಾಗಿ ರಾಜ್ಯದೆಲ್ಲೆಡೆ ಗೊಂದಲಗಳು ವಿವಾದ ನಡೆಯುತ್ತಿರುವ ವೇಳೆ, ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಸುದ್ದಿ ಹರಿದಾಡಿತ್ತು.
ರಾಜಧಾನಿ ಬೆಂಗಳೂರಿನಲ್ಲಿ ಇನ್ನುಮುಂದೆ ಪ್ರಾಣಿ ವಧೆ ಮಾಡುವಾಗ ಸ್ಟನ್ನಿಂಗ್ ಅಂದರೆ ಪ್ರಾಣಿಗಳನ್ನು ಪ್ರಜ್ಞೆ ತಪ್ಪಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗಿದ್ದು, ಪಶುಸಂಗೋಪನಾ ಇಲಾಖೆ ಹೊರಡಿಸಿದರೆ ಆದೇಶ ಹಲಾಲ್ ಪರವಾದಿಗಳಿಗೆ ತುಸು ಹಿನ್ನಡೆ ಎಂದು ವಿಶ್ಲೇಷಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ , ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ. ನಮ್ಮ ಇಲಾಖೆಯಿಂದ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಸ್ಟನ್ನಿಂಗ್ ವಿಧಾನದ ಹತ್ಯೆ ಹೇಗೆ
ಸ್ಟನ್ನಿಂಗ್ ವಿಧಾನದಿಂದ ಕೊಂದಾಗ ಪ್ರಾಣಿಗಳು ನರಳಿ ಸಾಯುವುದಿಲ್ಲ . ಪ್ರಾಣಿಗಳ ತಲೆಗೆ ಬಲವಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯವಾಗಿ ನರಳಾಡದೆ ಸಾಯುತ್ತವೆ ಎನ್ನಲಾಗಿದೆ.