Advertisement

ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲ

04:03 PM Jul 19, 2023 | Team Udayavani |

ಶ್ರೀರಂಗಪಟ್ಟಣ: ಹಲವು ಸ್ಥಳಗಳಲ್ಲಿ ಸರ್ಕಾರಿ ಜಮೀನುಗಳಿದ್ದರೂ ಅವುಗಳನ್ನು ಸಂರಕ್ಷಿಸಿ ಸರ್ಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸದೆ, ಬಾಡಿಗೆ ಕಟ್ಟಡದಲ್ಲೇ ಸರ್ಕಾರದ ವಿವಿಧ ಇಲಾಖೆ ಕಚೇರಿಗಳು ಕಾರ್ಯನಿರ್ವ ಹಿಸಿತ್ತಿವೆ. ಇದರಿಂದ ಸರ್ಕಾರಿ ಹಣ ಸೋರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರಗಳು ವಿಫ‌ಲವಾಗಿದೆ. ಶ್ರೀರಂಗಪಟ್ಟಣದಲ್ಲಿ ಸರ್ಕಾರದ ಹಲವು ಇಲಾಖೆಗಳಿಗೆ ಸ್ವಂತ ಕಟ್ಟಡಗಳಿಲ್ಲದೆ, ಬಾಡಿಗೆ ಆಧಾರದಲ್ಲಿ ಕಟ್ಟಡಗಳನ್ನು ಪಡೆದು ತಾಲೂಕು ಮಟ್ಟದ ಕಚೇರಿಗಳನ್ನು ನಡೆಸುವಂತಾಗಿದೆ.

Advertisement

ಶ್ರೀರಂಗಪಟ್ಟಣದಲ್ಲಿ ಕೋಟ್ಯಂತರ ರೂ., ಖರ್ಚು ಮಾಡಿ ಮಿನಿ ವಿಧಾನ ಸೌಧ ನಿರ್ಮಿಸಿದ್ದರೂ, ಈ ಕಟ್ಟಡದಲ್ಲಿ ವಿವಿಧ ಇಲಾಖೆ ಕಚೇರಿಗಳಿಗೆ ಕೊಠಡಿಗಳೇ ಇಲ್ಲವಾಗಿದೆ. ಇದರಿಂದ ವಿವಿಧ ಭಾಗದಲ್ಲಿ ಕೊಠಡಿಗಳನ್ನು ಬಾಡಿಗೆಗೆ ಪಡೆದು ಸರ್ಕಾರದ ಹಣವನ್ನು ಸೋರಿಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರ್ಕಾರದ ಹಣ ಪೋಲು: ಶ್ರೀರಂಗಪಟ್ಟಣ ಎಪಿಎಂಸಿ ಕಚೇರಿಗೆ ಬಾಡಿಗೆ ಕಟ್ಟಡವನ್ನು ಪಡೆಯಲಾಗಿದ್ದು, ಆ ಇಲಾಖೆಯಲ್ಲಿ ಅಪಾರ ಪ್ರಮಾಣದಲ್ಲಿ ಹಣವಿದ್ದರೂ ಆ ಹಣ ಬಳಸಿಕೊಂಡು ಇಲಾಖೆಗೆ ಸ್ವಂತ ಕಟ್ಟಡ ಮಾಡಿಕೊಳ್ಳುವುದರಲ್ಲಿ ವಿಫ‌ಲವಾಗಿದೆ. ಇದೇ ರೀತಿಯಲ್ಲಿ ತಾಲೂಕು ಮಟ್ಟದ ಅಬಕಾರಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆಯ ಕೆ.ಶೆಟ್ಟಹಳ್ಳಿ ನಾಡಕಚೇರಿ ಸೇರಿ ದಂತೆ ಹಲವು ಇಲಾಖೆಗಳ ಕಚೇರಿಗಳಿಗೆ ಸ್ವಂತ ಕಟ್ಟಡವೇ ಇಲ್ಲವಾಗಿದೆ. ಬಾಡಿಗೆ ಆಧಾರದಲ್ಲಿ ಕಟ್ಟಡ ಅಥವಾ ಕೊಠಡಿಗಳ ಪಡೆದು ಕಚೇರಿಯನ್ನು ನಡೆಸಲಾಗುತ್ತಿದೆ. ಇದರಿಂದ ಸರ್ಕಾರದ ಕೋಟ್ಯಂತರ ರೂ. ಹಣ ಪೋಲಾಗುತ್ತಿದೆ ಎಂದು ತಿಳಿದು ಬಂದಿದೆ.

ಆಸ್ತಿ ರಕ್ಷಣೆ ಅಗತ್ಯ: ಕೆಲವು ಇಲಾಖೆ ಕಚೇರಿಗಳಿಗೆ ಸರ್ಕಾರಿ ಭೂಮಿ ಅಥವಾ ನಿವೇಶನವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಸುತ್ತಿವೆ. ಶ್ರೀರಂಗಪಟ್ಟಣದ ಹಲವೆಡೆ ಸರ್ಕಾರಿ ಭೂಮಿ, ಧಾರ್ಮಿಕ ದತ್ತಿ ಇಲಾಖೆಯ ದೇಗುಲಕ್ಕೆ ಸೇರಿದ ಭೂಮಿ, ಆಸ್ತಿಗಳನ್ನು ಕಂದಾಯ ಇಲಾಖೆ ಸಂರಕ್ಷಣ ಕಾಯ್ದೆಯಡಿ ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸಿ, ವಶಕ್ಕೆ ಪಡೆದುಕೊಂಡು ಪ್ರತಿ ಇಲಾಖೆಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ತಾಲೂಕು ಆಡಳಿತ ವಿಫ‌ಲವಾಗಿದೆ ಎಂದು ಜನರು ದೂರಿದ್ದಾರೆ. ಆಯಾ ಇಲಾಖೆಗೆ ಸಂಬಂಧಿಸಿದ ಅನುದಾ ನದಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ, ಕಟ್ಟಡ ನಿರ್ಮಿಸಿ ಕೊಳ್ಳದಿರಲು ಆ ಇಲಾಖೆಗೆ ಬರುವ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ, ತಾಲೂಕು ಆಡಳಿತದ ಗಮನಕ್ಕೂ ತಾರದೆ ಬಾಡಿಗೆಯನ್ನು ನಿಗದಿಪಡಿಸಿ, ಹಣ ವನ್ನು ಕಟ್ಟಡದ ಮಾಲೀಕರಿಗೆ ನೀಡುತ್ತಿ ರುವುದು ಬೆಳಕಿಗೆ ಬಂದಿದೆ.

ಕೆಲವು ಇಲಾಖೆಯಲ್ಲಿ ಬಾಡಿಗೆಯಲ್ಲಿರುವುದೇ ಒಂದು ರೀತಿ ಸರಿ ಎಂದು ಕಟ್ಟಡದ ಮಾಲೀಕರಿಂದ ಬಾಡಿಗೆ ಹಣದಲ್ಲಿ ಇಂತಿಷ್ಟು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಭೂಮಿ ಬಲಾಡ್ಯರ ಪಾಲು: ಇತ್ತೀಚಿನ ದಿನಗಳಲ್ಲಿ ಹಲವೆಡೆ ಸರ್ಕಾರಿ ಭೂಮಿ ಹಾಗೂ ದೇವಾಲಯಗಳ ಭೂಮಿಗಳನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ, ಸಂರಕ್ಷಿಸಿ ಗ್ರಾಮಗಳಿಗೆ ಬೇಕಾಗಿರುವ ಸರ್ಕಾರಿ ಕಟ್ಟಡಗಳು, ಶಾಲೆ, ಅಂಗನವಾಡಿ ಕೇಂದ್ರ, ಡೇರಿ, ಅಂಚೆ ಕಚೇರಿ, ನಾಡ ಕಚೇರಿ, ಗ್ರಂಥಾಲಯ, ಬಡವರಿಗೆ ಮನೆ ನಿರ್ಮಾಣ ಮತ್ತು ಅಭಿವೃದ್ಧಿಗೆ ಬಳಸಿಕೊಳ್ಳದೆ ಸರ್ಕಾರಿ ಆಸ್ತಿ ಉಳ್ಳವರು, ಪಟ್ಟಭದ್ರ ಹಿತಾಸಕ್ತರು, ಬಲಾಡ್ಯರ ಪಾಲಾಗುತ್ತಿದೆ. ಇದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಅಧಿಕಾರಿಗಳು ಮೌನಕ್ಕೆ ಶರಣು: ಸರ್ಕಾರಿ ಭೂಮಿಗಳಿದ್ದರೂ ತಾಲೂಕಿನಲ್ಲಿ ಹಲವು ಗ್ರಾಮಗಳು, ನಗರ ಪ್ರದೇಶದಲ್ಲಿ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿವೆ. ಸಾರ್ವಜನಿಕ ತೆರಿಗೆ ಹಣದಿಂದ ಬಾಡಿಗೆ ಕಟ್ಟುತ್ತಿರುವ ಸರ್ಕಾರ, ಸರ್ಕಾರಿ ಭೂಮಿಯಿದ್ದರೂ ಕಟ್ಟಡ ನಿರ್ಮಿಸದೆ ಕಮೀಷನ್‌ ಆಸೆಗಾಗಿ ಬಾಡಿಗೆಯಲ್ಲೇ ಕಚೇರಿಗಳನ್ನು ಮುಂದುವರಿಸಿ ಕೊಂಡು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ಇವರಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಚುರುಕು ಮುಟ್ಟಿಸುವ ಕೆಲಸ ಮಾಡ ಬೇಕಾಗಿದೆ. ಬೆಲೆ ಬಾಳುವ ಸರ್ಕಾರದ ಭೂಮಿಗಳಿಗೆ ಕೆಲವು ಖಾಸಗಿ ವ್ಯಕ್ತಿಗಳು ಕುಂಟು ನೆಪವೊಡ್ಡಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು, ಬಾಡಿಗೆ ಕಟ್ಟಡದಲ್ಲೇ ಸರ್ಕಾರಿ ಕಚೇರಿ ಮುಂದುವರಿ ಯುವಂತೆ ಸರ್ಕಾರಿ ಅಧಿಕಾರಿಗಳು ಕೈ ಜೋಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರ್ಕಾರಿ ಜಾಗ ಖಾಸಗಿಯವರ ಪಾಲು: ಸರ್ಕಾರಿ ಭೂಮಿ ನಮ್ಮದೆ ಎಂದು ಹೇಳಿಕೊಳ್ಳುವ ಬಲಾಡ್ಯರು ಆ ಜಮೀನಿನ ಮೇಲೆ ತಡೆಯಾಜ್ಞೆ ತರುವುದು, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಾಮೀಲಾಗಿ ವರ್ಷಗಳನ್ನು ಮುಂದೂಡುವುದು, ನಂತರದಲ್ಲಿ ಆ ಅಧಿಕಾರಿ ಬೆರೆಡೆ ವರ್ಗಾವಣೆಯಾದ ನಂತರ ಬೇರೆ ಅಧಿಕಾರಿಗಳು ಗಮನಹರಿಸದೆ, ಸರ್ಕಾರ ಜಾಗಗಳು ಖಾಸಗಿಯವರ ಪಾಲಾಗುತ್ತಿವೆ. ಇದರಿಂದ ಸರ್ಕಾರದ ಖಜಾನೆಗೆ ಕೋಟ್ಯಂತರ ರೂ.ನಷ್ಟ ಹಾಗೂ ಸರ್ಕಾರಿ, ದೇಗುಲಗಳ ಭೂಮಿ ಸಂರಕ್ಷಿಸಲು ಸಾಧ್ಯವಾಗದ ತಾಲೂಕು ಆಡಳಿತ ಇನ್ನು ಮುಂದಾದರೂ ಎಚ್ಚರ ವಹಿಸಿ, ಸರ್ಕಾರಿ ಜಾಗವನ್ನು ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿಸಿ ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಕಟ್ಟಡ ನಿರ್ಮಿಸಿ, ಸರ್ಕಾರಕ್ಕೆ ಸೋರಿಕೆಯಾಗುತ್ತಿರುವ ನಷ್ಟವನ್ನು ನಿಯಂತ್ರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒತ್ತುವರಿಯಾದ ಸರ್ಕಾರಿ ಜಾಗ ಗುರುತಿಸಿ: ಶ್ರೀರಂಗಪಟ್ಟಣದ ಹಲವೆಡೆ ಒತ್ತುವರಿಯಾದ ಸರ್ಕಾರಿ ಜಾಗವನ್ನು ತಾಲೂಕು ಆಡಳಿತ ಗುರುತಿಸಬೇಕಿದೆ. ಈ ಸ್ಥಳದ ಬಗ್ಗೆ ಡೀಸಿ ಮೂಲಕ ಕಂದಾಯ ಸಚಿವರ ಗಮನಕ್ಕೆ ತಂದು, ಯಾವ ಇಲಾಖೆಗೆ ಸ್ವಂತ ಕಟ್ಟಡವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿ ಸಿದ ಆಯಾ ಇಲಾಖೆಗೆ ಜಾಗ ನೀಡಲು ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗ ಬೇಕು. ಆಗ ಆಯಾ ಇಲಾಖೆಗೆ ಸಂಬಂಧಿಸಿದ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ವಿಫ‌ಲರಾದರೆ ಡೀಸಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗಳನ್ನೇ ಹೊಣೆಗಾರರಾಗುತ್ತಾರೆ. ಈ ಬಗ್ಗೆ ಕಂದಾಯ ಸಚಿವರು ಶ್ರೀರಂಗಪಟ್ಟಣ ತಾಲೂಕು ಆಡಳಿತದತ್ತ ಗಮನ ಹರಿಸಬೇಕು ಎಂದು ರೈತ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.

ಸರ್ಕಾರಿ ಜಮೀನು ನೀಡಲು ಅರ್ಜಿ ಸಲ್ಲಿಸಿ: ಶ್ರೀರಂಗಪಟ್ಟಣದತಾಲೂಕು ಮಟ್ಟದ ಇಲಾಖೆಗಳಿಗೆ ಸ್ವಂತ ಕಟ್ಟಡವಿಲ್ಲದಿದ್ದರೆ ತಾಲೂಕು ಆಡಳಿತಕ್ಕೆ ಸರ್ಕಾರಿ ಜಮೀನು ನೀಡಲು ಅರ್ಜಿ ಸಲ್ಲಿಸಬೇಕು. ಇದಲ್ಲದೆ, ತಾಲೂಕು ಮಟ್ಟದ ಕಚೇರಿಗಳು ಪಟ್ಟಣದಲ್ಲಿ ಮಾತ್ರ ಇರಬೇಕು. ಬೇರೆ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲಾಗುವುದಿಲ್ಲ. ಸ್ವಂತ ಕಟ್ಟಡ ನಿರ್ಮಿಸಲು ಅಗತ್ಯವಿದ್ದ ಇಲಾಖೆ ನಮ್ಮ ಗಮನಕ್ಕೂ ತರಬೇಕು. ಆ ಜಾಗದ ಬಗ್ಗೆ ಸಂಬಂಧಿಸಿದ ಪಟ್ಟಣ ಪುರಸಭೆ ಅಥವಾ ಕಂದಾಯ ಇಲಾಖೆಯ ಜಾಗವಾಗಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಆಗ ಆ ಇಲಾಖೆ ಸಂಬಂಧಪಟ್ಟವರಿಗೆ ಮಂಜೂರು ಮಾಡಲು ವರದಿ ಮಾಡಲಾಗುತ್ತದೆ. ಜಾಗ ಗುರುತಿಸುವ ಜಬಾಬ್ದಾರಿ ಆ ಇಲಾಖೆಗೆ ಇರುತ್ತದೆ ಎಂದು ತಹಶೀಲ್ದಾರ್‌ ಅಶ್ವಿ‌ನಿ ತಿಳಿಸಿದ್ದಾರೆ.

– ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next