ದೇವನಹಳ್ಳಿ: ಸರ್ಕಾರ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಕೋಟ್ಯಂತರ ರೂ.,ವ್ಯಯ ಮಾಡುತ್ತಿದ್ದರೂ ಇಂದಿಗೂ ದೇವನಹಳ್ಳಿ ಪಟ್ಟಣದ ತಾಲೂಕು ಕಚೇರಿ ಪಕ್ಕದ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ಕಚೇರಿ ಶಿಥಿಲಾವಸ್ಥೆಗೆ ತಲುಪಿದೆ. ಇದರಿಂದ ಅಧಿಕಾರಿಗಳು ನಿತ್ಯ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವ ಪರಿಸ್ಥಿತಿಯಿದೆ.
ಲೋಕೋಪಯೋಗಿ ಇಲಾಖೆ ವಸತಿ ಗೃಹವನ್ನು 1976ರಲ್ಲಿ ನಿರ್ಮಿಸಿದ್ದು ಬಾಡಿಗೆ ಪಡೆದು ನಿರ್ವಹಿಸಲಾಗುತ್ತಿದೆ. ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ಕಚೇರಿಯೂ ಬಹಳ ಹಳೆಯದಾಗಿದ್ದು. ಶಿಥಿಲಾವಸ್ಥೆಗೆ ತಲುಪಿದೆ.
ನಿತ್ಯವೂ ಆತಂಕದಲ್ಲಿ ಅಧಿಕಾರಿಗಳು: ಮಳೆ ಬಂದರೆ ಕಟ್ಟಡದ ಮೇಲ್ಚಾವಣಿಯ ಸಿಮೆಂಟ್ ಕಿತ್ತು ಬೀಳುತ್ತಿದ್ದು ಅಧಿಕಾರಿಗಳಲ್ಲಿ ಹೆಚ್ಚು ಆತಂಕವನ್ನುಂಟು ಮಾಡಿದೆ. ಕಟ್ಟಡದ ಗೋಡೆಗಳ ಮೇಲೆ ಗಿಡ-ಗಂಟಿಗಳು ಬೆಳೆದಿವೆ. ಕಚೇರಿ ಕೆಲಸಗಳಿಗೆ ಬರುವ ಸಾರ್ವಜನಿಕರು ಭಯ ಗೊಳ್ಳುತ್ತಿದ್ದಾರೆ. ಆತಂಕದಲ್ಲೇ ಪ್ರವೇಶಿಸುವ ಸ್ಥಿತಿಯಿದೆ. ಕಸಬಾ ಹೋಬಳಿಯ ಒಂದು ಮತ್ತು ಎರಡು ರಾಜಸ್ವ ನಿರೀಕ್ಷಕರ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಕಚೇರಿ 1-2ನೇ ರಾಜಸ್ವ ನಿರೀಕ್ಷಕರ ಕಚೇರಿ ಒಂದೇ ಜಾಗದಲ್ಲಿದೆ.
ಅಭಿವೃದ್ಧಿಗೊಳಿಸಿ: ಮಿನಿ ವಿಧಾನಸೌಧ ಪಕ್ಕದಲ್ಲಿ ಇದ್ದು ಅತಿ ಹೆಚ್ಚು ಜನ ರಾಜಸ್ವ ನಿರೀಕ್ಷಕರ ಕಚೇರಿಗೆ ಬಂದು ಹೋಗುತ್ತಾರೆ. ಲೋಕೋಪಯೋಗಿ ಇಲಾಖೆ ವಸತಿ ಗೃಹವಾಗಿರುವುದರಿಂದ ಇಲಾಖೆ ಹೊಸ ವಸತಿ ಗೃಹ ಅಭಿವೃದ್ಧಿಗೊಳಿಸಲು ನಾಗರಿಕರು ಆಗ್ರಹಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಕಟ್ಟಡ ಶಿಥಿಲವಾಗಿದ್ದು ಸರ್ಕಾರದಿಂದ ಅನುದಾನ ಲಭ್ಯವಾದರೆ ಕಾಮಗಾರಿ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
● ರವೀಂದ್ರಸಿಂಗ್, ಕಾರ್ಯ ಪಾಲಕ ಸಹಾಯಕ ಅಭಿಯಂತರ ಲೋಕೋಪಯೋಗಿ ಇಲಾಖೆ
ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರ ಕಚೇರಿ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಣ್ಣ ಸುಣ್ಣ ಮತ್ತು ಶಿಥಿಲವಾಗಿರುವ ಕಡೆ ಕಾಮಗಾರಿ ಮಾಡಿಸಲು ಸೂಚಿಸಲಾಗಿದೆ.
● ಶಿವರಾಜ್ ತಹಶೀಲ್ದಾರ್
ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರ ಕಚೇರಿಗೆ ಹೊಸ ಕಟ್ಟಡ ನಿರ್ಮಾಣವಾಗಬೇಕು. ಶಿಥಿಲಾವಸ್ಥೆಯಲ್ಲಿ ಇರುವ ಕಟ್ಟಡದಲ್ಲೇ ಅಧಿಕಾರಿಗಳು ಭಯದಿಂದ ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪಾಯ ಸಂಭವಿಸುವ ಮುನ್ನ ಸರ್ಕಾರ, ಅಧಿಕಾರಿಗಳು ಎಚ್ಚೆತ್ತು ಕಚೇರಿ ಬದಲಾಯಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.
● ರವಿಕುಮಾರ್, ನಾಗರಿಕ
– ಎಸ್.ಮಹೇಶ್