Advertisement

ಪ್ರಕೃತಿ ವಿಕೋಪಗಳಿಗೆ ಪರಿಹಾರ ನೀಡುವ ಕಚೇರಿಯೇ ಅಪಾಯದಲ್ಲಿ!

02:30 AM Jun 06, 2018 | Team Udayavani |

ಉಪ್ಪಿನಂಗಡಿ: ಎಲ್ಲ ವರ್ಗದ ಜನರಿಗೆ ಸರಕಾರದ ಪರಿಹಾರ ಒದಗಿಸುವ ಕಂದಾಯ ಇಲಾಖೆ ನಾಡ ಕಚೇರಿ ಕಟ್ಟಡ ಅಪಾಯದ ಅಂಚಿನಲ್ಲಿದ್ದು, ಇದರ ಕೂಗು ಕೇಳುವವರು ಇದ್ದೂ ಇಲ್ಲದಂತಾಗಿದೆ. ಪುತ್ತೂರು ಅಸುಪಾಸಿನ 20 ಗ್ರಾಮಗಳ ಒಳಗೊಂಡು ಹೋಬಳಿ ಮಟ್ಟದ ನಾಡಕಚೇರಿಯಾಗಿದ್ದು ಕೊಡಿಪಾಡಿ, ಪಡ್ಗನ್ನೂರು, ಬನ್ನೂರು, ಚಿಕ್ಕಮಂಡನೂರು, ಕೊಡಿಂಬಾಡಿ, ಬೆಳ್ಳಿಪಾಡಿ, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ಗೋಳಿತೊಟ್ಟು, ಅಲಂತಾಯ, ಕೊಣಾಲು, ಸಿರಿಬಾಗಿಲು, ಇಚಿಲಂಪಾಡಿ, ಶಿರಾಡಿ, ಉದನೆ, ನೆಲ್ಯಾಡಿ, ಕೌಕ್ರಾಡಿ ಪ್ರದೇಶಗಳನ್ನು ಒಳಗೊಂಡಿದೆ. ಮುಂಗಾರು ಆರಂಭಗೊಳ್ಳುವ ನಿರೀಕ್ಷೆಯಲ್ಲಿದ್ದು, ಈ ಕಚೇರಿಯ ಛಾವಣಿ ಸಂಪೂರ್ಣ ಬಿರುಕು ಬಿಟ್ಟಿದೆ. ಗೋಡೆಗಳೂ ಶಿಥಿಲಗೊಂಡಿವೆ.

Advertisement

ಕಂಟ್ರೋಲ್‌ ರೂಮ್‌
ಪ್ರತಿ ವರ್ಷ ಮಳೆಯಿಂದ ನೆರೆಪೀಡಿತ ಪ್ರದೇಶವೆಂದು ಅಧಿಕಾರಿಗಳು ತಿಳಿದು ಇದೇ ಕಚೇರಿಯಲ್ಲೇ ಕಂಟ್ರೋಲ್‌ ರೂಮ್‌ ತೆರೆಯುವುದು ವಾಡಿಕೆ. ಇಲ್ಲಿ ಒಬ್ಬ ಗ್ರಾಮ ಕರಣಿಕರು ಹಾಗೂ ಗ್ರಾಮ ಸಹಾಯಕರನ್ನು ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಆದರೆ, ಈ ಬಾರಿ ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಜೀವ ವಿಮೆ ಮಾಡಿಸಿಕೊಳ್ಳಬೇಕಾದೀತು. ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವ ಕಂದಾಯ ಇಲಾಖೆಯ ಕಟ್ಟಡವೇ ಬಿದ್ದು ಅಪಾಯ ಹಾಗೂ ನಷ್ಟ ಸಂಭವಿಸಿದರೆ ಯಾರನ್ನು ಹೊಣೆ ಮಾಡಲು ಸಾಧ್ಯ ಎಂದು ಸ್ಥಳೀಯರು ಹೇಳುತ್ತಿದ್ದಾರೆ.


ಕಳ್ಳಕಾಕರ ಭೀತಿ

ಈ ನಾಡಕಚೇರಿ ಮುಂಬಾಗಿಲು ಹಾಗೂ ಹಿಂಬಾಗಿಲು ಮುರಿದಿವೆ. ಹಲಗೆಗಳ ತುಂಡುಗಳಿಂದ ತೇಪೆ ಹಾಕಲಾಗಿದೆ. ರಾಜಬೀದಿ ಪಕ್ಕದಲ್ಲೇ ಇದ್ದು, ಪೊಲೀಸ್‌ ಠಾಣೆಯೂ ಇದೆ. ಆದರೂ ಕಳ್ಳರು ಲಗ್ಗೆಯಿಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಕುರಿತು ತಾಲೂಕು ದಂಡಾಧಿಕಾರಿಗಳು ಗ್ರಾ.ಪಂ. ಹೊಸ ಕಟ್ಟಡದಲ್ಲಿ ಬದಲಿ ವ್ಯವಸ್ಥೆಗಾಗಿ ಸ್ಥಳಾವಕಾಶ ನೀಡುವಂತೆ ಮನವಿ ಮಾಡಿದ್ದರು. ಸ್ಥಳಾವಕಾಶ ಒದಗಿಸುವ ಭರವಸೆಯನ್ನು ಪಂಚಾಯತ್‌ ಆಡಳಿ ತವೂ ನೀಡಿತ್ತು. ಆದರೂ ಕಚೇರಿ ಈತನಕ ಸ್ಥಳಾಂತರಗೊಂಡಿಲ್ಲ. ಛಾವಣಿಗೆ ಪ್ಲಾಸ್ಟಿಕ್‌ ಹೊದಿಕೆ ಅಳವಡಿಸುವ ಮೂಲಕ ಈ ಕಟ್ಟಡ ಅಪಾಯದಲ್ಲಿದೆ ಎಂದು ಕಂದಾಯ ಇಲಾಖೆಯೇ ತೋರಿಸುತ್ತಿದೆ. ಪುತ್ತೂರು ಸಹಾಯಕ ಆಯುಕ್ತರು ಕಚೇರಿಗೆ ಭೇಟಿ ನೀಡಿಲ್ಲ. ಭದ್ರತೆಯ ಸವಾಲಿನೊಂದಿಗೇ ಸಿಬಂದಿ ಕರ್ತವ್ಯ ನಿರ್ವಹಿಸಬೇಕಾಗಿದೆ.


ದಾಖಲೆಗಳು ಸೇಫಾ?

ಸುಮಾರು 50 ವರ್ಷಗಳಿಂದ ಈ ಕಟ್ಟಡವಿದೆ. ಇಲ್ಲಿ ಪಹಣಿಪತ್ರ, ಜಾತಿ, ಆದಾಯ ಪ್ರಮಾಣಪತ್ರಗಳ ಸೇವೆ ನೀಡುವ ಕಂಪ್ಯೂಟರ್‌ ಉಪಕರಣಗಳು, ದಾಖ ಲಾತಿಗಳು, ಕಡತಗಳನ್ನು ಮಳೆಯ ತೇವಾಂಶದಿಂದ ರಕ್ಷಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಉದ್ಭವಿಸಿದೆ.


ಅರಿವಿಗೆ ಬಂದಿದೆ

ನಾಡಕಚೇರಿಯ ಸ್ಥಿತಿಗತಿಗಳ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದ್ದು, ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದೇನೆ. ಅಲ್ಲದೆ, ಕಟ್ಟಡ ಬೀಳುವ ಹಂತದಲ್ಲಿರುವುದು ಅರಿವಿಗೆ ಬಂದಿದೆ. ಇದರಿಂದ ಸ್ಥಳೀಯ ಪಂಚಾಯತ್‌ ನೊಂದಿಗೆ ಪತ್ರ ಮುಖೇನ ಪಂಚಾಯತ್‌ ಕಟ್ಟಡದಲ್ಲಿ ಸ್ಥಳಾವಕಾಶವನ್ನು ಕೋರಿದ್ದೇನೆ. ಸ್ಥಳಾವಕಾಶ ಒದಗಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಬಂದೊಡನೆ ಸ್ಥಳಾಂತರಿಸಿ, ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.
– ಬಿ. ಅನಂತಶಂಕರ, ತಾಲೂಕು ದಂಡಾಧಿಕಾರಿ

Advertisement

— ಎಂ.ಎಸ್‌. ಭಟ್‌ 

Advertisement

Udayavani is now on Telegram. Click here to join our channel and stay updated with the latest news.

Next