ಕೆಜಿಎಫ್: ಆಡಳಿತ ಪಕ್ಷದ ಶಾಸಕರು ಎಷ್ಟು ಕೇಳಿದರೂ ಆಡಳಿತದಲ್ಲಿರುವ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ, ವಿರೋಧ ಪಕ್ಷದ ಶಾಸಕರು ಕಣ್ಣೀರಲ್ಲ, ರಕ್ತ ಸುರಿಸಿದರೂ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಶಾಸಕಿ ರೂಪಕಲಾ ಆರೋಪಿಸಿದರು.
ನಗರದ ಹೊರವಲಯದ ಬೆಮೆಲ್ ಕಾರ್ಖಾನೆ ಬಳಿ ನಡೆಯುತ್ತಿದ್ದ ಡಬಲ್ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು. ಪ್ರತಿಯೊಂದಕ್ಕೂ ಸರ್ಕಾರದಲ್ಲಿ ಕಾಡಿ ಬೇಡಿಕೊಂಡರೂ ಅನುದಾನವನ್ನು ಬಿಡುಗಡೆ ಮಾಡುವ ಗೋಜಿಗೇ ಹೋಗುವುದಿಲ್ಲ. ಈ ಸರ್ಕಾರದಲ್ಲಿ ಅನುದಾನಗಳನ್ನು ತೆಗೆದುಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಹೀಗಿರುವಾಗಿ ಕ್ಷೇತ್ರದಲ್ಲಿರುವ ಒಂದೇ ಒಂದು ಸಾರ್ವಜನಿಕ ವಲಯದ ಬೆಮೆಲ್ ಉದ್ದಿಮೆಯವರು 20-25 ವರ್ಷಗಳಿಂದ ಸುಮಾರು 45 ಕೋಟಿ ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಪಾವತಿಸುವಂತೆ ಕೇಳಿದರೆ ನ್ಯಾಯಾಲಯಕ್ಕೆ ಹೋಗಿದ್ದು, ನ್ಯಾಯಾಲಯವೂ ಸಹ ತೀರ್ಪು ನಮ್ಮ ಪರವಾಗಿ ನೀಡಿ, ತೆರಿಗೆ ಪಾವತಿ ಮಾಡುವಂತೆ ಆದೇಶಿಸಿದ್ದರೂ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಹರಿಹಾಯ್ದರು.
ನಗರಸಭೆಗೆ ಪೌರಾಯುಕ್ತರಾಗಿ ಯಾರೇ ನೂತನವಾಗಿ ಬಂದು ಅಧಿಕಾರ ವಹಿಸಿಕೊಂಡರೂ ಅವರೆಲ್ಲರೂ ಬಂದು ಬೆಮೆಲ್ ಆಡಳಿತ ಮಂಡಳಿಯವರೊಂದಿಗೆ ಕಂತುಗಳಲ್ಲಿ ಬಾಕಿ ಇರುವ ತೆರಿಗೆ ಹಣವನ್ನು ಪಾವತಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಡ್ಡಿ ಲೆಕ್ಕ ಹಾಕಿದರೆ ಸುಮಾರು 75 ಕೋಟಿಯಷ್ಟಾಗುವುದರಿಂದ ಬಡ್ಡಿಯನ್ನು ಮನ್ನಾ ಮಾಡುತ್ತೇವೆ ಎಂದು ತಿಳಿಸಿದರೂ ಇದುವರೆಗೆ ಬಿಡಿಗಾಸು ತೆರಿಗೆ ಹಣವನ್ನು ಕಟ್ಟಿಲ್ಲ ಎಂದರು.
ಸಿಎಸ್‌ಆರ್ ಯೋಜನೆಯಡಿಯಲ್ಲಿ ಬೇರೆ ಎಲ್ಲೆಲ್ಲೋ ಅಭಿವೃದ್ಧಿ ಕಾಮಗಾರಿಗಳನ್ನು ಬೆಮೆಲ್‌ನವರು ಮಾಡುತ್ತಾರೆ ಆದರೆ ಕೆಜಿಎಫ್ ನಗರಕ್ಕೆ ಅವರ ಕೊಡುಗೆ ಏನು? ಪ್ರತಿ ವರ್ಷ ಬರುವ ಲಾಭದಿಂದ ಶೇ. 10 ಇಲ್ಲವೇ ಶೇ. 15 ಹಣವನ್ನು ಮೀಸಲಿರಿಸಿ ಕೆಜಿಎಫ್ ನಗರದ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಏಕೆ ಬಳಸಿಲ್ಲ? ಕಾರ್ಖಾನೆಯಲ್ಲಿ ದುಡಿವ ಕಾರ್ಮಿಕರು ಇದೆಲ್ಲವನ್ನೂ ಪ್ರಶ್ನಿಸಬೇಕು ಎಂದರು.
ಬೆಮೆಲ್‌ನವರಲ್ಲದೇ ಬಿಜಿಎಂಎಲ್‌ನವರು ಕಳೆದ 25 ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಕಟ್ಟಬೇಕಾಗಿರುವ ರಾಯಲ್ಟಿ ಹಣವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದು, ಇದನ್ನು ಪಾವತಿಸಿದಲ್ಲಿ 100 ವರ್ಷಗಳ ಕಾಲ ಗಣಿಯಲ್ಲಿ ದುಡಿದ ಕಾರ್ಮಿಕರಿಗೆ 25 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ 52 ಕೋಟಿ ರೂ. ಹಣವನ್ನು ಎಲ್ಲರಿಗೂ ಪಾವತಿಸಬಹುದಾಗಿತ್ತು ಎಂದರು. ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಸದಸ್ಯರಾದ ಮಾಣಿಕ್ಯಂ, ಸನಾ, ಶ್ರೀನಿವಾಸ್ ಇತರರು ಹಾಜರಿದ್ದರು.