ನವದೆಹಲಿ:ಕಪ್ಪು ಹಣದ ಹಾವಳಿ ತಡೆಗಟ್ಟಲು ನೋಟು ನಿಷೇಧದ ಕ್ರಮ ಕೈಗೊಂಡಿದ್ದ ಕೇಂದ್ರ ಸರಕಾರ ಇದೀಗ ಭಾರೀ ಪ್ರಮಾಣದಲ್ಲಿ ಚಿನ್ನ ಇಟ್ಟುಕೊಂಡ ಕಾಳಧನಿಕರನ್ನು ಮಟ್ಟಹಾಕಲು ಗೋಲ್ಡ್ ಅಮ್ನೆಸ್ಟಿ(ಚಿನ್ನ ಕ್ಷಮಾದಾನ) ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ ಎಂಬ ವರದಿಯನ್ನು ಹಣಕಾಸು ಸಚಿವಾಲಯ ತಳ್ಳಿಹಾಕಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಕೇಂದ್ರ ಸರಕಾರ ಚಿನ್ನ ಕ್ಷಮಾದಾನ ಯೋಜನೆ ಜಾರಿಗೆ ತರಲು ಸಿದ್ದತೆ ನಡೆಸುತ್ತಿದೆ ಎಂಬ ಕೆಲವು ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ, ಚಿನ್ನ ಕ್ಷಮಾದಾನ ಯೋಜನೆಯನ್ನು ಸಕರಾರ ಪರಿಗಣಿಸುವುದಿಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಯಾವುದೇ ದಾಖಲೆ ಇಲ್ಲದೇ ಅಘೋಷಿತವಾಗಿ ಚಿನ್ನ ಕೂಡಿಟ್ಟ (ವೈಯಕ್ತಿಕ) ಕಾಳ ಧನಿಕರನ್ನು ಮಟ್ಟಹಾಕಲು ಈ ಯೋಜನೆ ತರಲು ಕೇಂದ್ರ ಮುಂದಾಗಿದೆ ಎಂದು ವರದಿಯಾಗಿತ್ತು.
ಒಂದು ಅಂದಾಜಿನ ಪ್ರಕಾರ ಭಾರತೀಯರಲ್ಲಿ ಸುಮಾರು 25ಸಾವಿರ ಟನ್ ಗಳಷ್ಟು ಚಿನ್ನದ ದಾಸ್ತಾನು ಇದೆ ಎಂದು ಹೇಳಲಾಗಿದೆ. ಈ ಚಿನ್ನದ ಸದ್ಯದ ಮಾರುಕಟ್ಟೆಯ ಪ್ರಕಾರ 1.25 ಟ್ರಿಲಿಯನ್ ಡಾಲರ್ ನಷ್ಟಾಗಲಿದೆ ಎಂದು ವರದಿ ಹೇಳಿದೆ. ಭಾರತ ಪ್ರತಿವರ್ಷ 40 ಬಿಲಿಯನ್ ಡಾಲರ್ ಮೌಲ್ಯದ 800 ಟನ್ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.
ಈ ನಿಟ್ಟಿನಲ್ಲಿ ಸರಕಾರ ಗೋಲ್ಡ್ ಅಮ್ನೆಸ್ಟಿ ಯೋಜನೆ ಮೂಲಕ ಎಲ್ಲಾ ಸ್ಟೇಕ್ ಹೋಲ್ಡರ್ಸ್ ಅನ್ನು ಒಂದೆಡೆ ತರಬೇಕಾಗಿದೆ. ಇಂತಹ ಕ್ಷಮಾದಾನ ಯೋಜನೆ ಘೋಷಣೆಯಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದು ಇಂಡಿಯನ್ ಬುಲ್ಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್ ವಕ್ತಾರ ಎಸ್ ಕೆ ಜಿಂದಾಲ್ ಖಾಸಗಿ ಆಂಗ್ಲವಾಹಿನಿಗೆ ತಿಳಿಸಿದ್ದಾರೆ.
ಈಗಾಗಲೇ ಹಲವು ಬಾರಿ ರಫ್ತು ಆಮದಿನ ಮೇಲಿನ ಸುಂಕವನ್ನು ಏರಿಕೆ ಮಾಡಿತ್ತು. ಜಗತ್ತಿನಲ್ಲಿಯೇ ಭಾರತ ಹಳದಿ ಲೋಹದ ಬಹುದೊಡ್ಡ ಖರೀದಿದಾರ ದೇಶವಾಗಿದೆ. ಮೊದಲ ಸ್ಥಾನದಲ್ಲಿ ಚೀನಾ ಇದೆ.