ರಾಯಚೂರು: ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ವಿದ್ಯಾವಂತ ಯುವಕರು ಸೂಕ್ತ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಆದರೆ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಟೀಕೆಗಳಲ್ಲಿ ಮಗ್ನವಾಗಿವೆ ಎಂದು ಯುವಜನ ಉದ್ಯೋಗಕ್ಕಾಗಿ ವೇದಿಕೆ ರಾಜ್ಯ ಸಂಚಾಲಕ ವಾಸು ಎಚ್.ವಿ. ಆರೋಪಿಸಿದರು.
ಉದ್ಯೋಗಕ್ಕಾಗಿ ಯುವಜನರ ವೇದಿಕೆಯಿಂದ ನಗರದ ಸರ್ಕಾರಿ ನೌಕರರ ಸಂಘದ ಸ್ಪಂದನಾ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಯುವಜನ ಉದ್ಯೋಗಕ್ಕಾಗಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅದಕ್ಕೂ ಮುಂಚೆ ಯಾದಗಿರಿಯಿಂದ ನಗರಕ್ಕೆ ಆಗಮಿಸಿದ ಯುವಜನ ಉದ್ಯೋಗಕ್ಕಾಗಿ ವೇದಿಕೆ ಜಾಥಾಕ್ಕೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಗರದ ಪ್ರಮುಖ ಬೀದಿಗಳ ಮೂಲಕ ಜಾಥಾ ನಡೆಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಲಾಯಿತು.
ಇಂದು ವಿದ್ಯಾವಂತರಿಗೆ ಸೂಕ್ತ ಉದ್ಯೋಗಾವಕಾಶಗಳೇ ಇಲ್ಲ. ಆದರೆ, ಚುನಾವಣೆ ಪೂರ್ವದಲ್ಲಿ ಉದ್ಯೋಗ ಸೃಷ್ಟಿಗೆ ಭರವಸೆ ನೀಡಿದ್ದ ಸರ್ಕಾರಗಳು ಈಗ ಯುವ ಸಮೂಹವನ್ನು ಸಂಪೂರ್ಣ ಕಡೆಗಣಿಸಿವೆ. ಇನ್ನು ಲಕ್ಷಾಂತರ ಜನ ಗುತ್ತಿಗೆ ಪದ್ಧತಿಯಡಿ ದುಡಿಯುತ್ತಿದ್ದು, ಅವರಿಗೆ ಕಾನೂನಾತ್ಮಕ ಸೌಲಭ್ಯಗಳೇ ಸಿಗುತ್ತಿಲ್ಲ. ಕಾರ್ಮಿಕರಿಗೆ ಸೇವಾ ಭದ್ರತೆಯೇ ಇಲ್ಲದಾಗಿದೆ ಎಂದು ದೂರಿದರು.
ದೇಶದ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಕಲ್ಪಿಸುವ ಹಾಗೂ ಗುತ್ತಿಗೆ ನೌಕರರಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗಕ್ಕಾಗಿ ಯುವಜನ ಎಂಬ ವಾಕ್ಯಘೋಷಣೆಯೊಂದಿಗೆ ರಾಜ್ಯಾದ್ಯಂತ ಜಾಥಾ ನಡೆಸಲಾಗುತ್ತಿದೆ. ನಮ್ಮ ತಂಡ ಯಾದಗಿರಿಯಿಂದ ಆರಂಭಿಸಿದರೆ, ಮತ್ತೂಂದು ತಂಡ ಚಾಮರಾಜನಗರದಿಂದ ಆರಂಭಿಸಿದ್ದು, ಫೆ.16ರಂದು ಬೆಂಗಳೂರಿಗೆ ತಲುಪಲಿವೆ ಎಂದು ವಿವರಿಸಿದರು.
ಎಪಿಎಂಸಿ ಗುತ್ತಿಗೆ ನೌಕರರ ಸಂಘದ ಮುಖಂಡ ಶರಣಬಸವ ಮಾತನಾಡಿ, ಎಪಿಎಂಸಿ ಗುತ್ತಿಗೆ ನೌಕರರಿಗೆ ಕನಿಷ್ಠ ಸೌಲಭ್ಯಗಳು ಇಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಕೆಲಸದಿಂದ ತೆಗೆದುಹಾಕುವಂಥ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಂಘಟಿತವಾಗಿ ಹೋರಾಡಿದರೆ ಮಾತ್ರ ಸರ್ಕಾರಗಳ ಗಮನ ಸೆಳೆಯಲು ಸಾಧ್ಯ ಎಂದರು.
ವೇದಿಕೆ ಜಿಲ್ಲಾ ಸಂಚಾಲಕ ಲಕ್ಷ್ಮಣ ಮಂಡಲಗೇರಾ ಪ್ರಾಸ್ತಾವಿಕ ಮಾತನಾಡಿದರು. ಹೈ-ಕ ವಲಯ ಸಂಚಾಲಕ ರಾಜೇಂದ್ರ ರಾಜವಾಳ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮುಖಂಡ ಹೇಮಂತ, ಕರ್ನಾಟಕ ಜನಶಕ್ತಿ ಮುಖಂಡರು, ಮಾರೆಪ್ಪ ಹರವು, ಆಂಜನೇಯ, ಬಸವರಾಜ ಗಲಗಿನ ಸೇರಿ ಅನೇಕರು ಪಾಲ್ಗೊಂಡಿದ್ದರು.