ಅಳ್ನಾವರ: ನೂತನ ತಾಲೂಕುಗಳ ರಚನೆ ಕಾಟಾಚಾರಕ್ಕೆ ಎಂಬಂತಾಗದೆ ಅವುಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವತ್ತ ಸರ್ಕಾರ ಗಮನ ಹರಿಸಬೇಕು. ಜನರಿಗೆ ಸರ್ಕಾರಿ ಸೇವೆ ಸಮರ್ಪಕವಾಗಿ ದೊರೆಯುವಂತೆ ಮಾಡಬೇಕೆಂದು ಕಲಘಟಗಿ ಶಾಸಕ ಸಿ.ಎಮ್. ನಿಂಬಣ್ಣವರ ಒತ್ತಾಯಿಸಿದರು.
ಪಟ್ಟಣದಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನೂತನ ಅಳ್ನಾವರ ತಾಲೂಕು ಕೇಂದ್ರದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ಕಚೇರಿ ಹೊರತುಪಡಿಸಿ ಬೇರೆ ಇನ್ನಾವುದೇ ಕಚೇರಿಗಳನ್ನು ಪ್ರಾರಂಭಿಸುವ ಕಡೆಗೆ ಸರ್ಕಾರ ಗಮನ ಹರಿಸಿಲ್ಲ ಎಂದು ಆರೋಪಿಸಿದರು.
ತಾಲೂಕು ಮಟ್ಟದ ಕಚೇರಿಗಳು ಇಲ್ಲದೆ ಸರ್ಕಾರದ ಯೋಜನೆಗಳು ಜನರಿಗೆ ತಲುಪುವುದಾದರೂ ಹೇಗೆ? ಅತಿ ಮುಖ್ಯವಾಗಿ ರೈತರಿಗೆ ಸಕಾಲದಲ್ಲಿ ಪಹಣಿ ಪತ್ರಿಕೆಗಳು ದೊರೆಯುತ್ತಿಲ್ಲ. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳು ಸಿಗುತ್ತಿಲ್ಲ. ಸಿಬ್ಬಂದಿ ಕೊರತೆ ಎಲ್ಲ ಇಲಾಖೆಗಳಲ್ಲಿ ಕಂಡು ಬರುತ್ತಿದೆ. ದಿನವಿಡೀ ಸರದಿಯಲ್ಲಿ ನಿಂತರೂ ಉತಾರಗಳು ದೊರೆಯದೆ ರೈತರು ಪರದಾಡುತ್ತಿದ್ದಾರೆ. ಇದರತ್ತ ಜಿಲ್ಲಾಧಿಕಾರಿ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಅಳ್ನಾವರ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಜಾಗೆ ಗುರುತಿಸಿ ಕೂಡಲೆ ಕೆಲಸ ಪ್ರಾರಂಭಿಸಬೇಕು. ಇದಕ್ಕಾಗಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಮೀತಿ ಮೀರಿದೆ. 2017ರಲ್ಲಿ ಕಾಳಿ ನದಿ ಯೋಜನೆ ಮಂಜೂರಾಗಿದ್ದರೂ ಇನ್ನುವರೆಗೂ ಕಾಮಗಾರಿ ವಿದ್ಯುಕ್ತವಾಗಿ ಕಾರ್ಯಾರಂಭವಾಗಿಲ್ಲ. ಆಮೆ ಗತಿಯಲ್ಲಿ ಕೆಲಸಗಳು ನಡೆಯುತ್ತಿವೆ. ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.
ಬೆಳೆ ವಿಮೆ: ಮಳೆಗಾಲ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ರೈತರು ಬೆಳೆಗಳಿಗೆ ವಿಮೆ ಮಾಡಿಸಲು ಬ್ಯಾಂಕ್‌ಗಳಿಗೆ ಅಲೆಯುತ್ತಿದ್ದರೂ ವಿಮೆ ಕಂತು ತುಂಬಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕರು ತಿಳಿಸಿದರು.
ಪಟ್ಟಣದ ಕುಡಿಯುವ ನೀರಿನ ಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗುತ್ತಿಗೆದಾರರ ಮೇಲೆ ನಿಗಾ ವಹಿಸಿ ಗುಣಮಟ್ಟದ ಕಾಮಗಾರಿ ಮಾಡಿಸಲು ಜಲಮಂಡಳಿ ಮತ್ತು ಪಪಂ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.
ಶಂಕರ ಬಸವರೆಡ್ಡಿ, ಲಿಂಗರಾಜ ಮೂಲಿಮನಿ, ಶಿವಾಜಿ ಡೊಳ್ಳಿನ, ಅನಂತ ರವಳಪ್ಪನವರ, ಪ್ರವೀಣ ಪವಾರ, ಅಶೋಕ ಬಸಣ್ಣವರ ಮುಂತಾದವರಿದ್ದರು.