Advertisement

ಸರ್ಕಾರದ ಹಣ ಪೋಲಾಗಲು ಬಿಡುವುದಿಲ್ಲ

12:36 PM Sep 13, 2019 | Suhan S |

ಕೋಲಾರ: ನಗರಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಗರೋತ್ಥಾನ ಮತ್ತು ಅಮೃತ ಸಿಟಿ ಯೋಜನೆ ಕಾಮಗಾರಿಗಳಲ್ಲಿ ಅಕ್ರಮ ನಡೆದರೆ ಅಧಿಕಾರಿಗಳು, ಗುತ್ತಿಗೆದಾರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ಎಚ್ಚರಿಸಿದರು.

Advertisement

ನಗರದಲ್ಲಿ ಗುರುವಾರ ಕೋಲಾರ ವಿವಿಧ ಭಾಗಗಳಲ್ಲಿ ಅಧಿಕಾರಿಗಳೊಂದಿಗೆ ಸಂಚರಿಸಿ ಅಮೃತ್‌ ಸಿಟಿ ಮತ್ತು ನಗರೋತ್ಥಾನದ ಅಡಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಈಗ ಆಗಿರುವ ಕಾಮಗಾರಿಗಳು ತಮಗೆ ತೃಪ್ತಿ ತಂದಿದೆ. ಆದರೆ, ಗುಣಮಟ್ಟವನ್ನು ಮತ್ತಷ್ಟು ಕಾಪಾಡಿಕೊಳ್ಳಬೇಕು. ಅದರಲ್ಲಿ ಯಾವುದೇ ರಾಜೀ ಇಲ್ಲ. ಕಾಮಗಾರಿಗಳಲ್ಲಿ ಹಣ ಪೋಲಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಯೋಜನೆಯಂತೆ ನಡೆದಿಲ್ಲ: ಅಮೃತ್‌ ಯೋಜನೆಯಲ್ಲಿ 96 ಕೋಟಿ ರೂ. ಬಂದಿದೆ. ಅದರಲ್ಲಿ ಯಾವ ಯಾವ ಕೆಲಸಗಳು ಆಗಿವೆ ಎಂಬುದರ ಪರಿಶೀಲನೆ ನಡೆಸಲು ಇಂದು ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಣೆ ಮಾಡಿದ್ದೇನೆ. ಆದರೆ, ನಗರದಲ್ಲಿ 21 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಬೇಕೆಂಬುದು ಯೋಜನೆಯಲ್ಲಿದೆ. ಆದರೆ, ಇಲ್ಲಿ ನಡೆದಿರುವುದು ಕೇವಲ 4 ಕಿ.ಮೀ. ಮಾತ್ರ ಎಂದರು.

ಲೋಪವಾದ್ರೆ ಕ್ರಮ: ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶ್ರದ್ಧೆಯಿಂದ ಕೆಲಸ ಮಾಡಬೇಕು, ಜನಪ್ರತಿನಿಧಿಗಳು ತಾವು ಮಾಡುತ್ತಿರುವ ಕಾಮಗಾರಿಗಳ ಕಡೆಗೆ ತಿರುಗಿ ನೋಡುವುದಿಲ್ಲ ಎಂಬ ಮನಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ. ಆದರೆ, ನಾನು ಅಂತಹವನಲ್ಲ ಎಲ್ಲವನ್ನೂ ಪರಿಶೀಲಿಸುತ್ತೇನೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ಲೋಪ ಆಗಿರುವುದು ಕಂಡು ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದಿಂದ ಸಾಕಷ್ಟು ಹಣ ನಗರದ ಅಭಿವೃದ್ಧಿಗೆ ಬಿಡುಗಡೆ ಆಗುತ್ತಿದ್ದರೂ ಕೋಲಾರದ ಚಿತ್ರಣ ಬದಲಾಗುತ್ತಿಲ್ಲ. ಜಿಲ್ಲಾ ಕೇಂದ್ರ ಎನಿಸಿಕೊಂಡಿ ದ್ದರೂ ಇವತ್ತಿಗೂ ಹಳ್ಳಿಯಂತೆಯೇ ಇದೆ. ಜಿಲ್ಲಾ ಕೇಂದ್ರದಲ್ಲಿ ಮೂಲ ಸೌಲಭ್ಯ ಕಾಮಗಾರಿ ನಡೆಯಬೇಕು. ಅದಕ್ಕೆ ಅಧಿಕಾರಿಗಳು ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕು. ಜಿಲ್ಲಾ ಕೇಂದ್ರ ಕೋಲಾ ರದಲ್ಲಿ ಬೀದಿ ದೀಪ, ಕಸದ ಸಮಸ್ಯೆ, ಒಳಚರಂಡಿ, ಕುಡಿಯುವ ನೀರು ಮುಂತಾದ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

Advertisement

ಟ್ಯಾಂಕರ್‌ ಹಾವಳಿ ಹೆಚ್ಚಳ: ಕುಡಿಯುವ ನೀರಿಗಾಗಿ ಅಮೃತ್‌ ಯೋಜನೆಯಲ್ಲಿ 16 ಕೋಟಿ ರೂ. ಮಂಜೂರು ಮಾಡಿದ್ದರೂ ನಿರೀಕ್ಷಿತ ಪ್ರಮಾಣ ದಲ್ಲಿ ನೀರಿನ ಸಮಸ್ಯೆಗಳು ಬಗೆಹರಿದಿಲ್ಲ. ನಗರದ ಯಾವ ಭಾಗಕ್ಕೆ ಕಾಲಿಟ್ಟರೂ ನೀರಿನದೇ ದೊಡ್ಡ ಸಮಸ್ಯೆ, ನಗರಸಭೆಯಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಕೊಡದೆ ಇರುವುದರಿಂದ ನಗರದಲ್ಲಿ ಟ್ಯಾಂಕರ್‌ ಹಾವಳಿ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆ ಇತ್ಯರ್ಥ: ಜಿಲ್ಲೆಯಲ್ಲಿ ಮಳೆ ಇಲ್ಲದೆ ಇರುವುದರಿಂದ ಅಂತರ್ಜಲ ಕುಸಿದಿದೆ, ಇದರಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ, ಆದರೂ ನಗರದ ಜನತೆ ಹೆದರುವ ಪ್ರಶ್ನೆ ಇಲ್ಲ ಟ್ಯಾಂಕರ್‌ ಮೂಲಕ ಮತ್ತು ನಲ್ಲಿಗಳ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ರಸ್ತೆ ಅಭಿವೃದ್ಧಿ: ನಗರದಲ್ಲಿ ಒಳಚರಂಡಿ ಪೈಪ್‌ಗ್ಳ ಅಳವಡಿಕೆ ಮಾಡಲು ರಸ್ತೆ ಅಗೆದಿರುವುದರಿಂದ ರಸ್ತೆಗಳು ಹದಗೆಟ್ಟಿವೆ, ರಸ್ತೆಯಲ್ಲಿ ವಾಹನಗಳು ಮತ್ತು ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಇವೆ, ಅಧಿಕಾರಿಗಳು ಮತ್ತು ಸಂಬಂಧ ಪಟ್ಟ ಗುತ್ತಿಗೆದಾರರು ಅಗತ್ಯ ಕ್ರಮ ಕೈಗೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ರಸ್ತೆ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಕೋಲಾರ ನಗರದ ಕ್ಲಾಕ್‌ ಟವರ್‌ನಿಂದ ಬಂಗಾರಪೇಟೆ ಸರ್ಕಲ್ ಮತ್ತು ಬಂಗಾರಪೇಟೆ ಸರ್ಕಲ್ನಿಂದ ಶ್ರೀನಿವಾಸಪುರ ಸರ್ಕಲ್ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ, ಈ ರಸ್ತೆಗಳಲ್ಲಿ ಒತ್ತುವರಿ ಆಗಿರುವ ಜಾಗವನ್ನು ಸರ್ಕಾರದ ಸೂಚನೆಯ ಮೇರೆ ತೆರವು ಮಾಡಬೇಕು, ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಸಹಕಾರ ಕೊಡಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ಪ್ರಭಾರಿ ಆಯುಕ್ತ ಸುಧಾಕರಶೆಟ್ಟಿ, ನಗರಸಭೆ ಕೋಶಾಧಿಕಾರಿ ರಂಗಸ್ವಾಮಿ , ಬಿಜೆಪಿ ಮುಖಂಡರಾದ ಓಂಶಕ್ತಿ ಚಲಪತಿ, ಗಾಂಧಿನಗರ ನಾರಾಯಣಸ್ವಾಮಿ, ವಿಜಯಕುಮಾರ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next